ADVERTISEMENT

ಎದೆಹಾಲು ಉಣಿಸಲು ಮಹಿಳೆಯರಿಗೆ ತಾಜ್‌ಮಹಲ್‌ನಲ್ಲಿ ಪ್ರತ್ಯೇಕ ಕೊಠಡಿ 

ಏಜೆನ್ಸೀಸ್
Published 22 ಮೇ 2019, 6:15 IST
Last Updated 22 ಮೇ 2019, 6:15 IST
   

ನವದೆಹಲಿ: ಚಿಕ್ಕ ಮಕ್ಕಳೊಂದಿಗೆ ಪ್ರವಾಸಕ್ಕೆ ಹೋದ ಮಹಿಳೆಯರಿಗೆ ಅಲ್ಲಿ ಮಗುವಿಗೆ ಹಾಲುಣಿಸುವುದೇ ದೊಡ್ಡ ಸಮಸ್ಯೆ. ಜನಜಂಗುಳಿಯಿಂದ ಕೂಡಿರುವ ಪ್ರವಾಸಿ ಸ್ಥಗಳಲ್ಲಿ ಖಾಸಗಿತನಕ್ಕೆ ಅವಕಾಶವೇ ಇರಲಾರದು. ಮಹಿಳೆಯರ ಈ ಸಮಸ್ಯೆ ಕೊನೆಗಾಣಿಸಲು ಭಾರತೀಯ ಪುರತತ್ವ ಇಲಾಖೆ ಮುಂದಾಗಿದೆ. ತನ್ನ ವ್ಯಾಪ್ತಿಗೆ ಒಳಪಟ್ಟ ತಾಜ್‌ ಮಹಲ್‌, ಫತೇಪುರ ಸಿಕ್ರಿ ಮತ್ತು ಆಗ್ರಾ ಕೋಟೆಗಳಲ್ಲಿ ಎದೆಹಾಲುಣಿಸಲೆಂದೇ ಪ್ರತ್ಯೇಕ ಖಾಸಗಿ ಕೋಣೆಗಳನ್ನು ಸಿದ್ಧಪಡಿಸುತ್ತಿದೆ.

‘ಈ ರೀತಿಯ ವ್ಯವಸ್ಥೆಯನ್ನು ಭಾರತದಲ್ಲಿ ಇದೇ ಮೊದಲ ಬಾರಿಗೆ ಒದಗಿಸಲಾಗುತ್ತಿದೆ,’ ಎಂದು ಭಾರತೀಯ ಪುರತತ್ವ ಇಲಾಖೆಯ ಸೂಪರಿಂಡೆಂಟ್‌ ವಸಂತ್‌ ಸ್ವರಂಕರ್‌ ತಿಳಿಸಿರುವುದಾಗಿ ಸುದ್ದಿ ವೆಬ್‌ಸೈಟ್‌ ದಿ ಕ್ವಿಂಟ್‌ ವರದಿ ಮಾಡಿದೆ.

‘ಪ್ರವಾಸಿ ಸ್ಥಳಗಳಲ್ಲಿ ಮಹಿಳೆಯರು ತಮ್ಮ ಮಕ್ಕಳಿಗೆ ಹಾಲುಣಿಸಲು ಪರದಾಡುವುದನ್ನು ನಾವು ಗಮನಿಸಿದ್ದೇವೆ. ಇನ್ನು ಹೆಚ್ಚು ಜನರಿರುವ ದಿನಗಳಲ್ಲಂತಲೂ ಅವರ ಕಷ್ಟ ಹೇಳತೀರದು. ಈ ಸಮಸ್ಯೆಯನ್ನು ಮನಗಂಡಿರುವ ನಾವು, ಅವರಿಗಾಗಿ ಒಂದು ಜಾಗ ಕಲ್ಪಿಸಲು ನಿರ್ಧಿರಿಸಿದ್ದೇವೆ,’ ಎಂದೂ ಅವರು ತಿಳಿಸಿದ್ದಾರೆ.

ADVERTISEMENT

ಈ ಮೂರು ಸ್ಮಾರಕಗಳಲ್ಲಿ ಈಗಾಗಲೇ ಜಾಗ ಗುರುತಿಸುವ ಕಾರ್ಯ ಪೂರ್ಣಗೊಂಡಿದ್ದು, ಕೋಣೆಗಳಲ್ಲಿ ವ್ಯವಸ್ಥೆ ಕಲ್ಪಿಸುವ ಕಾರ್ಯಗಳೂ ನಡೆಯುತ್ತಿವೆ.ಈ ಕೋಣೆಗಳಲ್ಲಿ ಬೆಳಕಿನ ವ್ಯವಸ್ಥೆ, ಫ್ಯಾನ್‌, ಕುರ್ಚಿ, ಮೇಜುಗಳು ಇರಲಿವೆ ಎಂದು ಪುರತತ್ವ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಹಾಲುಣಿಸುವ ಮಹಿಳೆಯರನ್ನು ಸ್ಮಾರಕದಿಂದ ಹೊರ ಕಳುಹಿಸಿದ ಪ್ರಸಂಗಗಳು ವಿದೇಶದ ಕೆಲ ಕಡೆ ನಡೆದಿವೆ.ಆದರೆ, ಭಾರತದಲ್ಲಿ ಹೊರಾಂಗಣದಲ್ಲಿ ಹಾಲುಣಿಸಲು ಅಂಥ ನಿರ್ಬಂಧಗಳೇನೂ ಇಲ್ಲ. ಅಲ್ಲದೆ, ಹಾಲುಣಿಸುವ ಮಹಿಳೆಯನ್ನು ಕಂಡ ಕೂಡಲೇ ಸುತ್ತಲ ಪುರುಷರು ಸ್ಪಂದಿಸುವ ವಾತಾವರಣವೂ ಇದೆ. ಪುರತತ್ವ ಇಲಾಖೆಯ ಸಿಬ್ಬಂದಿಯೂ ಕೂಡ ಮಹಿಳೆಗೆ ಸ್ಪಂದಿಸಿದ ಪ್ರಕರಣಗಳೂ ಇವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.