ಗೂಗಲ್ ಮ್ಯಾಪ್ ಮತ್ತು ಅಪೂರ್ಣಗೊಂಡಿರುವ ಸೇತುವೆ
ಲಖನೌ: ಮೂವರು ಸ್ನೇಹಿತರು ಗೂಗಲ್ ಮ್ಯಾಪ್ ನೆರವಿನಿಂದ ಕಾರು ಚಲಾಯಿಸಿಕೊಂಡು ಸೇತುವೆಯ ಮೇಲೆ ಹೋಗಿ, ನದಿಗೆ ಉರುಳಿ ಮೃತಪಟ್ಟ ಪ್ರಕರಣದ ಬಳಿಕ ಹಾನಿಗೊಳಗಾದ ಸೇತುವೆಯ ಮಾರ್ಗವನ್ನು ಗೂಗಲ್ ಮ್ಯಾಪ್‌ನಿಂದ ತೆಗೆದು ಹಾಕಲಾಗಿದೆ ಎಂದು ವರದಿಯಾಗಿದೆ.
ನವೆಂಬರ್ 24ರಂದು (ಭಾನುವಾರ) ಉತ್ತರ ಪ್ರದೇಶದ ಬದೌನ್ ಜಿಲ್ಲೆಯಲ್ಲಿ ಮೂವರು ಸ್ನೇಹಿತರು ಗೂಗಲ್ ಮ್ಯಾಪ್ ನೆರವಿನಿಂದ ಕಾರು ಚಲಾಯಿಸಿಕೊಂಡು ಹಾನಿಗೊಳಗಾದ ಸೇತುವೆಯಿಂದ ರಾಮ್‌ಗಂಗಾ ನದಿಗೆ ಬಿದ್ದು ಮೃತಪಟ್ಟಿದ್ದರು.
ಘಟನೆ ಸಂಬಂಧ ಗೂಗಲ್ ಮ್ಯಾಪ್ಸ್ ಇಂಡಿಯಾ ಹಾಗೂ ಉತ್ತರ ಪ್ರದೇಶದ ಲೋಕೋಪಯೋಗಿ ಇಲಾಖೆಯ (ಪಿಡಬ್ಲ್ಯುಡಿ) ಎಂಜಿನಿಯರ್‌ಗಳ ವಿರುದ್ಧ ಪ್ರಕರಣ ದಾಖಲಿಸಿದ್ದ ಪೊಲೀಸರು, ಅಧಿಕಾರಿಗಳನ್ನು ವಿಚಾರಣೆಗೆ ಒಳಪಡಿಸಿದ್ದರು.
ಹಾನಿಗೊಳಗಾದ ಸೇತುವೆಗೆ ಸಂಪರ್ಕ ಕಲ್ಪಿಸುವ ರಸ್ತೆ ಇನ್ನು ಮುಂದೆ ಗೂಗಲ್ ಮ್ಯಾಪ್‌ನಲ್ಲಿ ಕಾಣಿಸುವುದಿಲ್ಲ. ಆ ಮಾರ್ಗವನ್ನು ಅಪ್ಲಿಕೇಷನ್‌ನಿಂದ ತೆಗೆದುಹಾಕಲಾಗಿದೆ ಎಂದು ಗೂಗಲ್ ಮ್ಯಾಪ್ಸ್ ಇಂಡಿಯಾ ತಿಳಿಸಿರುವುದಾಗಿ ಜಿಲ್ಲಾಧಿಕಾರಿ ತಿಳಿಸಿದ್ದಾರೆ.
ಸೇತುವೆಗೆ ಹೋಗುವ ರಸ್ತೆಯಲ್ಲಿ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಸರಿಯಾದ ಫಲಕಗಳನ್ನು ಹಾಕದಿರುವುದೇ ಘಟನೆ ಕಾರಣ ಎಂದು ಅವರು ದೂರಿದ್ದಾರೆ.
ಕೆಲವು ದಿನಗಳ ಹಿಂದೆ ರಸ್ತೆಗೆ ಅಡ್ಡಲಾಗಿ ಸಣ್ಣ ಗೋಡೆಯನ್ನು ನಿರ್ಮಿಸಲಾಗಿತ್ತು. ಆದರೆ, ಕೆಲವರು ಗೋಡೆಯನ್ನು ಕೆಡವಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಘಟನೆಗೆ ಸಂಬಂಧ ಈಗಾಗಲೇ ಸರ್ಕಾರಕ್ಕೆ ವರದಿ ಕಳುಹಿಸಲಾಗಿದೆ. ಪಿಡಬ್ಲ್ಯುಡಿ ಎಂಜಿನಿಯರ್‌ಗಳ ವಿರುದ್ಧ ಕ್ರಮಕೈಗೊಳ್ಳುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.
ಬದೌನ್ ಜಿಲ್ಲೆಯ ದತಗಂಜ್-ಫರೀದ್‌ಪುರ ರಸ್ತೆಯಲ್ಲಿರುವ ಮುಡಾ ಗ್ರಾಮದ ಬಳಿ ಸೇತುವೆಯ ಒಂದು ಭಾಗವು ಪ್ರವಾಹದಿಂದಾಗಿ ಹಾನಿಗೊಳಗಾಗಿತ್ತು. ಇದರಿಂದಾಗಿ ಸೇತುವೆ ಮೇಲೆ ವಾಹನಗಳ ಸಂಚಾರ ಸ್ಥಗಿತಗೊಂಡಿತ್ತು.
‘ಈ ವರ್ಷ ಸುರಿದ ಪ್ರವಾಹದಿಂದ ಸೇತುವೆಯ ಒಂದು ಭಾಗವು ಕೊಚ್ಚಿ ಹೋಗಿತ್ತು. ಆದರೆ, ಜಿಪಿಎಸ್‌ನಲ್ಲಿ ಈ ಬದಲಾವಣೆಯೂ ಪರಿಷ್ಕರಣೆಗೊಂಡಿರಲಿಲ್ಲ’ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.