ADVERTISEMENT

ಗೂಗಲ್‌ನಲ್ಲಿ ‘ಡೇಟಿಂಗ್‌ ಕ್ವೇರಿ’ಗಳೇ ಅಧಿಕ

​ಪ್ರಜಾವಾಣಿ ವಾರ್ತೆ
Published 9 ಮೇ 2019, 18:31 IST
Last Updated 9 ಮೇ 2019, 18:31 IST
ಗೂಗಲ್‌ ಸರ್ಚ್‌ ಎಂಜಿನ್‌
ಗೂಗಲ್‌ ಸರ್ಚ್‌ ಎಂಜಿನ್‌   

ನವದೆಹಲಿ: ಮಾಹಿತಿ ಹುಡುಕುವ ಜಾಲತಾಣಗಳ (ಸರ್ಚ್‌ ಎಂಜಿನ್‌) ಪೈಕಿ ಮುಂಚೂಣಿಯಲ್ಲಿರುವ ಗೂಗಲ್‌ನಲ್ಲಿ ಭಾರತೀಯರು ವೈವಾಹಿಕ ಸಂಬಂಧ ಕುದುರಿಸುವ ಸಂಬಂಧ ಪ್ರಶ್ನೆಗಳನ್ನು ಕೇಳುವುದಕ್ಕಿಂತಲೂ ‘ಡೇಟಿಂಗ್‌ ಕ್ವೇರಿ’ಗಳನ್ನೇ ಹೆಚ್ಚಾಗಿ ಕೇಳಿದ್ದಾರೆ!

ಗೂಗಲ್‌ ಸಂಸ್ಥೆ ಪ್ರಕಟಿಸಿರುವ ‘ಇಯರ್‌ ಇನ್‌ ಸರ್ಚ್: ಇನ್‌ಸೈಟ್ಸ್‌ ಫಾರ್‌ ಬ್ರ್ಯಾಂಡ್ಸ್‌’ ಎಂಬ ವಾರ್ಷಿಕ ವರದಿಯಲ್ಲಿ ಇಂತಹ ಹಲವಾರು ಕುತೂಹಲಕರ ಅಂಶಗಳಿವೆ.

‘ಇತ್ತೀಚಿನ ದಿನಗಳಲ್ಲಿ ಡೇಟಿಂಗ್‌ ಕುರಿತಾದ ಪ್ರಶ್ನೆಗಳು, ಹುಡುಕಾಟದ ಪ್ರವೃತ್ತಿ ಹೆಚ್ಚುತ್ತಿದ್ದು, ಈ ಪ್ರಮಾಣ ಶೇ 40ರಷ್ಟು ಅಧಿಕವಾಗಿರುವುದು ಕಂಡು ಬಂದಿದೆ. ಆನ್‌ಲೈನ್‌ ಮೂಲಕ ಡೇಟಿಂಗ್‌ ಮಾಡುವ ಸಂಬಂಧದ ಪ್ರಶ್ನೆಗಳಲ್ಲಿ ಶೇ 37ರಷ್ಟು ಹೆಚ್ಚಳ ಕಂಡು ಬಂದಿದ್ದರೆ, ಮದುವೆಗೆ ಸಂಬಂಧಿಸಿದ ಪ್ರಶ್ನೆ/ಹುಡುಕಾಟದ ಪ್ರಮಾಣದಲ್ಲಿ ಶೇ 14ರಷ್ಟು ಮಾತ್ರ ಹೆಚ್ಚಳ ಇದೆ’ ಎಂದು ಸಂಸ್ಥೆಯ ಭಾರತದ ಶಾಖೆಯ ನಿರ್ದೇಶಕ ವಿಕಾಸ್‌ ಅಗ್ನಿಹೋತ್ರಿ ಹೇಳುತ್ತಾರೆ.

ADVERTISEMENT

ಡೇಟಿಂಗ್‌ಗಾಗಿ ಹುಡುಕುವವರ ಆದ್ಯತೆಯಂತೆ ಪ್ರಶ್ನೆಗಳ ಸಂಖ್ಯೆಯಲ್ಲೂ ವ್ಯತ್ಯಾಸ ಕಾಣಬಹುದಾಗಿದೆ. ತಾವಿರುವ ಸ್ಥಳದಲ್ಲಿ ಡೇಟಿಂಗ್‌ಗೆ ಅವಕಾಶ ಹುಡುಕುವವರು ‘ನಿಯರ್‌ ಮಿ’ ಆಯ್ಕೆ ಮೊರೆ ಹೋಗುತ್ತಾರೆ. ಇಂಥವರ ಸಂಖ್ಯೆಯಲ್ಲಿ ಶೇ 75ರಷ್ಟು ಹೆಚ್ಚಳ ದಾಖಲಾಗಿದೆ. ಇನ್ನು ಕೆಲವರು ತಮ್ಮ ಉದ್ಯೋಗ ಸ್ಥಳದಲ್ಲಿ ಇಂತಹ ಅವಕಾಶಕ್ಕಾಗಿ ಹಾತೊರೆದು ಗೂಗಲ್‌ಗೆ ಮೊರೆ ಹೋಗಿದ್ದು, ಅಂಥವರ ಸಂಖ್ಯೆ ಯಲ್ಲಿ ಶೇ 100ರಷ್ಟು ಹೆಚ್ಚಳ ಇದೆ!

ಉಡುಪುಗಳ ವಿಭಾಗದಲ್ಲಿ ವೈವಿಧ್ಯಮಯ ಸೀರೆಗಳಿಗಾಗಿ ಹೆಚ್ಚು ಹುಡುಕಾಟ. ಅದರಲ್ಲೂ ಕರ್ನಾಟಕದ ಮಹಿಳೆಯರು ಕಾಂಜೀವರಂ ಸೀರೆ ಗಾಗಿ ಗೂಗಲ್‌ ಜಾಲತಾಣವನ್ನು ಹೆಚ್ಚು ಜಾಲಾಡಿದ್ದರೆ, ಆಂಧ್ರಪ್ರದೇಶದ ಮಹಿಳೆಯರು ‘ಲಕ್ಷ್ಮೀಪತಿ’ ಸೀರೆಗಾಗಿ ಹಾಗೂ ಕೇರಳದವರು ‘ಜಿಮಿಕ್ಕಿ ಕಮಲ್‌’ ಸೀರೆಗಾಗಿ ಸರ್ಚ್‌ ಮಾಡಿದ್ದಾಗಿಯೂ ವರದಿ ವಿವರಿಸುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.