ADVERTISEMENT

ದಲೈಲಾಮಾಗೆ ಆಹ್ವಾನ: ಚೀನಾಕ್ಕೆ ಟಿಬೆಟ್‌ ನೀತಿ ಬದಲು ಎಂಬ ಸಂದೇಶ ರವಾನಿಸಿದ ಭಾರತ

​ಪ್ರಜಾವಾಣಿ ವಾರ್ತೆ
Published 18 ನವೆಂಬರ್ 2019, 20:00 IST
Last Updated 18 ನವೆಂಬರ್ 2019, 20:00 IST
ದಲೈಲಾಮಾ
ದಲೈಲಾಮಾ   

ನವದೆಹಲಿ: ದೇಶದ ಎರಡನೇ ರಾಷ್ಟ್ರಪತಿ ಡಾ. ಸರ್ವಪಲ್ಲಿ ರಾಧಾಕೃಷ್ಣನ್‌ ಸ್ಮಾರಕ ಉಪನ್ಯಾಸ ನೀಡಲು ಟಿಬೆಟ್‌ ನಾಯಕ ದಲೈಲಾಮಾ ಅವರನ್ನು ಆಹ್ವಾನಿಸಲು ಕೇಂದ್ರ ಸರ್ಕಾರ ಒಪ್ಪಿಗೆ ಕೊಟ್ಟಿದೆ. ಇದು, ಭಾರತ–ಚೀನಾ ನಡುವೆ ಇನ್ನೊಂದು ಸುತ್ತಿನ ಅಸಂತೃಪ್ತಿಗೆ ಕಾರಣವಾಗಬಹುದು ಎನ್ನಲಾಗಿದೆ.

ಶಿಮ್ಲಾದಲ್ಲಿರುವ ರಾಷ್ಟ್ರಪತಿ ನಿವಾಸದಲ್ಲಿ ಕೇಂದ್ರವನ್ನು ಹೊಂದಿರುವ ಇಂಡಿಯನ್‌ ಇನ್ಸ್‌ಟಿಟ್ಯೂಟ್‌ ಆಫ್‌ ಅಡ್ವಾನ್ಸ್‌ಡ್‌ ಸ್ಟಡೀಸ್‌ (ಐಐಎಎಸ್‌) ಈ ಸ್ಮಾರಕ ಉಪನ್ಯಾಸ ಕಾರ್ಯಕ್ರಮವನ್ನು ಆಯೋಜಿಸುತ್ತಿದೆ.

ಟಿಬೆಟ್‌ನ ದೇಶಭ್ರಷ್ಟ ನಾಯಕರಿಗೆ ಸಂಬಂಧಿಸಿ ಭಾರತದ ನಿಲುವು ಬದಲಾಗಿದೆ ಎಂಬುದರ ಸೂಚನೆ ಇದು. ‘ಚೀನಾದ ದಮನಕಾರಿ ಆಳ್ವಿಕೆಯಿಂದ ಟಿಬೆಟ್‌ ಅನ್ನು ಮುಕ್ತಗೊಳಿಸಿ’ ಎಂಬ ಅಭಿಯಾನ ನಡೆಸುತ್ತಿರುವ ದಲೈಲಾಮಾ ಮತ್ತು ಇತರ ನಾಯಕರ ಕಾರ್ಯಕ್ರಮಗಳಿಂದ ದೂರ ಇರಬೇಕು ಎಂಬ ಸೂಚನೆಯನ್ನು 2018ರ ಫೆಬ್ರುವರಿಯಲ್ಲಿ ಸಂಪುಟ ಕಾರ್ಯಾಲಯವು ಅಧಿಕಾರಿಗಳಿಗೆ ನೀಡಿತ್ತು. ಆದರೆ, ಈಗ ಸರ್ಕಾರದ ಅಧೀನ ಸಂಸ್ಥೆಯೇ ದಲೈಲಾಮಾ ಅವರನ್ನು ಉಪನ್ಯಾಸಕ್ಕೆ ಆಹ್ವಾನಿಸಲಿದೆ.

ADVERTISEMENT

ನವದೆಹಲಿಯಲ್ಲಿರುವ ಇಂಡಿಯಾ ಇಂಟರ್‌ನ್ಯಾಷನಲ್‌ ಸೆಂಟರ್‌ನಲ್ಲಿ ರಾಧಾಕೃಷ್ಣನ್‌ ಸ್ಮಾರಕ ಉಪನ್ಯಾಸ ಇದೇ ಗುರುವಾರ ನಡೆಯಲಿದೆ. ಬಿಜೆಪಿ ಸಂಸದ ವಿನಯ ಸಹಸ್ರಬುದ್ಧೆ ಅವರು ಮುಖ್ಯ ಅತಿಥಿಯಾಗಿರಲಿದ್ದಾರೆ.

ಜಮ್ಮು ಮತ್ತು ಕಾಶ್ಮೀರದ ವಿಶೇಷಾಧಿಕಾರ ರದ್ದತಿಯ ವಿಚಾರದಲ್ಲಿ ಚೀನಾವು ಪಾಕಿಸ್ತಾನದ ಬೆಂಬಲಕ್ಕೆ ನಿಂತಿದೆ. ಹಾಗಾಗಿ, ಭಾರತ–ಚೀನಾ ನಡುವಣ ಸಂಬಂಧದ ಮೇಲೆ ಕರಿಛಾಯೆ ಮುಸುಕಿದೆ. ಇಂತಹ ಸಂದರ್ಭದಲ್ಲಿ, ಪ್ರತಿಷ್ಠಿತ ಸಂಸ್ಥೆಯೊಂದರಲ್ಲಿ ಉಪನ್ಯಾಸ ನೀಡಲು ದಲೈಲಾಮಾ ಅವರನ್ನು ಆಹ್ವಾನಿಸಿರುವುದು ಚೀನಾಕ್ಕೆ ಆಕ್ರೋಶ ಉಂಟು ಮಾಡಬಹುದು.

ದಲೈಲಾಮಾ ಮತ್ತು ಟಿಬೆಟ್‌ ದೇಶಭ್ರಷ್ಟ ಸರ್ಕಾರದ ಜತೆಗೆ ವ್ಯವಹರಿಸುವ ವಿಚಾರದಲ್ಲಿ 2018ರ ಆರಂಭದಿಂದಲೂ ಭಾರತ ಎಚ್ಚರಿಕೆಯ ನಡೆಯನ್ನೇ ಇರಿಸಿಕೊಂಡು ಬಂದಿದೆ. ಚೀನಾದ ಜತೆಗೆ ಸಂಬಂಧ ಉತ್ತಮಪಡಿಸಿಕೊಳ್ಳುವ ಪ್ರಯತ್ನವನ್ನು ಭಾರತ ನಡೆಸಿತ್ತು. ಹಾಗಾಗಿ, ಆ ದೇಶಕ್ಕೆ ಅಸಮಾಧಾನ ಉಂಟು ಮಾಡುವ ನಿರ್ಧಾರಗಳಿಂದ ದೂರವೇ ಇತ್ತು.

2017ರ ಜೂನ್‌–ಆಗಸ್ಟ್‌ನಲ್ಲಿ ದೋಕಲಾದಲ್ಲಿ ಭಾರತ–ಚೀನಾ ಸೇನೆಯ ನಡುವೆ ಮುಖಾಮುಖಿ ಉಂಟಾಗಿತ್ತು. 72 ದಿನಗಳ ಈ ಮುಖಾಮುಖಿಯಿಂದಾಗಿ ಎರಡೂ ದೇಶಗಳ ನಡುವಣ ಸಂಬಂಧ ವಿಷಮಗೊಂಡಿತ್ತು. ಅದಾದ ಬಳಿಕ, ಸಂಬಂಧ ಸುಧಾರಣೆಯ ಪ್ರಯತ್ನಗಳು ನಡೆದಿವೆ. ಆದರೆ, ಚೀನಾವು ಪಾಕಿಸ್ತಾನಕ್ಕೆ ಮತ್ತೆ ಮತ್ತೆ ಬೆಂಬಲ ನೀಡುತ್ತಿರುವುದು ಸಂಬಂಧ ಹಾಳಾಗಲು ಕಾರಣವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.