ADVERTISEMENT

ಸರ್ಕಾರದಿಂದ ಕೋವಿಡ್‌–19 'ವಿಪತ್ತು' ಅಧಿಸೂಚನೆ: ₹4 ಲಕ್ಷ ಪರಿಹಾರ ಘೋಷಣೆ

ಏಜೆನ್ಸೀಸ್
Published 14 ಮಾರ್ಚ್ 2020, 12:35 IST
Last Updated 14 ಮಾರ್ಚ್ 2020, 12:35 IST
ಬೆಂಗಳೂರಿನ ರೈಲ್ವೆ ನಿಲ್ದಾಣದ ಸಮೀಪ ಮಾಸ್ಕ್ ಧರಿಸಿ ನಿಂತಿರುವ ಪ್ರಯಾಣಿಕರು– ಸಂಗ್ರಹ ಚಿತ್ರ
ಬೆಂಗಳೂರಿನ ರೈಲ್ವೆ ನಿಲ್ದಾಣದ ಸಮೀಪ ಮಾಸ್ಕ್ ಧರಿಸಿ ನಿಂತಿರುವ ಪ್ರಯಾಣಿಕರು– ಸಂಗ್ರಹ ಚಿತ್ರ   

ನವದೆಹಲಿ:ಕೇಂದ್ರ ಸರ್ಕಾರ 'ಕೋವಿಡ್‌–19' ರೋಗವನ್ನು ಅಧಿಸೂಚಿತ ವಿಪತ್ತು ಎಂದು ಪರಿಗಣಿಸಲಿದ್ದು, ರಾಜ್ಯ ವಿಪತ್ತು ಪರಿಹಾರನಿಧಿ (ಎಸ್‌ಡಿಆರ್‌ಎಫ್‌) ಅಡಿಯಲ್ಲಿ ಸಹಕಾರ ನೀಡಲಿದೆ. ಹಾಗೂ ಕೊರೊನಾ ವೈರಸ್‌ ಸೋಂಕಿನಿಂದಾಗಿ ಮೃತಪಟ್ಟಿರುವ ವ್ಯಕ್ತಿಯ ಕುಟುಂಬಕ್ಕೆ ಪರಿಹಾರ ನೀಡಲಿದೆ.

ಎಸ್‌ಡಿಆರ್‌ಎಫ್‌ ಅಡಿಯಲ್ಲಿ ಸಹಕಾರ ನೀಡಲು ಉದ್ದೇಶಿಸಿರುವ ಕೇಂದ್ರ ಗೃಹ ಸಚಿವಾಲಯ, ಕೋವಿಡ್–19ನ್ನು ಅಧಿಸೂಚಿತ ವಿಪತ್ತು ಎಂದು ಪರಿಗಣಿಸಿ ₹4 ಲಕ್ಷ ಪರಿಹಾರ ನೀಡಲು ನಿರ್ಧರಿಸಿದೆ. ಈ ಕುರಿತು ಎಲ್ಲ ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳಿಗೆ ಪತ್ರ ರವಾನಿಸಿದೆ.

ಕೋವಿಡ್‌–19ಗೆ ತುತ್ತಾದವರು, ಕೊರೊನಾ ವೈರಸ್‌ ಸೋಂಕು ಹರಡದಂತೆ ತಡೆಯುವ ಹಾಗೂ ಕೋವಿಡ್‌–19 ದೃಢಪಟ್ಟವರ ಚಿಕಿತ್ಸೆ ಕಾರ್ಯಗಳಲ್ಲಿ ಭಾಗಿಯಾಗುವವರೂ ಸೋಂಕಿಗೆ ಒಳಗಾಗಿ ಸಾವಿಗೀಡಾದರೆ ಅವರ ಕುಟುಂಬಗಳಿಗೂ ಸರ್ಕಾರದಿಂದ 4 ಲಕ್ಷ ರೂಪಾಯಿ ಪರಿಹಾರ ಸಿಗಲಿದೆ.

ADVERTISEMENT

ಕೊರೊನಾ ವೈರಸ್‌ ಸೋಂಕಿನಿಂದಾಗಿ ಭಾರತದಲ್ಲಿ ಇಬ್ಬರು ಮೃತಪಟ್ಟಿರುವುದು ದೃಢಪಟ್ಟಿದೆ ಹಾಗೂ 80ಕ್ಕೂ ಹೆಚ್ಚು ಜನರಿಗೆ ಸೋಂಕು ಹರಡಿದೆ. ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳು ಶಾಲಾ, ಕಾಲೇಜುಗಳಿಗೆ ರಜೆ ಘೋಷಿಸಿವೆ. ಶಾಪಿಂಗ್‌ ಮಾಲ್‌ಗಳು, ಚಿತ್ರಮಂದಿರಗಳ ಕಾರ್ಯಾಚರಣೆಗೂ ನಿರ್ಬಂಧ ಹೇರಲಾಗಿದೆ.

ಕೋವಿಡ್‌–19 ಸಾಂಕ್ರಾಮಿಕ ರೋಗ ಎಂದುವಿಶ್ವ ಆರೋಗ್ಯ ಸಂಸ್ಥೆ ಇತ್ತೀಚೆಗೆ ಘೋಷಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.