ADVERTISEMENT

ನಿತ್ಯಾನಂದಗೆ ಆಶ್ರಯ ನೀಡಿಲ್ಲ ಎಂದ ಈಕ್ವೆಡಾರ್ ಸರ್ಕಾರ

ಪಿಟಿಐ
Published 7 ಡಿಸೆಂಬರ್ 2019, 5:35 IST
Last Updated 7 ಡಿಸೆಂಬರ್ 2019, 5:35 IST
ನಿತ್ಯಾನಂದ
ನಿತ್ಯಾನಂದ   

ನವದೆಹಲಿ: ಸ್ವಯಂಘೋಷಿತದೇವಮಾನವ ಹಾಗೂ ಅತ್ಯಾಚಾರ ಆರೋಪಿ ನಿತ್ಯಾನಂದನ ಪಾಸ್‌ಪೋರ್ಟ್ ಅನ್ನು ಕೇಂದ್ರ ಸರ್ಕಾರ ರದ್ದುಗೊಳಿಸಿದೆ. ಈ ಮಧ್ಯೆ ಆತನಿಗೆ ಆಶ್ರಯ ನೀಡಲಾಗಿದೆ ಎಂಬ ವರದಿಗಳನ್ನು ಈಕ್ವೆಡಾರ್ ಸರ್ಕಾರ ಕೂಡ ಅಲ್ಲಗಳೆದಿದೆ.

ವಿದೇಶದಲ್ಲಿರುವ ಎಲ್ಲಾ ಭಾರತೀಯ ಸಂಸ್ಥೆ ಮತ್ತು ಅಧಿಕಾರಿಗಳಿಗೆ ಈ ಬಗ್ಗೆ ಮಾಹಿತಿ ನೀಡಿದ್ದು, ನಿತ್ಯಾನಂದನ ಪತ್ತೆಗೆ ಕ್ರಮ ಕೈಗೊಳ್ಳಲಾಗಿದೆ ಎಂದುವಿದೇಶಾಂಗ ಸಚಿವಾಲಯದ ವಕ್ತಾರ ರವೀಶ್ ಕುಮಾರ್ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘ನಿತ್ಯಾನಂದನ ಕುರಿತು ಸ್ಥಳೀಯ ಸರ್ಕಾರಗಳಿಗೂ ಮಾಹಿತಿ ನೀಡಿದ್ದು, ಅತ್ಯಾಚಾರ, ಅಪಹರಣ ಸೇರಿದಂತೆ ಹಲವು ಪ್ರಕರಣಗಳಲ್ಲಿ ಆತ ಭಾರತಕ್ಕೆ ಬೇಕಾಗಿರುವ ವ್ಯಕ್ತಿ ಎಂದು ತಿಳಿಸಲಾಗಿದೆ’ ಎಂದರು.

ADVERTISEMENT

‘2018ರಲ್ಲಿ ನಿತ್ಯಾನಂದನ ಪಾಸ್‌ಪೋರ್ಟ್ ಅವಧಿ ಮುಗಿಯುವ ಮುನ್ನವೇ ಆತನ ಪಾಸ್‌ಪೋರ್ಟ್ ಅನ್ನು ರದ್ದುಗೊಳಿಸಲಾಗಿದೆ. ಆತನ ವಿರುದ್ಧ ಪ್ರಕರಣಗಳು ಬಾಕಿಯಿದ್ದ ಕಾರಣ,ಹೊಸ ಪಾಸ್‌ಪೋರ್ಟ್‌ಗೆ ಸಲ್ಲಿಸಲಾಗಿದ್ದ ಅರ್ಜಿಯನ್ನೂ ತಿರಸ್ಕರಿಸಲಾಗಿದೆ’ ಎಂದು ಅವರು ಮಾಹಿತಿ ನೀಡಿದರು.

ನಿತ್ಯಾನಂದ ‘ಕೈಲಾಸ’ ಹೆಸರಿನ ಸ್ವಂತ ದೇಶದ ಘೋಷಣೆ ಮಾಡಿರುವ ಕುರಿತು ಕೇಳಲಾದ ಪ್ರಶ್ನೆಗೆ, ‘ಸ್ವಂತ ವೆಬ್‌ಸೈಟ್ ಸ್ಥಾಪಿಸುವುದಕ್ಕಿಂತ ಸ್ವಂತ ರಾಷ್ಟ್ರ ಸ್ಥಾಪಿಸುವುದು ಭಿನ್ನ ಕೆಲಸ’ ಎಂದರು.

ಈ ಸಂಬಂಧ ಈಕ್ವೆಡಾರ್ ಸರ್ಕಾರದ ರಾಯಭಾರ ಕಚೇರಿಯು ತನ್ನ ಹೇಳಿಕೆಯಲ್ಲಿ ನಿತ್ಯಾನಂದನಿಗೆ ಆಶ್ರಯ ನೀಡಿರುವ ಕುರಿತು ಅಲ್ಲಗಳೆದಿದೆ ಅಲ್ಲದೆ ಈಕ್ವೆಡಾರ್ ಹತ್ತಿರ ಅಥವಾ ದೂರದ ದಕ್ಷಿಣ ಅಮೆರಿಕಾದಲ್ಲಿನ ದ್ವೀಪ ಖರೀದಿಸಲು ಸಹಾಯ ಮಾಡಿಲ್ಲ ಎಂದೂ ಸ್ಪಷ್ಟವಾಗಿ ಹೇಳಿದೆ.

‘ಆಶ್ರಯ ನೀಡುವಂತೆ ನಿತ್ಯಾನಂದ ಮನವಿ ಮಾಡಿದ್ದು ನಿಜ. ಆದರೆ, ಮನವಿಯನ್ನು ತಿರಸ್ಕರಿಸಿದ ಬಳಿಕ ಆತ ಹೈಟಿ ನಗರಕ್ಕೆ ಹೋಗಿರಬಹುದು’ ಎಂದು ರಾಯಭಾರ ಕಚೇರಿ ತಿಳಿಸಿದೆ.

‘ಭಾರತದ ಡಿಜಿಟಲ್ ಮತ್ತು ಮುದ್ರಣ ಮಾಧ್ಯಮಗಳಲ್ಲಿ ನಿತ್ಯಾನಂದನಿಗೆ ಸಂಬಂಧಪಟ್ಟ ಪ್ರಕಟವಾಗಿರುವ ವರದಿಗಳು kailasaa.org ವೆಬ್‌ಸೈಟ್‌ನ ಮಾಹಿತಿಯನ್ನು ಆಧರಿಸಿವೆ. ಈ ವೆಬ್‌ಸೈಟ್‌ ಅನ್ನು ನಿತ್ಯಾನಂದ ಅಥವಾ ಆತನ ಅನುಯಾಯಿಗಳು ನಿರ್ವಹಿಸುತ್ತಿರಬಹುದು. ಇಂಥ ಮಾಹಿತಿಗಳನ್ನು ಉಲ್ಲೇಖಿಸುವುದನ್ನು ಮಾಧ್ಯಮಗಳು ಬಿಡಬೇಕು’ ಎಂದೂ ಈಕ್ವೆಡಾರ್ ಅಭಿಪ್ರಾಯಪಟ್ಟಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.