ADVERTISEMENT

ರಾಜೀನಾಮೆಗೆ ಮುಂದಾದ ಮಹಾರಾಷ್ಟ್ರ ರಾಜ್ಯಪಾಲ: ರಾಜಭವನದಿಂದ ನಿರಾಕರಣೆ

​ಪ್ರಜಾವಾಣಿ ವಾರ್ತೆ
Published 28 ನವೆಂಬರ್ 2022, 13:57 IST
Last Updated 28 ನವೆಂಬರ್ 2022, 13:57 IST
ಭಗತ್‌ ಸಿಂಗ್‌ ಕೋಶಿಯಾರಿ
ಭಗತ್‌ ಸಿಂಗ್‌ ಕೋಶಿಯಾರಿ   

ಮುಂಬೈ:ಮಹಾರಾಷ್ಟ್ರ ರಾಜ್ಯಪಾಲ ಭಗತ್‌ ಸಿಂಗ್‌ ಕೋಶಿಯಾರಿ ಅವರು ರಾಜೀನಾಮೆ ನೀಡಲು ಮುಂದಾಗಿದ್ದಾರೆ ಎಂಬ ವರದಿಗಳು ಸೋಮವಾರ ಹರಿದಾಡಿದವು.

ಛತ್ರಪತಿ ಶಿವಾಜಿ ಮಹಾರಾಜರನ್ನು ಅವಮಾನಿಸುವಂಥ ಹೇಳಿಕೆ ನೀಡಿದ್ದಕ್ಕಾಗಿ ಮತ್ತು ಮಹಾರಾಷ್ಟ್ರ, ಕರ್ನಾಟಕದ ನಡುವೆ ನಡೆಯುತ್ತಿರುವ ಗಡಿ ತಿಕ್ಕಾಟದ ಕುರಿತು ಮೌನ ವಹಿಸಿರುವ ಹಿನ್ನೆಲೆಯಲ್ಲಿ ಅವರು ಭಾರಿ ಟೀಕೆಗೊಳಗಾಗಿದ್ದಾರೆ. ಇದರಿಂದಾಗಿ ಅವರು ರಾಜೀನಾಮೆ ನೀಡಲು ಮುಂದಾಗಿದ್ದಾರೆ ಎನ್ನಲಾಗಿತ್ತು.

ಆದರೆ ಈ ವರದಿಗಳನ್ನು ರಾಜಭವನವು ಅಲ್ಲಗಳೆದಿದೆ. ಈ ವರದಿಗಳು ‘ಆಧಾರರಹಿತ’ ಮತ್ತು ‘ಕುಚೋದ್ಯ’ದಿಂದ ಕೂಡಿವೆ ಎಂದು ರಾಜಭವನ ಹೇಳಿದೆ.

ADVERTISEMENT

ಈ ರೀತಿಯ ವದಂತಿ ಹರಿದಾಡುತ್ತಿದ್ದಂತೆ ಶಿವಸೇನಾ (ಉದ್ಧವ್‌ ಬಾಳಾಸಾಹೇಬ್‌ ಠಾಕ್ರೆ) ಮುಖ್ಯ ವಕ್ತಾರ ಸಂಜಯ್‌ ರಾವುತ್‌ ಅವರು, ‘ಗೌರವಾನ್ವಿತ ರಾಜ್ಯಪಾಲರು ರಾಜೀನಾಮೆ ನೀಡಲು ಮುಂದಾಗಿದ್ದಾರೆ. ಒಳ್ಳೆಯ ವಿಷಯ’ ಎಂದು ಟ್ವೀಟ್‌ ಮಾಡಿದ್ದರು. ಎನ್‌ಸಿಪಿ ಸಂಸದೆ ಸುಪ್ರಿಯಾ ಸುಳೆ, ‘ರಾಜೀನಾಮೆ ನೀಡಲು ಮುಂದಾಗಿದ್ದ ಉದ್ದೇಶವೇನು?. ಅವರು ನೇರವಾಗಿ ರಾಷ್ಟ್ರಪತಿ ಅವರಿಗೆ ರಾಜೀನಾಮೆ ಪತ್ರ ನೀಡಬಹುದಿತ್ತು’ ಎಂದು ಪ್ರತಿಕ್ರಿಯಿಸಿದ್ದರು.

ಈ ವಿವಾದದ ಕುರಿತು ಪ್ರತಿಕ್ರಿಯೆ ನೀಡಿರುವ ಬಿಜೆಪಿ ರಾಜ್ಯಸಭೆ ಸದಸ್ಯ ಮತ್ತು ಶಿವಾಜಿ ಮಹಾರಾಜರ ವಂಶಸ್ಥ ಉದಯನ್‌ ರಾಜೇ ಭೋಸಲೆ, ಡಿಸೆಂಬರ್‌ 3ರಂದು ರಾಯಗಢ ಕೋಟೆಯಲ್ಲಿರುವ ಶಿವಾಜಿ ಸಮಾಧಿಗೆ ಭೇಟಿ ನೀಡಿ ಅವರಿಗೆ ಗೌರವ ಸಲ್ಲಿಸಿ, ಇಂಥ ಹೇಳಿಕೆಗಳ ವಿರುದ್ಧ ಪ್ರತಿಭಟಿಸುವುದಾಗಿ ಹೇಳಿದ್ದಾರೆ. ರಾಜ್ಯದ ಮುಖ್ಯಮಂತ್ರಿ ಏಕನಾಥ ಶಿಂದೆ ಮತ್ತು ಉಪ ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್‌ ಹೆಸರನ್ನು ಉಲ್ಲೇಖಿಸದೇ ಅವರನ್ನು ಟೀಕಿಸಿದ ಭೋಸಲೆ, ‘ಈ ರೀತಿಯ ಹೇಳಿಕೆಗಳನ್ನು ಕೇಳಿಸಿಕೊಂಡ ಬಳಿಕವೂ ಕೆಲವರಿಗೆ ಏಕೆ ಸಿಟ್ಟು ಬಂದಿಲ್ಲ’ ಎಂದು ಪ್ರಶ್ನಿಸಿದ್ದಾರೆ.

‘ಶಿವಾಜಿ ಅವರು ಹಳೇ ಕಾಲದ ಐಕಾನ್‌’ ಎಂದು ಈಚೆಗೆ ಕೋಶಿಯಾರಿ ಅವರು ಹೇಳಿಕೆ ನೀಡಿದ್ದರು. ಇದು ರಾಜ್ಯದ ಹಲವು ವರ್ಗಗಳ ಆಕ್ರೋಶಕ್ಕೆ ಕಾರಣವಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.