ADVERTISEMENT

ನ್ಯಾಯಾಂಗದಲ್ಲಿ ವಿದೇಶಿ ಸಾಫ್ಟ್‌ವೇರ್‌, ಆ್ಯಪ್ ಬಳಕೆ ಪ್ರಶ್ನಿಸಿ ಸುಪ್ರೀಂಗೆ

ಪಿಟಿಐ
Published 18 ಏಪ್ರಿಲ್ 2020, 11:31 IST
Last Updated 18 ಏಪ್ರಿಲ್ 2020, 11:31 IST
ಸುಪ್ರೀಂ ಕೋರ್ಟ್
ಸುಪ್ರೀಂ ಕೋರ್ಟ್   

ನವದೆಹಲಿ: ‘ನ್ಯಾಯಾಂಗ ಹಾಗೂ ಸರ್ಕಾರಿ ಇಲಾಖೆಗಳು ವಿಡಿಯೊ ಕಾನ್ಫರೆನ್ಸ್‌ಗಳನ್ನು ನಡೆಸಲು ವಿದೇಶಗಳು ಅಭಿವೃದ್ಧಿಪಡಿಸಿರುವ ಸಾಫ್ಟ್‌ವೇರ್‌ಗಳನ್ನು ಹಾಗೂ ಅಪ್ಲಿಕೇಷನ್‌ಗಳನ್ನು ಬಳಸುತ್ತಿರುವುದು ಕಳವಳಕಾರಿʼ ಎಂದು ಆರ್‌ಎಸ್‌ಎಸ್‌ನ ಮಾಜಿ ಪ್ರಚಾರಕ ಕೆ.ಎನ್.‌ ಗೋವಿಂದಾಚಾರ್ಯ ಅವರು ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದಾರೆ.

ಮಾರ್ಚ್‌ 25ರಂದು ದೇಶದಲ್ಲಿ ಮೊದಲ ಹಂತದ ಲಾಕ್‌ಡೌನ್‌ ಆರಂಭವಾದ ಬಳಿಕ ಬಹುತೇಕ ನ್ಯಾಯಾಲಯಗಳು ಹಾಗೂ ಸರ್ಕಾರಿ ಇಲಾಖೆಗಳು ಮನೆಯಿಂದಲೇ ಕರ್ತವ್ಯ ನಿರ್ವಹಿಸುತ್ತಿವೆ. ಉದ್ಯೋಗ ಸಂಬಂಧಿ ಕೆಲಸಗಳಿಗಾಗಿ ವಾಟ್ಸ್‌ಆಪ್‌, ಸ್ಕೈಪ್‌, ಝೂಮ್‌ನಂತಹ ಅಪ್ಲಿಕೇಷನ್‌ಗಳನ್ನು ಬಳಸಲಾಗುತ್ತಿದೆ. ನಿರ್ದಿಷ್ಟವಾಗಿ ಸರ್ಕಾರದ ಹಾಗೂ ನ್ಯಾಯಾಂಗದ ದತ್ತಾಂಶಗಳು ದೇಶದ ಹೊರಗೆ ರವಾನೆಯಾದರೆ ಅದು ದೇಶದ ಭದ್ರತೆ ಮೇಲೆ ಪ್ರತಿಕೂಲ ಪರಿಣಾಮ ಬೀರಬಹುದು. ಸಾರ್ವಭೌಮತ್ವಕ್ಕೂ ಧಕ್ಕೆಯಾಗಬಹುದುʼ ಎಂದು ಅರ್ಜಿಯಲ್ಲಿ ವಿವರಿಸಲಾಗಿದೆ.

‘ದೇಶದೆಲ್ಲೆಡೆ ಸರ್ಕಾರಿ ಇಲಾಖೆಗಳು ಕಾರ್ಯನಿರ್ವಹಿಸಲು ರಾಷ್ಟ್ರೀಯ ಮಾಹಿತಿ ಕೇಂದ್ರ (ಎನ್‌ಐಸಿ) ದೃಢೀಕರಿಸಿರುವ ವಿಡಿಯೊ ಕಾನ್ಫರೆನ್ಸ್‌ ಸಾಫ್ಟ್‌ವೇರ್‌ಗಳನ್ನೇ ಬಳಸುವುದು ಉತ್ತಮʼ ಎಂದು ಅವರು ಅರ್ಜಿಯಲ್ಲಿ ತಿಳಿಸಿದ್ದಾರೆ.

ADVERTISEMENT

‘ಒಂದು ವೇಳೆ ಎನ್‌ಐಸಿ ಬಳಿ ಆಧುನಿಕ ಸುಧಾರಿತ ಸಾಫ್ಟ್‌ವೇರ್‌ ತಕ್ಷಣಕ್ಕೆ ಲಭ್ಯವಿಲ್ಲ ಎಂದಾದಲ್ಲಿ, ಖಾಸಗಿ ಕಂಪನಿಯ ಸೂಕ್ತ ಸಾಫ್ಟ್‌ವೇರ್‌ ಅನ್ನು ಪರಿಶೀಲಿಸಿ ಸರ್ಕಾರಿ ಇಲಾಖೆಗಳು ಹಾಗೂ ನ್ಯಾಯಾಂಗ ಅದನ್ನು ಬಳಸಲು ಅನುಮತಿ ನೀಡಬೇಕುʼ ಎಂದು ಅವರು ಸಲಹೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.