ADVERTISEMENT

ಆರೋಗ್ಯ ಸಂಬಂಧಿ ಯೋಜನೆಗಳಿಗೆ ಒಂದೇ ಮೀಸಲು ನಿಧಿ: ಕೇಂದ್ರ ಸಚಿವ ಸಂಪುಟ ಒಪ್ಪಿಗೆ

ಪಿಟಿಐ
Published 10 ಮಾರ್ಚ್ 2021, 19:31 IST
Last Updated 10 ಮಾರ್ಚ್ 2021, 19:31 IST
ಕೇಂದ್ರ ಸಚಿವ ಸಂಪುಟ
ಕೇಂದ್ರ ಸಚಿವ ಸಂಪುಟ   

ನವದೆಹಲಿ: ಆರೋಗ್ಯಕ್ಕೆ ಸಂಬಂಧಿಸಿದ ಯೋಜನೆಗಳಿಗೆ ಹಣ ಒದಗಿಸುವುದಕ್ಕಾಗಿ ‘ಪ್ರಧಾನ ಮಂತ್ರಿ ಸ್ವಾಸ್ಥ್ಯ ಸುರಕ್ಷಾ ನಿಧಿ’ಯನ್ನು (ಪಿಎಂಎಸ್‌ಎಸ್‌ಎನ್‌) ಸ್ಥಾಪಿಸುವ ಪ್ರಸ್ತಾವಕ್ಕೆ ಕೇಂದ್ರ ಸಚಿವ ಸಂಪುಟವು ಬುಧವಾರ ಒಪ್ಪಿಗೆ ನೀಡಿದೆ.

‘ಇದು ಆರೋಗ್ಯ ಸೇವೆಗಳಿಗೆ ಮೀಸಲಾದ, ಬಳಕೆಗೆ ಕಾಲಮಿತಿ ಇಲ್ಲದ ನಿಧಿ ಎಂಬುದು ಇದರ ವಿಶೇಷತೆಯಾಗಿದೆ. ಅಂದರೆ, ನಿಧಿಯಲ್ಲಿರುವ ಮೊ ತ್ತವು ಒಂದು ವರ್ಷದ ಅವಧಿಯಲ್ಲಿ ವೆಚ್ಚ ಆಗದೇ ಇದ್ದರೂ ಮರಳಿ ಬೊಕ್ಕ ಸಕ್ಕೆ ಹೋಗುವುದಿಲ್ಲ. ಮುಂದಿನ ವರ್ಷ ಗಳಲ್ಲಿ ಬಳಸುವುದಕ್ಕೂ ಅವಕಾಶ ಇರುತ್ತದೆ. ಆರೋಗ್ಯ ಮತ್ತು ಶಿಕ್ಷಣ ಸೆಸ್‌ ಮೂಲಕ ಸಂಗ್ರಹವಾಗುವ ಹಣದಲ್ಲಿ ಆರೋಗ್ಯಕ್ಕೆ ಸಂಬಂಧಿಸಿದಂತೆ ಸಂಗ್ರಹವಾಗುವ ಹಣವು ಈ ನಿಧಿಗೆ ಸೇರಲಿದೆ’ ಎಂದು ಸರ್ಕಾರ ಪ್ರಕಟಣೆಯಲ್ಲಿ ತಿಳಿಸಿದೆ.

‘ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಆಯುಷ್ಮಾನ್‌ ಭಾರತ, ಪ್ರಧಾ ನಮಂತ್ರಿ ಜನ ಆರೋಗ್ಯ ಯೋಜನೆ, ರಾಷ್ಟ್ರೀಯ ಆರೋಗ್ಯ ಮಿಷನ್‌, ಪ್ರಧಾನಮಂತ್ರಿ ಸ್ವಾಸ್ಥ್ಯ ಸುರಕ್ಷಾ ಯೋಜನೆ ಮುಂತಾದವುಗಳಿಗೆ ಈ ನಿಧಿಯು ಬಳಕೆ ಆಗಲಿದೆ. ಆರೋಗ್ಯಕ್ಕೆ ಸಂಬಂಧಿಸಿದಂತೆ ಎದುರಾಗ ಬಹುದಾದ ತುರ್ತು ಸಂದರ್ಭಗಳನ್ನು ಎದುರಿಸಲು ಸಿದ್ಧತೆ ಮಾಡಿಕೊಳ್ಳಲು ಹಾಗೂ ‘ರಾಷ್ಟ್ರೀಯ ಆರೋಗ್ಯ ನೀತಿ–2017’ರಲ್ಲಿ ಘೋಷಿಸಲಾಗಿರುವ ಗುರಿ ಸಾಧಿಸಲು ಸಹ ಈ ನಿಧಿಯನ್ನು ಬಳಸಲಾಗುವುದು. ‘ಈ ನಿಧಿಯ ನಿರ್ವಹಣೆ ಮತ್ತು ಆಡಳಿತವನ್ನು ಆರೋಗ್ಯ ಸಚಿ ವಾಲಯ ನಡೆಸಲಿದೆ. ಆರೋಗ್ಯ ಸಂಬಂಧಿ ಯೋಜನೆಗಳಿಗೆ ಆಗುವ ವೆಚ್ಚಗಳನ್ನು ಮೊದಲು ಈ ನಿಧಿ ಯಿಂದ ಭರಿಸಲಾಗುವುದು. ಅದಾದ ಬಳಿಕ ಬಜೆಟ್‌ನಲ್ಲಿ ನೀಡ ಲಾದ ಅನುದಾನವನ್ನು ಬಳಕೆ ಮಾಡಲಾಗುವುದು.ನಿಧಿಯಲ್ಲಿ ಉಳಿದಿರುವ ಹಣವು ಆರ್ಥಿಕ ವರ್ಷದ ಅಂತ್ಯದಲ್ಲಿ ರದ್ದಾಗುವುದಿಲ್ಲ ಎಂಬ ಖಾತರಿ ಇರುವು ದರಿಂದ, ಇರುವ ಸಂಪನ್ಮೂಲವನ್ನು ಸಮರ್ಥವಾಗಿ ಬಳಸಿಕೊಂಡು ಉತ್ತಮ ಮತ್ತು ಕೈಗೆಟಕುವ ದರದಲ್ಲಿ ಆರೋಗ್ಯ ಸೇವೆಗಳನ್ನು ನೀಡಲು ಸಾಧ್ಯವಾಗಲಿದೆ ಎಂಬುದು ಈ ನಿಧಿಯ ಪ್ರಮುಖ ಲಾಭ’ ಎಂದು ಸರ್ಕಾರ ಹೇಳಿದೆ.

ADVERTISEMENT

2018ರ ಬಜೆಟ್‌ ಭಾಷಣದಲ್ಲಿ ಅಂದಿನ ವಿತ್ತ ಸಚಿವ ಅರುಣ್‌ ಜೇಟ್ಲಿ ,ಆಯುಷ್ಮಾನ್‌ ಭಾರತ್‌ ಯೋಜನೆಯನ್ನು ಘೋಷಿಸುವುದರ ಜತೆಗೆ, ಆಗ ಜಾರಿಯಲ್ಲಿದ್ದ ಶೇ 3ರಷ್ಟು ಶಿಕ್ಷಣ ಸೆಸ್‌ಅನ್ನು ಶೇ 4ಕ್ಕೆ ಹೆಚ್ಚಿಸಿ, ‘ಆರೋಗ್ಯ ಮತ್ತು ಶಿಕ್ಷಣ ಸೆಸ್‌’ ಆಗಿ ಬದಲಿಸುವುದಾಗಿ ತಿಳಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.