ADVERTISEMENT

ಪ್ರಚೋದನಾಕಾರಿ, ನಕಲಿ ಮಾಹಿತಿ: ಜಾಲತಾಣಗಳ ವಿವಿಧ ವೇದಿಕೆ ವಿರುದ್ಧ ಕ್ರಮ

ಪಿಟಿಐ
Published 8 ಜನವರಿ 2022, 13:06 IST
Last Updated 8 ಜನವರಿ 2022, 13:06 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ನವದೆಹಲಿ: ನಕಲಿ ಮತ್ತು ಪ್ರಚೋದನಾಕಾರಿ ಮಾಹಿತಿಗಳನ್ನು ಟ್ವಿಟರ್‌, ಯೂಟ್ಯೂಬ್ ಮತ್ತು ಫೇಸ್‌ಬುಕ್‌ನಲ್ಲಿ ಪ್ರಸರಣ ಮಾಡುತ್ತಿದ್ದ ಹಲವು ವೇದಿಕೆಗಳನ್ನು ಕೇಂದ್ರ ಸರ್ಕಾರ ತಡೆಹಿಡಿದಿದೆ.

ಮೂಲಗಳ ಪ್ರಕಾರ, 73 ಟ್ವಿಟರ್‌ ಖಾತೆಗಳು, ಯೂಟ್ಯೂಬ್‌ನಲ್ಲಿನ ನಾಲ್ಕು ಅಡಕಗಳು ಮತ್ತು ಇನ್‌ಸ್ಟಾಗ್ರಾಂನಲ್ಲಿನ ಒಂದು ಗೇಮ್‌ ಅನ್ನು ಗುರುತಿಸಲಾಗಿದೆ.

ಈ ವೇದಿಕೆಗಳ ನಿರ್ವಾಹಕರು, ಮಾಲೀಕರನ್ನು ಗುರುತಿಸಲಾಗುತ್ತಿದ್ದು, ಕಾಯ್ದೆ ಪ್ರಕಾರ ಶಿಕ್ಷೆಗೆ ಒಳ‍ಪಡಿಸಲು ಕ್ರಮಜರುಗಿಸಲಾಗುವುದು ಎಂದು ಮಾಹಿತಿ ತಂತ್ರಜ್ಞಾನ ಖಾತೆ ರಾಜ್ಯ ಸಚಿವ ರಾಜೀವ್‌ ಚಂದ್ರಶೇಖರ್‌ ತಿಳಿಸಿದರು.

ADVERTISEMENT

ದ್ವೇಷಪೂರಿತ ಪೋಸ್ಟ್‌ಗಳ ವಿರುದ್ಧ ಹಲವು ಕಠಿಣ ಕ್ರಮಗಳ ನಂತರವೂ ಮೂಲಗಳ ಪ್ರಕಾರ, ಸಚಿವ ಸಂಪುಟ ಚರ್ಚೆ ಕುರಿತು ಆಕ್ಷೇಪಾರ್ಹ ಅಡಕಗಳು, ಪ್ರಧಾನಿ ಅವರನ್ನು ಅವಹೇಳನ ಮಾಡಿ ಅನಿಮೇಟ್‌ ಮಾಡಿದ ನಕಲಿ ವಿಡಿಯೊಗಳು, ಹಿಂದೂ ಮಹಿಳೆಯರಿಗೆ ಅಪಮಾನಿಸುವ ಪೋಸ್ಟ್‌ಗಳನ್ನು ಜಾಲತಾಣಗಳಲ್ಲಿ ಹರಿಯಬಿಡಲಾಗಿತ್ತು.

ವಿಶ್ವಾಸಾರ್ಹ ಮತ್ತು ಸುರಕ್ಷಿತ ಇಂಟರ್‌ನೆಟ್‌ ಕುರಿತ ಕೇಂದ್ರದ ಕಾರ್ಯಪಡೆಯು ಕಾರ್ಯ ನಿರ್ವಹಿಸುತ್ತಿದ್ದು, ಜಾಲತಾಣದ ಇಂತಹ ವೇದಿಕೆಗಳನ್ನು ಗುರುತಿಸಿ ತಡೆಹಿಡಿಯಲಾಗಿದೆ ಎಂದು ಚಂದ್ರಶೇಖರ್‌ ಟ್ವೀಟ್‌ ಮಾಡಿದ್ದಾರೆ.

ಇಂತಹ ಅಡಕಗಳ ವಿರುದ್ಧ ಕ್ರಮಜರುಗಿಸಬೇಕು ಎಂದು ಒತ್ತಾಯಿಸಿದ್ದ ಟ್ವೀಟ್‌ಗೆ ಪ್ರತಿಕ್ರಿಯಿಸಿದ್ದ ಸಚಿವ ರಾಜೀವ್ ಚಂದ್ರಶೇಖರ್ ಅವರು, ಈ ನಿಟ್ಟಿನಲ್ಲಿ ಕ್ರಮವಹಿಸಲಾಗುತ್ತಿದೆ ಎಂದು ಪ್ರತಿಕ್ರಿಯಿಸಿದ್ದರು.

ಸಿಖ್‌ ಸಮುದಾಯದ ವಿರುದ್ಧವಾಗಿ ಕೇಂದ್ರ ಸಚಿವ ಸಂಪುಟ ಸಭೆ ನಡೆದಿದೆ ಎಂಬಂತೆ ಬಿಂಬಿಸಿ ವಿಡಿಯೊ ಹರಿಬಿಟ್ಟಿದ್ದ ಪ್ರಕರಣ ಕುರಿತು ದೆಹಲಿ ಪೊಲೀಸರು ಶುಕ್ರವಾರ ಪ್ರಕರಣ ದಾಖಲಿಸಿಕೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.