ADVERTISEMENT

ಕನ್ನಡಿಗ ಬೋಪಣ್ಣ ಸುಪ್ರೀಂಕೋರ್ಟ್‌ ನ್ಯಾಯಮೂರ್ತಿ

ಸುಪ್ರೀಂಕೋರ್ಟ್‌ಗೆ ನಾಲ್ವರು ನ್ಯಾಯಮೂರ್ತಿಗಳ ನೇಮಕಕ್ಕೆ ಕೇಂದ್ರ ಒಪ್ಪಿಗೆ

ಪಿಟಿಐ
Published 22 ಮೇ 2019, 19:48 IST
Last Updated 22 ಮೇ 2019, 19:48 IST
ಬೋಪಣ್ಣ
ಬೋಪಣ್ಣ   

ನವದೆಹಲಿ: ಕರ್ನಾಟಕದವರಾದ ಗುವಾಹಟಿ ಹೈಕೋರ್ಟ್‌ನ ಮುಖ್ಯನ್ಯಾಯಮೂರ್ತಿ ಎ.ಎಸ್‌. ಬೋಪಣ್ಣ ಸೇರಿದಂತೆ ನಾಲ್ವರು ನ್ಯಾಯಮೂರ್ತಿಗಳನ್ನು ಸುಪ್ರೀಂಕೋರ್ಟ್‌ಗೆ ನೇಮಕ ಮಾಡಲು ಕೇಂದ್ರ ಸರ್ಕಾರ ಒಪ್ಪಿಗೆ ನೀಡಿದೆ ಎಂದು ಮೂಲಗಳು ತಿಳಿಸಿವೆ.

ಪ್ರಸ್ತುತ ಸುಪ್ರೀಂ ಕೋರ್ಟ್‌ನಲ್ಲಿ 27 ನ್ಯಾಯಮೂರ್ತಿಗಳಿದ್ದು, ಈ ನೇಮಕಾತಿ ನಂತರ ಮುಖ್ಯ ನ್ಯಾಯಮೂರ್ತಿ ಒಳಗೊಂಡಂತೆ ಸುಪ್ರೀಂಕೋರ್ಟ್‌ ನ್ಯಾಯಮೂರ್ತಿಗಳ ಸಂಖ್ಯೆ 31ಕ್ಕೆ ಏರಿಕೆಯಾಗಲಿದೆ.

ನ್ಯಾಯಮೂರ್ತಿಗಳಾದಅನಿರುದ್ಧ್‌ ಬೋಸ್‌, ಎ.ಎಸ್‌. ಬೋಪ್ಪಣ್ಣ, ಬಿ.ಆರ್‌. ಗವಾಯಿ ಮತ್ತು ಸೂರ್ಯಕಾಂತ್‌ ಅವರನ್ನು ಸುಪ್ರೀಂಕೋರ್ಟ್‌ ನ್ಯಾಯಮೂರ್ತಿಗಳನ್ನಾಗಿ ನೇಮಕ ಮಾಡುವುದಕ್ಕೆ ಕೊಲಿಜಿಯಂ ಶಿಫಾರಸು ಮಾಡಿತ್ತು. ಇದಕ್ಕೆ ಕೇಂದ್ರ ಸರ್ಕಾರ ಸಮ್ಮತಿ ಸೂಚಿಸಿದೆ. ರಾಷ್ಟ್ರಪತಿ ಸಹಿ ನಂತರ ನೇಮಕಾತಿಯ ಅಧಿಸೂಚನೆ ಹೊರಬೀಳಲಿದೆ.

ADVERTISEMENT

ನ್ಯಾಯಮೂರ್ತಿ ಬೋಪಣ್ಣ ಮತ್ತು ಬೋಸ್‌ ಅವರಿಗೆ ಬಡ್ತಿ ನೀಡುವ ಸಂಬಂಧ ಕೇಂದ್ರ ಸರ್ಕಾರ ಮೊದಲಿಗೆ ಆಕ್ಷೇಪ ವ್ಯಕ್ತಪಡಿಸಿತ್ತು.

ಆದರೆ, ಈ ಆಕ್ಷೇಪವನ್ನು ತಿರಸ್ಕರಿಸಿದ,ಮುಖ್ಯನ್ಯಾಯಮೂರ್ತಿ ರಂಜನ್‌ ಗೊಗೊಯಿ ನೇತೃತ್ವದ ಕೊಲಿಜಿಯಂ, ಈ ಇಬ್ಬರೂ ನ್ಯಾಯಮೂರ್ತಿಗಳ ಹೆಸರನ್ನು ಎರಡನೇ ಬಾರಿಗೆ ಶಿಫಾರಸು ಮಾಡಿತ್ತು. ಅಲ್ಲದೆ ‘ನ್ಯಾಯಮೂರ್ತಿಗಳ ಸಾಮರ್ಥ್ಯ, ನಡವಳಿಕೆ ಹಾಗೂ ಪ್ರಾಮಾಣಿಕತೆಗೆ ಕುಂದು ತರುವಂತಹ ಯಾವುದೇ ಅಂಶಗಳು ಕಂಡುಬಂದಿಲ್ಲ’ ಎಂದು ಪ್ರತಿಪಾದಿಸಿತ್ತು.

ಪ್ರಸ್ತುತ ಜಾರ್ಖಂಡ್ ಹೈಕೋರ್ಟ್‌ ಮುಖ್ಯನ್ಯಾಯಮೂರ್ತಿಯಾಗಿರುವ ನ್ಯಾ.ಬೋಸ್‌ ಸೇವಾ ಜ್ಯೇಷ್ಠತೆಗೆ ಸಂಬಂಧಿಸಿದಂತೆ ಅಖಿಲ ಭಾರತ ಮಟ್ಟದಲ್ಲಿ 12ನೇ ಸ್ಥಾನದಲ್ಲಿದ್ದರೆ, ನ್ಯಾ.ಬೋಪಣ್ಣ36ನೇ ಸ್ಥಾನದಲ್ಲಿದ್ದಾರೆ.

ನ್ಯಾ. ಗವಾಯಿ ಅವರು ಪ್ರಸ್ತುತ ಬಾಂಬೆ ಹೈಕೋರ್ಟ್‌ ನ್ಯಾಯಮೂರ್ತಿಯಾಗಿದ್ದಾರೆ. ನ್ಯಾ. ಸೂರ್ಯಕಾಂತ್‌ ಹಿಮಾಚಲ ಪ್ರದೇಶ ಹೈಕೋರ್ಟ್‌ನಲ್ಲಿ ಮುಖ್ಯನ್ಯಾಯಮೂರ್ತಿಯಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.