ADVERTISEMENT

ಇಷ್ಟದ ಸ್ಮಾರ್ಟ್‌ಫೋನ್‌ ಕೊಳ್ಳಲು ಮಹಿಳೆಯರ ಖಾತೆಗೇ ಹಣ: ರಾಜಸ್ಥಾನ ಸರ್ಕಾರ ಚಿಂತನೆ

ಉಚಿತ ಸ್ಮಾರ್ಟ್‌ ಫೋನ್‌ ವಿತರಿಸುವುದಾಗಿ ಬಜೆಟ್‌ನಲ್ಲಿ ಹೇಳಿದ್ದ ಸಿಎಂ: ರಕ್ಷಾ ಬಂಧನದ ದಿನ ಜಾರಿಗೆ ಬರಲಿರುವ ಕಾರ್ಯಕ್ರಮದಲ್ಲಿ ಸಣ್ಣ ಬದಲಾವಣೆ ಮಾಡಲು ಯೋಚನೆ

ಪಿಟಿಐ
Published 16 ಜೂನ್ 2023, 3:09 IST
Last Updated 16 ಜೂನ್ 2023, 3:09 IST
ಮಹಿಳೆಯರು ಸ್ಮಾರ್ಟ್‌ ಫೋನ್‌ ಬಳಸುತ್ತಿರುವುದು
ಮಹಿಳೆಯರು ಸ್ಮಾರ್ಟ್‌ ಫೋನ್‌ ಬಳಸುತ್ತಿರುವುದು    Getty Images

ಜೈಪುರ: ರಾಜಸ್ಥಾನದಲ್ಲಿ ರಕ್ಷಾ ಬಂಧನದಂದು ಮಹಿಳೆಯರಿಗೆ ಮೊಬೈಲ್‌ ಫೋನ್‌ ವಿತರಣಾ ಕಾರ್ಯಕ್ರಮ ಜಾರಿಗೊಳಿಸುವಾಗಿ ಘೋಷಣೆ ಮಾಡಿರುವ ಸರ್ಕಾರ, ಸದ್ಯ ಯೋಜನೆಯಲ್ಲಿ ಸಣ್ಣ ಬದಲಾವಣೆ ಮಾಡುವ ಬಗ್ಗೆ ಚಿಂತಿಸುತ್ತಿದೆ. ಮಹಿಳೆಯರು ಅವರ ಇಷ್ಟದ ಸ್ಮಾರ್ಟ್‌ಫೋನ್ ಖರೀದಿಸಲು ನಿರ್ದಿಷ್ಟ ಮೊತ್ತದ ಹಣವನ್ನು ಅವರ ಖಾತೆಗೇ ಜಮೆ ಮಾಡುವ ಚಿಂತನೆಯನ್ನು ಸರ್ಕಾರ ಮಾಡುತ್ತಿದೆ ಎಂದು ಮುಖ್ಯಮಂತ್ರಿ ಅಶೋಕ್ ಗೆಹ್ಲೋತ್‌ ಗುರುವಾರ ಹೇಳಿದ್ದಾರೆ.

ಫಲಾನುಭವಿಗಳ ಬ್ಯಾಂಕ್ ಖಾತೆಗೆ ಎಷ್ಟು ಮೊತ್ತವನ್ನು ವರ್ಗಾಯಿಸಬೇಕು ಎಂಬುದರ ಕುರಿತು ಚರ್ಚಿಸಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.

ರಾಜ್ಯದ 1.35 ಕೋಟಿ ಮಹಿಳೆಯರಿಗೆ ಸ್ಮಾರ್ಟ್‌ಫೋನ್ ನೀಡುವುದಾಗಿ ಸಿಎಂ ಗೆಹ್ಲೋತ್‌ ರಾಜ್ಯ ಬಜೆಟ್‌ನಲ್ಲಿ ಘೋಷಿಸಿದ್ದರು. ರಕ್ಷಾ ಬಂಧನದಂದು (ಆಗಸ್ಟ್ 30) ಕಾರ್ಯಕ್ರಮ ಆರಂಭವಾಗಲಿದ್ದು, ಸರ್ಕಾರವು ಹಂತ ಹಂತವಾಗಿ ಸ್ಮಾರ್ಟ್‌ಫೋನ್‌ಗಳನ್ನು ನೀಡಲಿದೆ ಎಂದು ಗೆಹ್ಲೋತ್‌ ಏಪ್ರಿಲ್‌ನಲ್ಲಿ ಹೇಳಿದ್ದರು.

ADVERTISEMENT

ಈ ವಿಷಯದ ಕುರಿತು ಗುರುವಾರ ಮಾಧ್ಯಮಗಳೊಂದಿಗೆ ಮಾತನಾಡಿರುವ ಅವರು, ‘ಈಗ ಹಲವು ವಿಶೇಷಣಗಳನ್ನು ಒಳಗೊಂಡ ಬಗೆಬಗೆಯ ಫೋನ್‌ಗಳು ಮಾರುಕಟ್ಟೆಯಲ್ಲಿ ಲಭ್ಯವಿವೆ. ಜನರು ಅವರ ಆಯ್ಕೆಯ ಫೋನ್‌ ಖರೀದಿಸಲು ಬಯಸುತ್ತಾರೆ. ಮಾರುಕಟ್ಟೆಯಲ್ಲಿ ನಿಮ್ಮ ಆಯ್ಕೆಯ ಫೋನ್‌ ನಿಮಗೆ ಸಿಗುತ್ತದೆ. ಸದ್ಯ ರಾಜ್ಯದಲ್ಲಿ ಹಣದುಬ್ಬರ ಪರಿಹಾರ ಶಿಬಿರಗಳನ್ನು ಸ್ಥಾಪಿಸಲಾಗಿದ್ದು, ಅದರಂತೆಯೇ ಕೌಂಟರ್‌ಗಳನ್ನು ತೆರೆದು ಜನರ ಆಯ್ಕೆಯ ಫೋನ್‌ಗಳನ್ನು ನೀಡಲು ಸಾಧ್ಯವೇ ಎಂಬುದರ ಕುರಿತು ನಾವು ಕಂಪನಿಗಳೊಂದಿಗೂ ಮಾತನಾಡುತ್ತಿದ್ದೇವೆ. ಇನ್ನೊಂದೆಡೆ, ಫೋನ್ ವಿತರಿಸುವುದಕ್ಕೆ ಬದಲಾಗಿ ಮಹಿಳಾ ಫಲಾನುಭವಿಗಳ ಬ್ಯಾಂಕ್ ಖಾತೆಗಳಿಗೆ ನಿಗದಿತ ಮೊತ್ತವನ್ನು ವರ್ಗಾಯಿಸಲು ಸರ್ಕಾರ ಚಿಂತಿಸುತ್ತಿದೆ’ ಎಂದೂ ಗೆಹ್ಲೋತ್‌ ಮಾಹಿತಿ ನೀಡಿದರು.

ಮಹಿಳೆಯರ ಸಬಲೀಕರಣಗೊಳಿಸುವ ಉದ್ದೇಶದಿಂದ ಸ್ಮಾರ್ಟ್‌ಫೋನ್‌ಗಳನ್ನು ಒದಗಿಸಲಾಗುತ್ತಿದೆ ಎಂದು ಗೆಹ್ಲೋತ್‌ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.