ADVERTISEMENT

ಎಲ್ಲ ಚುನಾವಣೆಗಳಿಗೆ ಒಂದೇ ಮತದಾರರ ಪಟ್ಟಿ: ಕೇಂದ್ರದ ಚಿಂತನೆ

ಪಿಟಿಐ
Published 29 ಆಗಸ್ಟ್ 2020, 13:28 IST
Last Updated 29 ಆಗಸ್ಟ್ 2020, 13:28 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ನವದೆಹಲಿ: ಲೋಕಸಭೆ, ವಿಧಾನಸಭೆ ಮತ್ತು ಸ್ಥಳೀಯ ಸಂಸ್ಥೆಗಳ ಚುನಾವಣೆಗಳ ಮತಪಟ್ಟಿಯಲ್ಲಿ ಇರುವ ಗೊಂದಲ ತಪ್ಪಿಸುವ ಸಲುವಾಗಿ ಏಕರೂಪದ ಮತದಾರರ ಪಟ್ಟಿ ರೂಪಿಸುವ ಕುರಿತು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ.

ಸದ್ಯ, ಚುನಾವಣಾ ಆಯೋಗ ಲೋಕಸಭೆ ಮತ್ತು ವಿಧಾನಸಭೆ ಚುನಾವಣೆಗೆ ಮತದಾರರ ಪಟ್ಟಿ ರೂಪಿಸುತ್ತಿದೆ. ರಾಜ್ಯದ ಆಯೋಗಗಳು ನಗರಸಭೆ, ಪಂಚಾಯಿತಿ ಚುನಾವಣೆಗಳಿಗೆ ಪ್ರತ್ಯೇಕವಾಗಿ ಪಟ್ಟಿ ರಚಿಸುತ್ತಿದೆ. ಬಹುತೇಕ ರಾಜ್ಯಗಳಲ್ಲಿ ಸ್ಥಳೀಯ ಸಂಸ್ಥೆಗಳಿಗೆ ಮತದಾರರ ಪಟ್ಟಿ ರಚಿಸಲು ಕೇಂದ್ರ ಆಯೋಗ ರಚಿಸುವ ಮತದಾರ ಪಟ್ಟಿಯನ್ನೇ ಆಧಾರವಾಗಿ ಬಳಸಲಾಗುತ್ತದೆ.

ಈಗ ಕೇಂದ್ರ ಸರ್ಕಾರವು ಎಲ್ಲ ಚುನಾವಣೆಗಳಿಗೆ ಅನ್ವಯವಾಗುವಂತೆ ಏಕರೂಪದ ಮತದಾರ ಪಟ್ಟಿ ರೂಪಿಸುವ ಚಿಂತನೆ ನಡೆಸಿದೆ. ಇದರಿಂದ ಪ್ರತ್ಯೇಕ ಪಟ್ಟಿ ತಯಾರಿಸುವುದು ತಪ್ಪಲಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ADVERTISEMENT

ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಪ್ರತ್ಯೇಕ ಮತದಾರರ ಪಟ್ಟಿ ರಚಿಸಿಕೊಳ್ಳಲು ಅಥವಾ ಕೇಂದ್ರ ಆಯೋಗ ರೂಪಿಸಿರುವ ಮತದಾರರ ಪಟ್ಟಿಯನ್ನೇ ಬಳಸಿಕೊಳ್ಳಲು ರಾಜ್ಯಗಳಿಗೆ ಅಧಿಕಾರವಿದೆ. ಪ್ರತಿ ಬಾರಿ ಚುನಾವಣೆ ಸಂದರ್ಭದಲ್ಲಿ ಪ್ರತ್ಯೇಕ ಪಟ್ಟಿ ತಯಾರಿಸುವ ಕಸರತ್ತು ತಪ್ಪಿಸಲು ಏಕರೂಪದ ಪಟ್ಟಿ ಅಗತ್ಯ ಎಂದು ಅಧಿಕಾರಿಯೊಬ್ಬರು ಪ್ರತಿಪಾದಿಸಿದರು.

ಮತದಾರರ ಪಟ್ಟಿ ತಯಾರಿಸಲು ಎರಡು ಬಾರಿ ಹಣ ವೆಚ್ಚ ಮಾಡುವುದನ್ನು ಇದರಿಂದ ತಪ್ಪಿಸಬಹುದಾಗಿದೆ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.