ADVERTISEMENT

ಆರನೇ ಸುತ್ತಿನ ಮಾತುಕತೆ ಅಪೂರ್ಣ; ಜ.4ಕ್ಕೆ ಮತ್ತೆ ಸಭೆ

ಎರಡು ವಿಚಾರಗಳಲ್ಲಿ ಸಹಮತ

ಪಿಟಿಐ
Published 30 ಡಿಸೆಂಬರ್ 2020, 20:35 IST
Last Updated 30 ಡಿಸೆಂಬರ್ 2020, 20:35 IST
ಸಿಂಘು ಗಡಿಯಲ್ಲಿ ಪ್ರತಿಭಟನೆ ನಡೆಸಿದ ರೈತರೊಬ್ಬರು ಬುಧವಾರ ತ್ರಿವರ್ಣ ಧ್ವಜ ಹಿಡಿದಿದ್ದರು –ಪಿಟಿಐ ಚಿತ್ರ
ಸಿಂಘು ಗಡಿಯಲ್ಲಿ ಪ್ರತಿಭಟನೆ ನಡೆಸಿದ ರೈತರೊಬ್ಬರು ಬುಧವಾರ ತ್ರಿವರ್ಣ ಧ್ವಜ ಹಿಡಿದಿದ್ದರು –ಪಿಟಿಐ ಚಿತ್ರ   

ನವದೆಹಲಿ: ರೈತ ಸಂಘಟನೆಗಳ ಪ್ರತಿನಿಧಿಗಳು ಹಾಗೂ ಕೇಂದ್ರ ಸರ್ಕಾರದ ನಡುವೆ ಬುಧವಾರ ನಡೆದ ಆರನೇ ಸುತ್ತಿನ ಮಾತುಕತೆ ಅಪೂರ್ಣಗೊಂಡಿದೆ.

ವಿದ್ಯುತ್ ದರ ಏರಿಕೆ ಹಾಗೂ ಕೃಷಿತ್ಯಾಜ್ಯ ಸುಟ್ಟರೆ ರೈತರಿಗೆ ದಂಡ ವಿಧಿಸುವ ವಿಚಾರಗಳಲ್ಲಿ ಸಹಮತ ಏರ್ಪಟ್ಟಿದೆ. ಆದರೆ, ವಿವಾದಾಸ್ಪದ ಮೂರು ಕೃಷಿ ಮಾರುಕಟ್ಟೆ ಕಾಯ್ದೆಗಳ ರದ್ದತಿ ಹಾಗೂ ಕನಿಷ್ಠ ಬೆಂಬಲ ಬೆಲೆಗೆ (ಎಂಎಸ್‌ಪಿ) ಕಾನೂನಿನ ಖಾತರಿ ನೀಡುವ ರೈತರ ಬೇಡಿಕೆಗಳಿಗೆ ಸಭೆಯಲ್ಲಿ ಪರಿಹಾರ ಸಿಕ್ಕಿಲ್ಲ.

ಮೂವರು ಕೇಂದ್ರ ಸಚಿವರು ಹಾಗೂ ರೈತ ಸಂಘಟನೆಗಳ 41 ಮಂದಿ ಪ್ರತಿನಿಧಿಗಳ ನಡುವೆ ಐದು ಗಂಟೆಗಳ ಕಾಲ ಸಭೆ ನಡೆಯಿತು. ‘ಮಾತುಕತೆಯ ಕಾರ್ಯಸೂಚಿಯಲ್ಲಿನ ನಾಲ್ಕು ವಿಷಯಗಳ ಪೈಕಿ ಎರಡರಲ್ಲಿ ಪರಸ್ಪರ ಸಮ್ಮತಿ ಏರ್ಪಟ್ಟಿದೆ. ಸಭೆ ಶೇ 50ರಷ್ಟು ಪ್ರಗತಿ ಸಾಧಿಸಿದೆ. ಉಳಿದ ಎರಡು ವಿಚಾರಗಳ ಕುರಿತು ಜನವರಿ 4ರಂದು ಚರ್ಚೆ ಮುಂದುವರಿಯಲಿದೆ’ ಎಂದು ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಹೇಳಿದ್ದಾರೆ.

ADVERTISEMENT

‘ಮೂರು ಕೃಷಿ ಕಾಯ್ದೆಗಳನ್ನು ರದ್ದುಗೊಳಿಸುವಂತೆ ರೈತ ನಾಯಕರು ಒತ್ತಾಯಿಸುತ್ತಲೇ ಇದ್ದರು. ಆದರೆ, ಸರ್ಕಾರದ ಕಡೆಯಿಂದ ಕಾಯ್ದೆಗಳ ಪ್ರಯೋಜನಗಳನ್ನು ವಿವರಿಸಲು ಪ್ರಯತ್ನಿಸಲಾಯಿತು. ರೈತರು ಎದುರಿಸುತ್ತಿರುವ ನಿರ್ದಿಷ್ಟ ಸಮಸ್ಯೆಗಳನ್ನು ತಿಳಿದುಕೊಳ್ಳಲು ಸಭೆಯಲ್ಲಿ ಪ್ರಯತ್ನಿಸಲಾಯಿತು’ ಎಂದು ತೋಮರ್ ಹೇಳಿದ್ದಾರೆ. ವಯಸ್ಸಾದವರು, ಮಕ್ಕಳು ಹಾಗೂ ಮಹಿಳೆಯರು ತಮ್ಮ ಊರುಗಳಿಗೆ ವಾಪಸಾಗಬೇಕು ಎಂದು ಮನವಿ ಮಾಡಿದರು.

ಕನಿಷ್ಠ ಬೆಂಬಲ ಬೆಲೆಗೆ ಕಾನೂನು ಖಾತರಿ ನೀಡುವ ರೈತರ ಬೇಡಿಕೆಗೆ ಸರ್ಕಾರ ಈಗಾಗಲೇ ಸ್ಪಂದಿಸಿದ್ದು, ಲಿಖಿತ ಭರವಸೆ ನೀಡಲು ಸಿದ್ಧವಿದೆ ಎಂದು ಸಚಿವರು ಹೇಳಿದರು. ಸಚಿವರಾದ ಪೀಯೂಷ್ ಗೋಯಲ್ ಮತ್ತು ಸೋಮ್ ಪ್ರಕಾಶ್ ಸಭೆಯಲ್ಲಿದ್ದರು.

*
ವಿದ್ಯುತ್ ಮಸೂದೆ, ಕೃಷಿ ತ್ಯಾಜ್ಯ ಸುಡುವಿಕೆ ಸುಗ್ರೀವಾಜ್ಞೆಗಳ ಮೇಲೆ ಸಭೆ ಕೇಂದ್ರೀಕೃತವಾಗಿತ್ತು. ಮುಂದಿನ ಸಭೆ ಎಂಎಸ್‌ಪಿ, ಕೃಷಿ ಕಾನೂನುಗಳನ್ನು ಕೇಂದ್ರೀಕರಿಸಲಿದೆ.
–ಕಲ್ವಂತ್‌ಸಿಂಗ್ ಸಂಧು, ರೈತ ನಾಯಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.