ADVERTISEMENT

ಕಲ್ಲಿದ್ದಲು ಬೇಡಿಕೆ ಪೂರೈಸಲು ಕೇಂದ್ರ ಪ್ರಯತ್ನ: ಜೋಶಿ

​ಪ್ರಜಾವಾಣಿ ವಾರ್ತೆ
Published 12 ಅಕ್ಟೋಬರ್ 2021, 16:01 IST
Last Updated 12 ಅಕ್ಟೋಬರ್ 2021, 16:01 IST
ಪ್ರಲ್ಹಾದ್ ಜೋಶಿ
ಪ್ರಲ್ಹಾದ್ ಜೋಶಿ   

ನವದೆಹಲಿ(ಪಿಟಿಐ): ವಿದ್ಯುತ್ ಉತ್ಪಾದಕರ ಕಲ್ಲಿದ್ದಲು ಬೇಡಿಕೆ ಪೂರೈಸಲು ಕೇಂದ್ರ ಸರ್ಕಾರ ಎಲ್ಲ ಪ್ರಯತ್ನಗಳನ್ನು ಮಾಡುತ್ತಿದೆ. ಪ್ರತಿ ದಿನ ಪೂರೈಸುತ್ತಿರುವ ಪ್ರಸ್ತುತ 1.95 ದಶಲಕ್ಷ ಟನ್‌ ಕಲ್ಲಿದ್ದಲನ್ನು ಶೀಘ್ರದಲ್ಲೇ ಎರಡು ದಶಲಕ್ಷ ಟನ್‌ಗಳಿಗೆ ಹೆಚ್ಚಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಕೇಂದ್ರ ಕಲ್ಲಿದ್ದಲು ಸಚಿವ ಪ್ರಲ್ಹಾದ ಜೋಶಿ ಮಂಗಳವಾರ ಹೇಳಿದರು.

ಕಲ್ಲಿದ್ದಲು ವಾಣಿಜ್ಯ ಗಣಿಗಾರಿಕೆಯ ಮೂರನೇ ಹಂತದ ಹರಾಜಿನ ಅನಾವರಣ ಕಾರ್ಯಕ್ರಮದಲ್ಲಿ ಸಚಿವರು ಮಾತನಾಡಿದರು.

ದೇಶದ ವಿದ್ಯುತ್ ಸ್ಥಾವರಗಳು ಕಲ್ಲಿದ್ದಲು ಕೊರತೆ ಎದುರಿಸುತ್ತಿರುವ ಸಮಯದಲ್ಲಿ ಸಚಿವರು ಈ ಹೇಳಿಕೆ ನೀಡಿದ್ದಾರೆ.

ADVERTISEMENT

‘ಕಲ್ಲಿದ್ದಲು ಬೇಡಿಕೆಯನ್ನು ಪೂರೈಸಲು ಸಚಿವಾಲಯ ಮತ್ತು ಕೋಲ್ ಇಂಡಿಯಾ ಲಿಮಿಟೆಡ್ (ಸಿಐಎಲ್) ಪ್ರಯತ್ನಿಸುತ್ತಿವೆ. ಸೋಮವಾರ ನಾವು ಸುಮಾರು 1.95 ದಶಲಕ್ಷ ಟನ್ ಕಲ್ಲಿದ್ದಲು ಪೂರೈಸಿದ್ದೇವೆ. ಸಿಐಎಲ್‌ನಿಂದ ಸುಮಾರು 1.6 ದಶಲಕ್ಷ ಟನ್ ಮತ್ತು ಸಿಂಗರೇನಿ ಕಾಲಿಯರೀಸ್ ಕಂಪನಿ ಲಿಮಿಟೆಡ್‌ ಹಾಗೂ ಇತರ ಕಂಪನಿಗಳಿಂದ ಸೇರಿ 1.95 ದಶಲಕ್ಷ ಟನ್ ಕಲ್ಲಿದ್ದಲು ಪೂರೈಸಿದ್ದೇವೆ’ ಎಂದು ಸಚಿವರು ಹೇಳಿದರು.

‘ವಿದ್ಯುತ್ ಉತ್ಪಾದನೆಗೆ ಅಗತ್ಯವಿರುವಷ್ಟು ಕಲ್ಲಿದ್ದಲನ್ನು ಕಲ್ಲಿದ್ದಲು ಸಚಿವಾಲಯ ಒದಗಿಸಲಿದೆ. ಮುಂಗಾರು ಕ್ಷೀಣಿಸುತ್ತಿದ್ದಂತೆ ಕಲ್ಲಿದ್ದಲು ಪೂರೈಕೆ ಹೆಚ್ಚಾಗಲಿದೆ. ಕೋಲ್ ಇಂಡಿಯಾದಲ್ಲಿ ಸುಮಾರು 22 ದಿನಗಳಿಗೆ ಬೇಕಾಗುವಷ್ಟು ದಾಸ್ತಾನು ಹೊಂದಿದ್ದೇವೆ. ಮುಂಗಾರು ಕ್ಷೀಣಿಸಿದಂತೆ ಕಲ್ಲಿದ್ದಲು ಪೂರೈಕೆ ಮತ್ತಷ್ಟು ಹೆಚ್ಚಾಗಲಿದೆ. ಅ. 20, 21 ಅಥವಾ ಅದಕ್ಕೂ ಮೊದಲೇ ಎರಡು ದಶಲಕ್ಷ ಟನ್‌ ಪೂರೈಕೆ ಗುರಿ ಸಾಧಿಸಲಿದ್ದೇವೆ’ ಎಂದು ಅವರು ವಿದ್ಯುತ್‌ ಉತ್ಪಾದಕರಿಗೆ ಭರವಸೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.