ADVERTISEMENT

ಲಾಕ್‌ಡೌನ್ ಮುಗಿದ ಬಳಿಕವೂ ಶಾಪಿಂಗ್, ಪ್ರಯಾಣ ಸೇರಿ ಕೆಲ ಚಟುವಟಿಕೆ ಮೇಲೆ ನಿರ್ಬಂಧ

ಉತ್ತರ ಪ್ರದೇಶ ಸೇರಿ ಕೆಲವೆಡೆ ಲಾಕ್‌ಡೌನ್ ಮುಂದುವರಿಕೆ ಸಾಧ್ಯತೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 7 ಏಪ್ರಿಲ್ 2020, 10:13 IST
Last Updated 7 ಏಪ್ರಿಲ್ 2020, 10:13 IST
ಚಂಡೀಗಡದಲ್ಲಿ ಬಸ್ಸುಗಳ ಮೇಲೆ ಸೋಂಕು ನಿವಾರಕ ಸಿಂಪಡಿಸಲಾಯಿತು –ಪಿಟಿಐ ಚಿತ್ರ
ಚಂಡೀಗಡದಲ್ಲಿ ಬಸ್ಸುಗಳ ಮೇಲೆ ಸೋಂಕು ನಿವಾರಕ ಸಿಂಪಡಿಸಲಾಯಿತು –ಪಿಟಿಐ ಚಿತ್ರ   

ನವದೆಹಲಿ: ಕೊರೊನಾ ವೈರಸ್ ಸೋಂಕು (ಕೋವಿಡ್–19) ಹರಡುವುದನ್ನು ತಡೆಯುವ ನಿಟ್ಟಿನಲ್ಲಿ ದೇಶದಾದ್ಯಂತ ಇರುವ ಲಾಕ್‌ಡೌನ್ ಏಪ್ರಿಲ್ 15ರಿಂದ ತೆರವಾಗಲಿದೆ. ಆದರೂ ಪ್ರಯಾಣ, ಚಿತ್ರಮಂದಿರ, ಶಾಪಿಂಗ್ ಸೇರಿದಂತೆ ಹಲವು ಚಟುವಟಿಕೆಗಳ ಮೇಲೆ ನಿರ್ಬಂಧ ಮುಂದುವರಿಸುವ ಬಗ್ಗೆ ಸರ್ಕಾರ ಚಿಂತನೆ ನಡೆಸಿದೆ.

ರೈಲು ಟಿಕೆಟ್ ಕಾಯ್ದಿರಿಸುವ ಮುನ್ನ ಪ್ರಯಾಣಕ್ಕೆ ಕಾರಣವೇನೆಂದು ನಮೂದಿಸಬೇಕಾಗಿ ಬರಬಹುದು ಎನ್ನಲಾಗಿದೆ. ಮಾಹಿತಿ ತಂತ್ರಜ್ಞಾನ ಕ್ಷೇತ್ರದಂತಹ ಸಂಸ್ಥೆಗಳ ನೌಕರರು ಮನೆಯಿಂದಲೇ ಕೆಲಸ ಮಾಡುವಂತೆ ಸರ್ಕಾರ ಉತ್ತೇಜನ ನೀಡುವ ಸಾಧ್ಯತೆ ಇದೆ.

ಕೆಲವು ಪ್ರದೇಶಗಳಲ್ಲಿ ಲಾಕ್‌ಡೌನ್ ಮುಂದುವರಿಯುವ ಸಾಧ್ಯತೆಯೂ ಇದೆ. ಕೊರೊನಾ ಸೋಂಕು ಸ್ಥಳೀಯ ಸಮುದಾಯದ ಮಟ್ಟದಲ್ಲಿ ಹರಡುತ್ತಿದೆ ಎಂದು ಗುರುತಿಸಲಾದ ಮತ್ತು ಅತಿ ಹೆಚ್ಚು ಪ್ರಕರಣಗಳು ದಾಖಲಾದ ಪ್ರದೇಶಗಳ ಲಾಕ್‌ಡೌನ್ ಮುಂದುವರಿಸುವ ಬಗ್ಗೆ ಆರೋಗ್ಯ ಸಚುವಾಲಯ ಸುಳಿವು ನೀಡಿದೆ. ಉತ್ತರ ಪ್ರದೇಶದಲ್ಲಿ ಲಾಕ್‌ಡೌನ್ ಮುಂದುವರಿಯುವ ಸಾಧ್ಯತೆ ಇದೆ ಎನ್ನಲಾಗಿದೆ.

ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಸೋಮವಾರ ನಡೆದ ಸಚಿವ ಸಂಪುಟ ಸಭೆಯಲ್ಲೂ ಲಾಕ್‌ಡೌನ್ ಮುಕ್ತಾಯವಾದ ಬಳಿಕ ಏನೇನು ಕ್ರಮ ಕೈಗೊಳ್ಳಬೇಕು ಎಂಬುದೇ ಹೆಚ್ಚು ಚರ್ಚೆಯಾಗಿದೆ.

ಸರ್ಕಾರಿ ಕಚೇರಿಗಳ ತೆರೆಯುವಿಕೆ, ಆರ್ಥಿಕ ಸುಧಾರಣಾ ಕ್ರಮಗಳಿಗೆ ವೇಗ ನೀಡುವಂತಹ ವಿಷಯಗಳ ಮೇಲಿನ ಚರ್ಚೆಗೆ ಸಂಪುಟ ಸಭೆಯಲ್ಲಿ ಹೆಚ್ಚು ಒತ್ತು ನೀಡಲಾಗಿದೆ.

ಇಲಾಖೆಗಳನ್ನು ಹಂತಹಂತವಾಗಿ ತೆರೆಯುವ ಬಗ್ಗೆ ಪ್ರಧಾನಿ ಸೂಚನೆ ನೀಡಿದ್ದಾರೆ ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.

ಲಾಕ್‌ಡೌನ್ ಮತ್ತು ಸಮಾಜಿಕ ಅಂತರ ಕಾಯ್ದುಕೊಳ್ಳುವಿಕೆ ಜತೆಯಾಗಿ ಸಾಗಬೇಕು. ಲಾಕ್‌ಡೌನ್‌ ಮುಗಿದ ಬಳಿಕದ ಪರಿಸ್ಥಿತಿ ನಿಭಾಯಿಸಲು ಕಾರ್ಯತಂತ್ರ ರೂಪಿಸಬೇಕು ಎಂದೂ ಪ್ರಧಾನಿ ಸೂಚಿಸಿದ್ದಾರೆ.

ಲಾಕ್‌ಡೌನ್‌ ಮುಗಿದ ಬಳಿಕ ತಕ್ಷಣಕ್ಕೆ ಕೈಗೊಳ್ಳಬೇಕಾದ ಕ್ರಮಗಳು ಮತ್ತು ಬಾಕಿ ಉಳಿದಿರುವ ಸುಧಾರಣಾ ಕ್ರಮಗಳನ್ನು ಜಾರಿಗೊಳಿಸಲು ಆಗಬೇಕಾದ ಕೆಲಸಗಳ ಬಗ್ಗೆ ಪ್ರಮುಖ 10 ಅಂಶಗಳ ಪಟ್ಟಿ ಸಿದ್ಧಪಡಿಸಲು ಪ್ರಧಾನಿ ಎಲ್ಲ ಸಚಿವರಿಗೂ ಸೂಚಿಸಿದ್ದಾರೆ.

ಶಾಲಾ–ಕಾಲೇಜು ಪುನರಾರಂಭಿಸುವುದಕ್ಕೆ ಸಂಬಂಧಿಸಿ ಏಪ್ರಿಲ್ 14ರಂದು ಸರ್ಕಾರ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ.

ಸಾರ್ವಜನಿಕ ಸಾರಿಗೆ ಆರಂಭಿಸುವ ಬಗ್ಗೆಯೂ ಚರ್ಚೆಗಳು ನಡೆಯುತ್ತಿವೆ. ಬೃಹತ್ ಸಂಖ್ಯೆಯಲ್ಲಿ ಜನರು ಪ್ರಯಾಣಿಸುವುದರಿಂದ ಸೋಂಕು ಹರಡುವ ಸಾಧ್ಯತೆ ಹೆಚ್ಚು ಎನ್ನಲಾಗುತ್ತಿದೆ.

ರೈಲು ಪ್ರಯಾಣಕ್ಕೆ ಸೂಕ್ತ ಕಾರಣ ನೀಡುವಂತೆ ಸೂಚಿಸುವ ಸಾಧ್ಯತೆ ಇದೆ ಎಂದುಹೇಳಲಾಗಿದ್ದರೂ ಈ ವ್ಯವಸ್ಥೆಯನ್ನು ಜಾರಿಗೆ ತರುವುದು ಅಷ್ಟು ಸುಲಭವಲ್ಲ ಎನ್ನಲಾಗುತ್ತಿದೆ.

ಗೋಏರ್ ಮತ್ತು ಏರ್‌ ಏಷ್ಯಾ ವಿಮಾನಯಾನ ಸಂಸ್ಥೆಗಳು ಈಗಾಗಲೇ ಏಪ್ರಿಲ್ 15ರಿಂದ ಟಿಕೆಟ್ ಕಾಯ್ದಿರಿಸುವಿಕೆಗೆ ಅವಕಾಶ ನೀಡಿವೆ. ಆದರೆ, ಒಂದು ವೇಳೆ ಲಾಕ್‌ಡೌನ್ ಮುಂದುವರಿದರೆ ಎಂಬ ಕಾರಣಕ್ಕಾಗಿ ಉಚಿತ ಮರುಹೊಂದಾಣಿಕೆ ಆಯ್ಕೆಯನ್ನು ಮುಕ್ತವಾಗಿರಿಸಿವೆ. ಏರ್‌ ಇಂಡಿಯಾ ಏಪ್ರಿಲ್ ಕೊನೆಯವರೆಗೂ ಟಿಕೆಟ್ ಕಾಯ್ದಿರಿಸುವಿಕೆ ರದ್ದುಪಡಿಸಿದೆ.

ಲಾಕ್‌ಡೌನ್ ಅವಧಿ ಮುಗಿದ ನಂತರ ವಿಮಾನಗಳ ಹಾರಾಟಕ್ಕೆ ಸಂಬಂಧಿಸಿ ಇನ್ನೂ ನಿರ್ಧಾರ ಕೈಗೊಂಡಿಲ್ಲ ಎಂದು ನಾಗರಿಕ ವಿಮಾನಯಾನ ಸಚಿವ ಹರ್‌ದೀಪ್ ಸಿಂಗ್ ಪುರಿ ತಿಳಿಸಿದ್ದಾರೆ. ಪರಿಸ್ಥಿತಿ ನೋಡಿಕೊಂಡು ನಿರ್ಧಾರ ಕೈಗೊಳ್ಳಲಾಗುವುದು ಎಂದು ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.