ADVERTISEMENT

ಆಂತರಿಕ ಭದ್ರತೆ ಹೊಣೆಯಿಂದ ಗಡಿ ಭದ್ರತಾ ಪಡೆಗಳಿಗೆ ಮುಕ್ತಿ?

ಗಡಿ ಭದ್ರತೆಯನ್ನು ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರದ ಯೋಜನೆ

ಪಿಟಿಐ
Published 24 ಸೆಪ್ಟೆಂಬರ್ 2020, 14:27 IST
Last Updated 24 ಸೆಪ್ಟೆಂಬರ್ 2020, 14:27 IST
ಸಾಂದರ್ಭಿಕ ಚಿತ್ರ 
ಸಾಂದರ್ಭಿಕ ಚಿತ್ರ    

ನವದೆಹಲಿ: ದೇಶದ ಗಡಿ ಭದ್ರತೆಯನ್ನು ಮತ್ತಷ್ಟು ಬಲಪಡಿಸುವ ಉದ್ದೇಶದಿಂದ, ಗಡಿ ಭದ್ರತಾ ಪಡೆ(ಬಿಎಸ್‌ಎಫ್‌), ಇಂಡೋ–ಟಿಬೆಟನ್‌ ಗಡಿ ಪೊಲೀಸ್ ‌(ಐಟಿಬಿಪಿ), ಸಶಸ್ತ್ರ ಸೀಮಾ ದಳ (ಎಸ್‌ಎಸ್‌ಬಿ) ಸೇರಿದಂತೆ ಗಡಿ ಭದ್ರತೆ ಜವಾಬ್ದಾರಿ ಹೊತ್ತಿರುವ ಪಡೆಗಳನ್ನು ಆಂತರಿಕ ಭದ್ರತಾ ಕರ್ತವ್ಯದ ಹೊಣೆಯಿಂದ ಕ್ರಮೇಣವಾಗಿ ಹಿಂದೆ ಸರಿಸಲು ಕೇಂದ್ರ ಸರ್ಕಾರ ಯೋಜನೆ ರೂಪಿಸಲಾರಂಭಿಸಿದೆ.

ಈ ಪಡೆಗಳ ಮುಖ್ಯಸ್ಥರು,ಗೃಹ ಸಚಿವ ಅಮಿತ್‌ ಶಾ ಅವರೊಂದಿಗೆಕಳೆದ ವರ್ಷ ನಡೆಸಿದ ಸಭೆಯಲ್ಲಿ ಈ ಪ್ರಸ್ತಾವನೆ ಮೊದಲು ಚರ್ಚೆಯಾಗಿತ್ತು.

ಸಿಆರ್‌ಪಿಎಫ್‌ಗೆ ಹೆಚ್ಚಿನ ಹೊಣೆ: ಪ್ರಸ್ತಾವನೆಯಂತೆ, ಗೃಹ ಇಲಾಖೆಯು ಆಂತರಿಕ ಭದ್ರತೆಯ ಹೊಸ ‘ಮಾದರಿ’ಯ ಮೇಲೆ ಕಾರ್ಯನಿರ್ವಹಿಸುತ್ತಿದೆ. ಚುನಾವಣೆ ಸೇರಿದಂತೆ ಆಂತರಿಕ ಭದ್ರತೆಯ ಕರ್ತವ್ಯದ ಹೊಣೆಯನ್ನು ದೇಶದ ಅತಿ ದೊಡ್ಡ ಅರೆಸೇನಾಪಡೆಯಾದ, ಕೇಂದ್ರ ಮೀಸಲು ಪೊಲೀಸ್‌ ಪಡೆ(ಸಿಆರ್‌ಪಿಎಫ್‌) ಹೊರಲಿದೆ. ಸಿಆರ್‌ಪಿಎಫ್‌ನಲ್ಲಿ ಪ್ರಸ್ತುತ 3.25 ಲಕ್ಷ ಸಿಬ್ಬಂದಿಯಿದ್ದಾರೆ. ಮುಂಬರುವ ಬಿಹಾರ ಚುನಾವಣೆ ಹಾಗೂ ಹಲವು ರಾಜ್ಯಗಳಲ್ಲಿ ನಡೆಯುವ ಉಪಚುನಾವಣೆ ಸಂದರ್ಭದಲ್ಲಿ ಈ ಹೊಸ ಪ್ರಯೋಗವನ್ನು ಜಾರಿಗೆ ತರಲು ನಿರ್ಧರಿಸಲಾಗಿದ್ದು, ಸಿಆರ್‌ಪಿಎಫ್‌ ಸಿಬ್ಬಂದಿಯನ್ನು ರಾಜ್ಯದ ಪೊಲೀಸರ ಜೊತೆ ಕ್ರಮವಾಗಿ 70:30 ಪ್ರಮಾಣದಲ್ಲಿ ನಿಯೋಜಿಸಲು ತೀರ್ಮಾನಿಸಲಾಗಿದೆ.

ADVERTISEMENT

‘ಚುನಾವಣೆ ಸಂದರ್ಭದಲ್ಲಿ ಭದ್ರತೆಯ ಸಂಪೂರ್ಣ ಹೊಣೆ ಸಿಆರ್‌ಪಿಎಫ್‌ ಮೇಲಿರಲಿದೆ. ಬಿಎಸ್‌ಎಫ್‌, ಐಟಿಬಿಪಿ ಹಾಗೂ ಎಸ್‌ಎಸ್‌ಬಿ ಸಿಬ್ಬಂದಿಯನ್ನು ಕ್ರಮೇಣವಾಗಿ ಈ ಕರ್ತವ್ಯದಿಂದ ಹೊರಗಿಡಲಾಗುವುದು. ಮುಂದಿನ ಕೆಲ ವರ್ಷಗಳಲ್ಲೇ ಕಾನೂನು ಸುವ್ಯವಸ್ಥೆ ಕರ್ತವ್ಯ, ಚುನಾವಣೆ ಸೇರಿದಂತೆ ಆಂತರಿಕ ಭದ್ರತೆ ಹೊಣೆಯಿಂದ ಈ ಪಡೆಗಳನ್ನು ಪೂರ್ಣವಾಗಿ ವಿಮುಕ್ತಿಗೊಳಿಸಲಾಗುವುದು’ ಎಂದು ಅಧಿಕಾರಿಯೊಬ್ಬರು ತಿಳಿಸಿದರು.

ಪ್ರತಿ ವರ್ಷವೂ ಆಂತರಿಕ ಭದ್ರತೆಗಾಗಿ ಸಾವಿರಾರು ಸಿಬ್ಬಂದಿಯನ್ನು ಗಡಿಯಿಂದ ಕರೆಯಲಾಗುತ್ತಿದೆ. ಗಡಿ ಪ್ರದೇಶಗಳಲ್ಲಿ ನಿಯೋಜನೆಗೊಂಡಿರುವ ಪಡೆಗಳಿಗೆ ಆ ಪ್ರದೇಶದ ಭದ್ರತೆಯನ್ನು ಹೆಚ್ಚಿಸಲು ನಿರ್ದೇಶಿಸಲಾಗಿದೆ. ಪಾಕಿಸ್ತಾನದ ಗಡಿಯಲ್ಲಿ(3,300 ಕಿ.ಮೀ.) ಬಿಎಸ್‌ಎಫ್‌ ನಿಯೋಜನೆಗೊಂಡಿದ್ದರೆ, ಚೀನಾ ಗಡಿಯಲ್ಲಿ(3,488 ಕಿ.ಮೀ) ಐಟಿಬಿಪಿ ಭದ್ರತೆಯ ಹೊಣೆ ಹೊತ್ತಿದೆ. ನೇಪಾಳ ಗಡಿಯಲ್ಲಿ(1,751 ಕಿ.ಮೀ) ಎಸ್‌ಎಸ್‌ಬಿ ನಿಯೋಜನೆಗೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.