ನವದೆಹಲಿ: ‘ಮಾಜಿ ಪ್ರಧಾನಿ ದಿವಂಗತ ಮನಮೋಹನ್ ಸಿಂಗ್ ಅವರ ಸ್ಮಾರಕ ನಿರ್ಮಾಣಕ್ಕೆ ಕೇಂದ್ರ ಸರ್ಕಾರ ಜಾಗ ಮಂಜೂರು ಮಾಡಲಿದ್ದು, ಈ ವಿಷಯವನ್ನು ಅವರ ಕುಟುಂಬ ಮತ್ತು ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಅವರಿಗೆ ತಿಳಿಸಲಾಗಿದೆ’ ಎಂದು ಕೇಂದ್ರ ಗೃಹ ಸಚಿವಾಲಯ ತಿಳಿಸಿದೆ.
ಈ ಬಗ್ಗೆ ಸಚಿವಾಲಯವು ತಡರಾತ್ರಿ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ, ‘ಮನಮೋಹನ್ ಸಿಂಗ್ ಅವರ ಸ್ಮಾರಕ ನಿರ್ಮಾಣಕ್ಕೆ ಜಾಗ ಮಂಜೂರು ಮಾಡುವಂತೆ ಕಾಂಗ್ರೆಸ್ ಮುಖ್ಯಸ್ಥರಿಂದ ಬಂದ ಮನವಿಯನ್ನು ಸರ್ಕಾರ ಸ್ವೀಕರಿಸಿದೆ’ ಎಂದು ತಿಳಿಸಿದೆ.
‘ಕ್ಯಾಬಿನೆಟ್ ಸಭೆಯ ನಂತರ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸ್ಮಾರಕಕ್ಕೆ ಜಾಗ ಮಂಜೂರು ಮಾಡುವ ಕುರಿತು ಸಿಂಗ್ ಅವರ ಕುಟುಂಬ ಮತ್ತು ಮಲ್ಲಿಕಾರ್ಜುನ ಖರ್ಗೆ ಅವರಿಗೆ ತಿಳಿಸಿದ್ದಾರೆ’ ಎಂದು ಹೇಳಿದೆ.
ಸಿಂಗ್ ಅವರ ಅಂತಿಮ ಸಂಸ್ಕಾರವನ್ನು ನವದೆಹಲಿಯ ನಿಗಮಬೋಧ್ ಘಾಟ್‌ನಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ನಡೆಸಲಾಗುವುದು ಎಂದು ಗೃಹ ಸಚಿವಾಲಯ ಶುಕ್ರವಾರ ತಿಳಿಸಿತ್ತು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಖರ್ಗೆ, ಸ್ಮಾರಕ ನಿರ್ಮಿಸುವ ಜಾಗದಲ್ಲಿಯೇ ಅಂತ್ಯಕ್ರಿಯೆ ನಡೆಸಬೇಕು ಎಂದು ಪ್ರಧಾನಿ ಮೋದಿಗೆ ಪತ್ರದ ಮೂಲಕ ತಿಳಿಸಿದ್ದರು.
‘ಸ್ಮಾರಕ ನಿರ್ಮಿಸುವ ಜಾಗದಲ್ಲಿಯೇ ಅಂತ್ಯಕ್ರಿಯೆ ನಡೆಸದೇ ದೇಶದ ಮೊದಲ ಸಿಖ್ ಪ್ರಧಾನಿ ಮನಮೋಹನ್ ಸಿಂಗ್ ಅವರಿಗೆ ಉದ್ದೇಶಪೂರ್ವಕವಾಗಿ ಅವಮಾನ ಮಾಡಲಾಗುತ್ತಿದೆ’ ಎಂದೂ ಕಾಂಗ್ರೆಸ್ ಆರೋಪಿಸಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.