ADVERTISEMENT

ಹವಾಮಾನ ದತ್ತಾಂಶ ಹಂಚಿಕೆ ಕಡ್ಡಾಯ: ಕೇಂದ್ರದ ಯೋಜನೆ

ದೇಶೀಯ ವಿಮಾನಯಾನ ಸಂಸ್ಥೆಗಳಿಂದ ಸಂಗ್ರಹಕ್ಕೆ ಕ್ರಮ

ಪಿಟಿಐ
Published 8 ಜನವರಿ 2025, 14:05 IST
Last Updated 8 ಜನವರಿ 2025, 14:05 IST
   

ನವದೆಹಲಿ: ದೇಶೀಯ ವಿಮಾನಯಾನ ಸಂಸ್ಥೆಗಳ ವಿಮಾನಗಳು ‘ಟೇಕ್‌ಆಫ್‌’ ಮತ್ತು ‘ಲ್ಯಾಂಡಿಂಗ್‌’ ವೇಳೆ ಸೆರೆಹಿಡಿಯುವ ಹವಾಮಾನ ದತ್ತಾಂಶವನ್ನು ಹವಾಮಾನ ಕಚೇರಿಗಳ ಜತೆ ಹಂಚಿಕೊಳ್ಳುವುದನ್ನು ಕಡ್ಡಾಯಗೊಳಿಸಲು ಕೇಂದ್ರ ಸರ್ಕಾರ ಯೋಜಿಸಿದೆ.

ಈ ದತ್ತಾಂಶಗಳ ವಿಶ್ಲೇಷಣೆಯಿಂದ ಹವಾಮಾನಕ್ಕೆ ಸಂಬಂಧಿಸಿದಂತೆ ಖಚಿತವಾದ ಮನ್ಸೂಚನೆ ನೀಡುವುದು ಸರ್ಕಾರದ ಉದ್ದೇಶ.

ಪ್ರಸ್ತುತ ಭಾರತೀಯ ಹವಾಮಾನ ಇಲಾಖೆಯು (ಐಎಂಡಿ) ತಾಪಮಾನ, ಆರ್ದ್ರತೆ, ಗಾಳಿಯ ವೇಗವನ್ನು ತಿಳಿದುಕೊಳ್ಳಲು ತನ್ನ 50ರಿಂದ 60 ಕೇಂದ್ರಗಳಿಂದ ಹವಾಮಾನ ಬಲೂನ್‌ಗಳನ್ನು ಹಾರಿಬಿಡುತ್ತಿದೆ. ಇವುಗಳು ಕಳುಹಿಸುವ ದತ್ತಾಂಶಗಳನ್ನು ವಿಶ್ಲೇಷಣೆಗೆ ಒಳಪಡಿಸುತ್ತಿದೆ. 

ADVERTISEMENT

ಈ ದತ್ತಾಂಶಗಳ ಜತೆಗೆ ದೇಶೀಯ ವಿಮಾನಗಳಿಂದಲೂ ದತ್ತಾಂಶ ಲಭ್ಯವಾದರೆ ಇನ್ನಷ್ಟು ಉಪಯುಕ್ತವಾಗಲಿದೆ. ದೇಶದ ವಿವಿಧ ವಿಮಾನ ನಿಲ್ದಾಣಗಳಲ್ಲಿ ದೇಶೀಯ ವಿಮಾನಯಾನ ಸಂಸ್ಥೆಗಳಿಂದ ನಿತ್ಯ 6,000ಕ್ಕೂ ಹೆಚ್ಚು ಟೇಕ್‌ಆಫ್‌ ಮತ್ತು ಭೂ ಸ್ಪರ್ಶಗಳು ನಡೆಯುತ್ತಿರುತ್ತವೆ ಎಂದು ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

‘ಈ ಸಂಬಂಧ ನಾಗರಿಕ ವಿಮಾನಯಾನ ಸಚಿವಾಲಯದ ಜತೆ ಚರ್ಚೆ ನಡೆಸಲಾಗಿದೆ. ದೇಶೀಯ ವಿಮಾನಗಳು ಹವಾಮಾನ ದತ್ತಾಂಶ ಹಂಚಿಕೊಳ್ಳುವುದನ್ನು ವರ್ಷದಲ್ಲಿ ಕಡ್ಡಾಯಗೊಳಿಸಲಾಗುವುದು’ ಎಂದು ಕೇಂದ್ರ ಭೂ ವಿಜ್ಞಾನ ಸಚಿವಾಲಯದ ಕಾರ್ಯದರ್ಶಿ ಎಂ. ರವಿಚಂದ್ರನ್‌ ಪ್ರತಿಕ್ರಿಯಿಸಿದ್ದಾರೆ.

‘ಈ ದತ್ತಾಂಶವು ವಿಮಾನಗಳ ಸಂಚಾರಕ್ಕಷ್ಟೇ ಅಲ್ಲದೆ ದೇಶದ ಹವಾಮಾನ ಮುನ್ಸೂಚನೆಗೂ ನೆರವಾಗಲಿದೆ’ ಎಂದು ಅವರು ಹೇಳಿದ್ದಾರೆ.

ಅಂತರರಾಷ್ಟ್ರೀಯ ಮಾರ್ಗದಲ್ಲಿ ಸಂಚರಿಸುವ ವಿಮಾನಗಳು ಕಡ್ಡಾಯವಾಗಿ ಹವಾಮಾನ ಮಾಹಿತಿ ಹಂಚಿಕೊಳ್ಳಬೇಕು ಎಂಬ ಕಾನೂನು ಇದೆ. ಕೆಲ ದೇಶಗಳು ದೇಶೀಯವಾಗಿ ಸಂಚರಿಸುವ ವಿಮಾನಗಳಿಗೂ ಈ ರೀತಿಯ ದತ್ತಾಂಶ ಹಂಚಿಕೊಳ್ಳವುದನ್ನು ಕಡ್ಡಾಯಗೊಳಿಸಿವೆ. ಭಾರತವೂ ಅದೇ ರೀತಿಯ ಕ್ರಮ ತೆಗೆದುಕೊಳ್ಳುತ್ತಿದೆ ಎಂದು ಅವರು ಪ್ರತಿಕ್ರಿಯಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.