ADVERTISEMENT

ಮಹದಾಯಿಗೆ ಹಸಿರು ನಿಶಾನೆ: ಸಚಿವ ಬಸವರಾಜ ಬೊಮ್ಮಾಯಿಗೆ ಜಾವಡೇಕರ್ ಪತ್ರ

​ಪ್ರಜಾವಾಣಿ ವಾರ್ತೆ
Published 25 ಡಿಸೆಂಬರ್ 2019, 2:10 IST
Last Updated 25 ಡಿಸೆಂಬರ್ 2019, 2:10 IST
ಮಹದಾಯಿ ನದಿ (ಸಂಗ್ರಹ ಚಿತ್ರ)
ಮಹದಾಯಿ ನದಿ (ಸಂಗ್ರಹ ಚಿತ್ರ)   

ಬೆಂಗಳೂರು: ‘ಕಳಸಾ ಬಂಡೂರಿ ಕುಡಿಯುವ ನೀರಿನ ಯೋಜನೆಗೆ ನೀಡಿದ್ದ ಅನುಮತಿಗೆ ತಡೆ ನೀಡಿಲ್ಲ.ಅರಣ್ಯ ಮತ್ತು ಪರಿಸರ ಇಲಾಖೆಯಿಂದ ಅಗತ್ಯ ಒಪ್ಪಿಗೆ ಪಡೆದ ತಕ್ಷಣವೇ ಯೋಜನೆಯನ್ನು ಕೈಗೆತ್ತಿಕೊಳ್ಳಬಹುದು’ ಎಂದು ಕೇಂದ್ರ ಅರಣ್ಯ ಮತ್ತು ಪರಿಸರ ಖಾತೆ ಸಚಿವ ಪ್ರಕಾಶ್ ಜಾವಡೇಕರ್‌ ಸ್ಪಷ್ಟಪಡಿಸಿದ್ದಾರೆ.

ಈ ಸಂಬಂಧ ರಾಜ್ಯದ ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರಿಗೆ ಜಾವಡೇಕರ್‌ ಮಂಗಳವಾರ ಪತ್ರ ಬರೆದಿದ್ದಾರೆ.‘ಈ ಯೋಜನೆಗೆ ಸಂಬಂಧಿಸಿದಂತೆ ಪರಿಸರ ಇಲಾಖೆಯಿಂದ ಅನುಮತಿ ಪಡೆದು, ನ್ಯಾಯ ಮಂಡಳಿ ಗೆಜೆಟ್‌ ಅಧಿಸೂಚನೆ ಹೊರಡಿಸಿದ ತಕ್ಷಣವೇ ಕರ್ನಾಟಕ ಯೋಜನೆ ಆರಂಭಿಸಬಹುದು’ ಎಂದೂ ತಿಳಿಸಿದ್ದಾರೆ.

ಕೇಂದ್ರ ಸರ್ಕಾರಕಳಸಾ ಬಂಡೂರಿ ಯೋಜನೆಗೆ ತಡೆ ನೀಡಿದೆ ಎಂಬ ಮಾಹಿತಿಯ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಭಾರಿ ವಿರೋಧ ವ್ಯಕ್ತವಾಗಿತ್ತು. ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಈ ಸಂಬಂಧ ಜಾವಡೇಕರ್‌ ಜತೆ ಮಾತುಕತೆ ನಡೆಸಿದ್ದರು. ಆ ಬಳಿಕ ಸಚಿವ ಬಸವರಾಜ ಬೊಮ್ಮಾಯಿ ದೆಹಲಿಗೆ ತೆರಳಿ ರಾಜ್ಯದ ಆತಂಕವನ್ನು ಮನದಟ್ಟು ಮಾಡಿದ್ದರು.

ADVERTISEMENT

‘ಕಳಸಾ ಬಂಡೂರಿ ಯೋಜನೆ ತಡೆ ಹಿಡಿಯುವ ಸಂಬಂಧ ಯಾವುದೇ ಆದೇಶ ಹೊರಡಿಸಿಲ್ಲ. ಕುಡಿಯುವ ನೀರಿನ ಯೋಜನೆಗೆ ಪರಿಸರ ಇಲಾಖೆಯಿಂದ ಪರಿಸರ ಅನುಮತಿ(ಇಸಿ) ಪಡೆಯುವ ಅಗತ್ಯವಿಲ್ಲವೆಂಬ ನಿಯಮ ಮತ್ತು 2006 ರ ಪರಿಸರ ಹಾನಿ ಕುರಿತ ಮೌಲ್ಯಮಾಪನ(ಇಐಎ) ಅಧಿಸೂಚನೆಗೆ ತಡೆ ನೀಡಿದ್ದೇವೆ ಎಂಬುದು ತಪ್ಪು ಮಾಹಿತಿ’ ಎಂದು ಪತ್ರದಲ್ಲಿ ಜಾವಡೇಕರ್‌ ಸ್ಪಷ್ಟ ಪಡಿಸಿದ್ದಾರೆ. ‘ರಾಜ್ಯದ ಜನರ ಸಂದೇಹ ನಿವಾರಣೆಗೆ ನೀವೇ ಖುದ್ದಾಗಿ ಪತ್ರ ಬರೆದು ಸ್ಪಷ್ಟ ಪಡಿಸಿದರೆ ಜನರಲ್ಲಿರುವ ಗೊಂದಲ, ಆತಂಕ ನಿವಾರಣೆಯಾಗಲಿದೆ’ ಎಂದು ಬೊಮ್ಮಾಯಿ ಮನವಿ ಮಾಡಿದ್ದರು. ಆ ಪ್ರಕಾರ ಜಾವಡೇಕರ್‌ ಪತ್ರ ಬರೆದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.