ADVERTISEMENT

ಬಾಂಗ್ಲಾದಲ್ಲಿ ಹಿಂದೂಗಳನ್ನು ತಕ್ಷಣ ರಕ್ಷಿಸಿ: ಮೋದಿಗೆ ನಿವೃತ್ತ ಅಧಿಕಾರಿಗಳ ಪತ್ರ

ಏಜೆನ್ಸೀಸ್
Published 28 ನವೆಂಬರ್ 2024, 6:35 IST
Last Updated 28 ನವೆಂಬರ್ 2024, 6:35 IST
   

ಶ್ರೀನಗರ (ಜಮ್ಮು ಮತ್ತು ಕಾಶ್ಮೀರ): ಬಾಂಗ್ಲಾದೇಶದಲ್ಲಿ ಹಿಂದೂಗಳ ವಿರುದ್ಧ ಹೆಚ್ಚುತ್ತಿರುವ ಹಿಂಸಾಚಾರ ಹಾಗೂ ಹಿಂದೂ ಸಂಘಟನೆಯ ಮುಖಂಡ ಚಿನ್ಮಯಿ ಕೃಷ್ಣದಾಸ್‌ ಬ್ರಹ್ಮಚಾರಿ ಬಂಧನ ವಿಷಯದಲ್ಲಿ ಮಧ್ಯಪ್ರವೇಶಿಸುವಂತೆ ನಿವೃತ್ತ ನ್ಯಾಯಾಧೀಶರು, ಅಧಿಕಾರಿಗಳು ಮತ್ತು ಹಾಲಿ ಸಂಸದರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮನವಿ ಮಾಡಿದ್ದಾರೆ.

ಹೈಕೋರ್ಟ್‌ನ 68 ಮಂದಿ ನಿವೃತ್ತ ನ್ಯಾಯಮೂರ್ತಿಗಳು, ಐಎಎಸ್‌, ಐಪಿಎಸ್‌, ಐಆರ್‌ಎಸ್‌, ಐಐಎಸ್‌ ಹಾಗೂ ಐಎಫ್‌ಎಸ್‌ ಅಧಿಕಾರಿಗಳು ಚಿನ್ಮಯಿ ಕೃಷ್ಣದಾಸ್‌ ಅವರ ಬಂಧನ ಹಾಗೂ ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲಿನ ದೌರ್ಜನ್ಯಕ್ಕೆ ಸಂಬಂಧಿಸಿದಂತೆ ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದಿದ್ದಾರೆ. ಜಮ್ಮು ಮತ್ತು ಕಾಶ್ಮೀರದ ಮಾಜಿ ಡಿಜಿಪಿ ಶೇಶ್ ಪಾಲ್ ವೈದ್ ಎಂಬುವವರು ಈ ಪತ್ರವನ್ನು ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿದ್ದಾರೆ.

ಈ ಬಗ್ಗೆ ಸುದ್ದಿ ಸಂಸ್ಥೆ 'ಎಎನ್‌ಐ' ವರದಿ ಮಾಡಿದೆ.

ADVERTISEMENT

'ಕಪೋಲಕಲ್ಪಿತ ದೇಶದ್ರೋಹದ ಆರೋಪದ ಮೇಲೆ ಚಿನ್ಮಯಿ ಕೃಷ್ಣದಾಸ್‌ ಅವರನ್ನು ಬಂಧಿಸಲಾಗಿದೆ. ಈ ನಿರ್ಣಾಯಕ ವಿಷಯದಲ್ಲಿ ನಿಮ್ಮ ಮಧ್ಯಸ್ಥಿಕೆಯನ್ನು ಕೋರುತ್ತೇವೆ. ಮೋದಿ ನೇತೃತ್ವದ ಭಾರತ ಸರ್ಕಾರವು ಬಾಂಗ್ಲಾದೇಶದಲ್ಲಿ ಹಿಂದೂಗಳನ್ನು ರಕ್ಷಿಸಲು ತಕ್ಷಣ ಕ್ರಮಗಳನ್ನು ತೆಗೆದುಕೊಳ್ಳಬೇಕು' ಎಂದು ಪತ್ರದಲ್ಲಿ ಮನವಿ ಮಾಡಲಾಗಿದೆ.

'ಅನ್ಯಾಯವಾಗಿ ಬಂಧಿಸಲ್ಪಟ್ಟಿರುವ ಚಿನ್ಮಯಿ ಕೃಷ್ಣ ದಾಸ್ ಮತ್ತು ಇತರ ಧಾರ್ಮಿಕ ಮುಖಂಡರನ್ನು ತಕ್ಷಣವೇ ಬಿಡುಗಡೆ ಮಾಡುವುದು ಅತ್ಯಗತ್ಯ. ಅವರ ಮೇಲಿನ ಎಲ್ಲಾ ಆರೋಪಗಳನ್ನು ಕೈಬಿಡಬೇಕು ಮತ್ತು ಶಾಂತಿಯುತವಾಗಿ ಪ್ರತಿಭಟಿಸುವ ಅವರ ಹಕ್ಕುಗಳನ್ನು ಎತ್ತಿಹಿಡಿಯಬೇಕು' ಎಂದೂ ಪತ್ರದಲ್ಲಿ ಉಲ್ಲೇಖಿಸಲಾಗಿದೆ.

ಅಲ್ಲದೇ ಚಿನ್ಮಯಿ ಕೃಷ್ಣ ದಾಸ್ ಅವರ ಬಂಧನ ವಿಚಾರವನ್ನು ವಿಶ್ವಸಂಸ್ಥೆ , ಮಾನವ ಹಕ್ಕುಗಳ ಮಂಡಳಿ ಮತ್ತು ಇತರ ಸಂಬಂಧಿತ ಅಂತರರಾಷ್ಟ್ರೀಯ ವೇದಿಕೆಗಳಿಗೆ ಕೊಂಡೊಯ್ಯುವಂತೆ ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.

ಬಾಂಗ್ಲಾದೇಶದ ರಾಷ್ಟ್ರಧ್ವಜಕ್ಕೆ ಅಗೌರವ ತೋರಿದ್ದಕ್ಕಾಗಿ ದೇಶದ್ರೋಹದ ಆರೋಪ ಎದುರಿಸುತ್ತಿರುವ ‘ಸಮ್ಮಿಲಿತ್‌ ಸನಾತನಿ ಜಾಗರಣ ಜೋತೆ’ ಎಂಬ ಹಿಂದೂ ಸಂಘಟನೆಯ ಮುಖಂಡ ಚಿನ್ಮಯಿ ಕೃಷ್ಣದಾಸ್‌ ಬ್ರಹ್ಮಚಾರಿ ಅವರ ಜಾಮೀನು ಅರ್ಜಿಯನ್ನು ಬಾಂಗ್ಲಾ ದೇಶದ ನ್ಯಾಯಾಲಯ ವಜಾಗೊಳಿಸಿತ್ತು. ಇದರ ಬೆನ್ನಲ್ಲೇ ಅವರನ್ನು ಜೈಲಿಗೆ ಕಳುಹಿಸಲಾಗಿತ್ತು.

ಚಟ್ಟೋಗ್ರಾಮದ ಆರನೇ ಮೆಟ್ರೊಪಾಲಿ ಟನ್‌ ಮ್ಯಾಜಿಸ್ಟ್ರೇಟ್‌ ಖಾಜಿ ಷರೀಫುಲ್‌ ಇಸ್ಲಾಂ ಅವರು ಜಾಮೀನು ಅರ್ಜಿ ವಜಾ ಮಾಡಿದ್ದಾರೆ ಎಂದು ಸ್ಥಳೀಯ ಮಾಧ್ಯಮ ವರದಿ ಮಾಡಿದ್ದವು. ದಾಸ್‌ ಅವರನ್ನು ಸೋಮವಾರ ಢಾಕಾದ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಗಿತ್ತು. ಬಳಿಕ, ಚಟ್ಟೋಗ್ರಾಮಕ್ಕೆ ಕರೆತರಲಾಗಿತ್ತು.

ದಾಸ್‌ ಅವರನ್ನು ಬಂಧಿಸಿದ ಸುದ್ದಿ ತಿಳಿಯುತ್ತಿದ್ದಂತೆಯೇ ದೇಶದ ಹಲವೆಡೆ ಹಿಂದೂ ಸಮುದಾಯದ ಜನರು ಪ್ರತಿಭಟನೆ ನಡೆಸಿದದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.