ADVERTISEMENT

ನೂತನ ಕೃಷಿ ಕಾಯ್ದೆ ರದ್ದತಿಗೆ ಶಿಕ್ಷಣ ತಜ್ಞರು, ವಿದೇಶಿ ವಿ.ವಿ.ಗಳ ಒತ್ತಾಯ

ಪಿಟಿಐ
Published 3 ಫೆಬ್ರುವರಿ 2021, 11:01 IST
Last Updated 3 ಫೆಬ್ರುವರಿ 2021, 11:01 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ನವದೆಹಲಿ: ನೂತನ ಕೃಷಿ ಕಾಯ್ದೆಗಳು ರೈತ ಸಮುದಾಯಕ್ಕೆ ಮಾರಕವಾಗಿ ಪರಿಣಮಿಸಲಿವೆ. ಇವುಗಳನ್ನು ಕೂಡಲೇ ರದ್ದುಗೊಳಿಸಬೇಕು ಎಂದು ಶಿಕ್ಷಣ ಕ್ಷೇತ್ರದ 400ಕ್ಕೂ ಅಧಿಕ ತಜ್ಞರು ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ.

ವಿದೇಶಗಳ ಹಲವಾರು ವಿಶ್ವವಿದ್ಯಾಲಯಗಳು ಸಹ ನೂತನ ಕಾಯ್ದೆಗಳನ್ನು ರದ್ದು ಮಾಡಬೇಕು ಎಂದು ಆಗ್ರಹಿಸಿವೆ.

ದೇಶದ ಹಲವು ಶಿಕ್ಷಣ ಸಂಸ್ಥೆಗಳ ಬೋಧಕರು, ತಜ್ಞರು, ವಿದೇಶಿ ವಿ.ವಿ.ಗಳ ಪ್ರಾಧ್ಯಾಪಕರು ಈ ಸಂಬಂಧ ಜಂಟಿ ಹೇಳಿಕೆಯನ್ನು ಬಿಡುಗಡೆ ಮಾಡಿದ್ದಾರೆ. ನೂತನ ಕೃಷಿ ಕಾಯ್ದೆಗಳನ್ನು ವಿರೋಧಿಸಿ ದೆಹಲಿಯ ಗಡಿಯಲ್ಲಿ ಪ್ರತಿಭಟನೆ ನಡೆಸುತ್ತಿರುವ ರೈತರ ಸ್ಥಿತಿ ಬಗ್ಗೆ ಅವರು ಕಳವಳ ವ್ಯಕ್ತಪಡಿಸಿದ್ದಾರೆ.

ADVERTISEMENT

‘ಕೇಂದ್ರ ಸರ್ಕಾರ ರೂಪಿಸಿರುವ ನೂತನ ಕಾಯ್ದೆಗಳು ದೇಶದ ಸಾಂಪ್ರದಾಯಿಕ ಕೃಷಿ ಪದ್ಧತಿಯಲ್ಲೇ ಮೂಲಭೂತ ಬದಲಾವಣೆ ತರುವ ಉದ್ಧೇಶ ಹೊಂದಿವೆ. ಈ ರೀತಿ ಮಾಡುವುದು ಭಾರತದ ರೈತರ ಪಾಲಿಗೆ ಅಪಾಯಕಾರಿಯಾಗಲಿದೆ’ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಜೆಎನ್‌ಯು, ಜಾಧವಪುರ ವಿ.ವಿ., ಐಐಟಿ–ಕಾನ್ಪುರ, ಐಐಟಿ–ಮದ್ರಾಸ್‌, ಐಐಎಸ್‌ಸಿ (ಬೆಂಗಳೂರು), ಇಂಡಿಯನ್‌ ಸ್ಟ್ಯಾಟಿಸ್ಟಿಕಲ್‌ ಇನ್‌ಸ್ಟಿಟ್ಯೂಟ್‌ (ಕೋಲ್ಕತ್ತ), ದೆಹಲಿ ವಿ.ವಿ. ,ಪಂಜಾಬ್‌ ವಿ.ವಿ, ತೇಜ್‌ಪುರ ವಿ.ವಿ., ಪಂಜಾಬ್‌ನ ಕೇಂದ್ರೀಯ ವಿ.ವಿ., ಐಐಟಿ–ಬಾಂಬೆ ಹಾಗೂ ಐಐಎಂ (ಕಲ್ಕತ್ತ)ನ ಪ್ರಾಧ್ಯಾಪಕರು ಸೇರಿದಂತೆ ಒಟ್ಟು 413 ಜನರು ಈ ಹೇಳಿಕೆಗೆ ಸಹಿ ಹಾಕಿದ್ದಾರೆ.

ಯೂನಿವರ್ಸಿಟಿ ಆಫ್‌ ಜಗ್ರೇಬ್‌ (ಕ್ರೋವೇಷಿಯಾ), ಲಂಡನ್‌ ಫಿಲ್ಮ್‌ ಸ್ಕೂಲ್‌, ಜೋಹಾನ್ಸ್‌ಬರ್ಗ್‌ ವಿ.ವಿ, ಒಸ್ಲೊ ವಿ.ವಿ., ಮೆಸಾಚ್ಯುಸೆಟ್ಸ್‌ ಹಾಗೂ ಪಿಟ್ಸ್‌ಬರ್ಗ್‌ ವಿ.ವಿ.ಗಳು ಈ ಹೇಳಿಕೆಗೆ ಸಹಿ ಹಾಕಿವೆ.

ಇದನ್ನೂ ಓದಿ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.