ADVERTISEMENT

ಜಿಎಸ್‌ಟಿ ಪರಿಹಾರ ಮೊತ್ತ: ಎರಡು ಆಯ್ಕೆ ಇರಿಸಿದ ಕೇಂದ್ರ

​ಪ್ರಜಾವಾಣಿ ವಾರ್ತೆ
Published 27 ಆಗಸ್ಟ್ 2020, 20:59 IST
Last Updated 27 ಆಗಸ್ಟ್ 2020, 20:59 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ನವದೆಹಲಿ: ಜಿಎಸ್‌ಟಿ ಪರಿಹಾರ ಕೇಳುತ್ತಿರುವ ರಾಜ್ಯಗಳು ಒಟ್ಟು ₹ 2.35 ಲಕ್ಷ ಕೋಟಿಯನ್ನು ಸಾಲದ ರೂಪದಲ್ಲಿ ಪಡೆಯಬಹುದು ಎಂದು ಕೇಂದ್ರ ಹೇಳಿದೆ. ಈ ಮೊತ್ತವನ್ನು ರಾಜ್ಯಗಳು ಸೆಸ್ ಮೂಲಕ ಸಂಗ್ರಹಿಸಿದ ಹಣದಿಂದ ಹಿಂದಿರುಗಿಸಬಹುದು.

ಕೇಂದ್ರ ಸರ್ಕಾರವು ಆರ್‌ಬಿಐ ಜೊತೆ ಸಮಾಲೋಚಿಸಿ ರೂಪಿಸುವ ವಿಶೇಷ ವ್ಯವಸ್ಥೆ ಮೂಲಕ ಈ ಸಾಲವನ್ನು ಸಮಂಜಸ ಬಡ್ಡಿ ದರದಲ್ಲಿ ಕೊಡಿಸಲಾಗುತ್ತದೆ. ‘ಕೋವಿಡ್–19 ಕಾರಣದಿಂದಾಗಿ ಅರ್ಥವ್ಯವಸ್ಥೆಯು ಈ ವರ್ಷಕುಸಿತ ಕಾಣಬಹುದು. ಇದು ರಾಜ್ಯಗಳಿಗೆ ಹಣಕಾಸಿನ ನೆರವು ನೀಡುವ ವಿಚಾರದಲ್ಲಿ ಕೇಂದ್ರದ ಕೈಗಳನ್ನು ಕಟ್ಟಿಹಾಕಬಹುದು’ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದರು.

‘ರಾಜ್ಯಗಳಿಗೆ ಜಿಎಸ್‌ಟಿ ಪರಿಹಾರ ನೀಡುವ ಸ್ಥಿತಿಯಲ್ಲಿ ತಾನಿಲ್ಲ ಎಂದು ಕೇಂದ್ರ ಈಗ ಹೇಳುತ್ತಿದೆ. ನಾಲ್ಕು ವರ್ಷಗಳ ಹಿಂದೆ ಇದೇ ವಿಚಾರವಾಗಿ ತೃಣಮೂಲ ಕಾಂಗ್ರೆಸ್ ಸಂಸತ್ತಿನಲ್ಲಿ ಎಚ್ಚರಿಕೆ ನೀಡಿತ್ತು’ ಎಂದು ಪಕ್ಷದ ನಾಯಕ ಡೆರೆಕ್ ಒ‘ಬ್ರಯಾನ್ ಹೇಳಿದರು.

ADVERTISEMENT

ಈ ಹಣಕಾಸು ವರ್ಷದಲ್ಲಿ ರಾಜ್ಯಗಳಿಗೆ ಹೋಗಬೇಕಿರುವ ಪರಿಹಾರದ ಮೊತ್ತ ₹ 3 ಲಕ್ಷ ಕೋಟಿ ಎಂದು ಕೇಂದ್ರ ಅಂದಾಜಿಸಿದೆ. ಇದರಲ್ಲಿ ₹ 65 ಸಾವಿರ ಕೋಟಿಯು ಜಿಎಸ್‌ಟಿ ವ್ಯವಸ್ಥೆಯಲ್ಲಿ ಹಾಕಲಾಗುತ್ತಿರುವ ಸೆಸ್‌ ಮೂಲಕ ಸಂಗ್ರಹವಾಗುವ ನಿರೀಕ್ಷೆ ಇದೆ. ಹಾಗಾಗಿ, ಹೊಂದಿಸಬೇಕಿರುವ ಪರಿಹಾರದ ಮೊತ್ತ ₹ 2.35 ಲಕ್ಷ ಕೋಟಿ ಆಗಲಿದೆ.

ಸಭೆಯಲ್ಲಿ ರಾಜ್ಯಗಳ ಎದುರು ಎರಡು ಆಯ್ಕೆಗಳನ್ನು ಇರಿಸಲಾಯಿತು. ಜಿಎಸ್‌ಟಿ ವ್ಯವಸ್ಥೆಯಿಂದ ಆಗಿರುವ ಆದಾಯ ಕೊರತೆಯಾದ ₹ 97 ಸಾವಿರ ಕೋಟಿಯನ್ನು ಸಾಲವಾಗಿ ಪಡೆಯುವುದು. ಅಥವಾ, ಜಿಎಸ್‌ಟಿ ಆದಾಯ ಕೊರತೆ ಹಾಗೂ ಕೋವಿಡ್‌–19ನಿಂದ ಆಗಿರುವ ನಷ್ಟವನ್ನೂ ಒಳಗೊಂಡ ಒಟ್ಟು ₹ 2.35 ಲಕ್ಷ ಕೋಟಿಯನ್ನು ಸಾಲವಾಗಿ ಪಡೆಯುವುದು.

ಈ ಎರಡು ಆಯ್ಕೆಗಳಲ್ಲಿ ತಮಗೆ ಯಾವುದು ಒಪ್ಪಿಗೆ ಎಂಬುದನ್ನು ರಾಜ್ಯಗಳು ಏಳು ದಿನಗಳಲ್ಲಿ ತಿಳಿಸಬೇಕಿದೆ. ‘ಸಾಲವನ್ನು ಹಿಂದಿರುಗಿಸುವ ಬಗೆ, ಸೆಸ್‌ನ ದರದಲ್ಲಿ ಹೆಚ್ಚಳ ಕುರಿತ ಪ್ರಶ್ನೆಗಳಿಗೆ ಉತ್ತರ ಸಿಕ್ಕಿಲ್ಲ. ಇದರಿಂದಾಗಿ ಆಯ್ಕೆಗಳ ವಿಚಾರದಲ್ಲಿ ಸ್ಪಷ್ಟತೆ ಇಲ್ಲ’ ಎಂದು ತೆರಿಗೆ ತಜ್ಞೆ ಶರೀನ್ ಗುಪ್ತ ‘ಪ್ರಜಾವಾಣಿ’ ಜೊತೆ ಅನಿಸಿಕೆ ಹಂಚಿಕೊಂಡರು.

₹13,764 ಕೋಟಿ ಕೊಡಿ: ಬಸವರಾಜ ಬೊಮ್ಮಾಯಿ

ಬೆಂಗಳೂರು: ರಾಜ್ಯವು ಆರ್ಥಿಕ ಸಂಕಷ್ಟದಲ್ಲಿದ್ದು, ತಕ್ಷಣವೇ ₹13,764 ಕೋಟಿ ಜಿಎಸ್‌ಟಿ ಪರಿಹಾರ ನೀಡಬೇಕು ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರು ಜಿಎಸ್‌ಟಿ ಮಂಡಳಿ ಸಭೆಯಲ್ಲಿ ಒತ್ತಾಯಿಸಿದರು.

ಗುರುವಾರ ನಡೆದ ಜಿಎಸ್‌ಟಿ ಮಂಡಳಿ ಸಭೆಯಲ್ಲಿ ರಾಜ್ಯ ಸರ್ಕಾರದ ಪರವಾಗಿ ಪಾಲ್ಗೊಂಡ ಅವರು, ಕೋವಿಡ್ ಸಂಕಷ್ಟದ ನಡುವೆಯೂ ನಾಲ್ಕು ತಿಂಗಳಲ್ಲಿ ಶೇ 71.61 ರಷ್ಟು ಜಿಎಸ್‌ಟಿ ಸಂಗ್ರಹವಾಗಿದೆ. ಇತರ ರಾಜ್ಯಗಳಿಗೆ ಹೋಲಿಸಿದರೆ, ತೆರಿಗೆ ಸಂಗ್ರಹ ಪ್ರಮಾಣ ಅಧಿಕವಾಗಿದೆ. ಜಿಎಸ್‌ಟಿ ಪರಿಹಾರ ನೀಡದೇ ಇದ್ದರೆ ನಿರೀಕ್ಷಿತ ಪ್ರಗತಿ ಸಾಧಿಸಲು ಕಷ್ಟ ಎಂದು ವಿವರಿಸಿದರು. ಸಂವಿಧಾನದ 101 ರ ತಿದ್ದುಪಡಿಯಲ್ಲಿ ಸೆಕ್ಷನ್‌ 18 ರ ಪ್ರಕಾರ ಜಿಎಸ್‌ಟಿ ಮಂಡಳಿ‌ ರಾಜ್ಯಗಳಿಗೆ ತೆರಿಗೆ ಸಂಗ್ರಹದ ಕೊರತೆ ತುಂಬಿಕೊಡುವ ಬಗ್ಗೆ ಸ್ಪಷ್ಟ ಉಲ್ಲೇಖವಿದೆ. ಅದರ ಅನ್ವಯ ಕೂಡಲೇ ಪರಿಹಾರವನ್ನು ನೀಡಬೇಕು ಎಂದು ಹೇಳಿದರು.ಒಟ್ಟು ತೆರಿಗೆ ರಾಜಸ್ವ ₹1.80 ಲಕ್ಷ ಕೋಟಿ ಎಂದು ಅಂದಾಜು ಮಾಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.