ADVERTISEMENT

ಗುಜರಾತ್‌ | ದೇಶದ ಮೊದಲ ಡೈನೋಸಾರ್ ವಸ್ತು ಸಂಗ್ರಹಾಲಯ, ಉದ್ಯಾನ ಲೋಕಾರ್ಪಣೆ

​ಪ್ರಜಾವಾಣಿ ವಾರ್ತೆ
Published 9 ಜೂನ್ 2019, 2:52 IST
Last Updated 9 ಜೂನ್ 2019, 2:52 IST
ವಸ್ತು ಸಂಗ್ರಹಾಲಯ ಮತ್ತು ಉದ್ಯಾನದಲ್ಲಿ ನಿರ್ಮಾಣಗೊಂಡಿರುವ ಡೈನೋಸಾರ್‌ ಪ್ರತಿಕೃತಿ. ಚಿತ್ರಗಳು: ಎಎಫ್‌ಪಿ
ವಸ್ತು ಸಂಗ್ರಹಾಲಯ ಮತ್ತು ಉದ್ಯಾನದಲ್ಲಿ ನಿರ್ಮಾಣಗೊಂಡಿರುವ ಡೈನೋಸಾರ್‌ ಪ್ರತಿಕೃತಿ. ಚಿತ್ರಗಳು: ಎಎಫ್‌ಪಿ   

ಅಹಮದಾಬಾದ್‌:ಸಾವಿರಾರು ವರ್ಷಗಳ ಹಿಂದೆ ಜೀವಿಸಿದ್ದ ದೈತ್ಯ ಗಾತ್ರದ ಡೈನೋಸಾರ್‌ಗಳು ಹೇಗಿದ್ದವು? ಅವುಗಳ ಆಕಾರ ಹೇಗೆಲ್ಲಾ ಇತ್ತು? ಯಾವೆಲ್ಲಾ ಬಗೆಯಲ್ಲಿ ಇದ್ದಿರಬಹುದು? ಎಂದು ಊಹೆ ಮಾಡಿಕೊಂಡಿದ್ದವರಿಗೆ ಹಾಗೂ ಸಿನಿಮಾಗಳಲ್ಲಿ ನೋಡಿ ಹೀಗೂ ಇದ್ದವೇ? ಎಂದು ಯೋಚಿಸಿದ್ದವರಿಗೆ ಅವುಗಳ ಪ್ರತಿರೂಪಗಳನ್ನು ನೋಡಲು ಈಗ ದೇಶದಲ್ಲಿ ಪ್ರಥಮ ಬಾರಿಗೆ ಅವಕಾಶ ಲಭಿಸಿದೆ.

ಈ ಬಗೆಗಿನ ಜನರ ಕುತೂಹಲ ತಣಿಸಲು ಹಾಗೂ ಪ್ರವಾಸಿಗರಿಗೆ ಜುರಾಸಿಕ್‌ ಪಾರ್ಕ್‌ನ ಅನುಭವಗಳನ್ನು ನೀಡಲು ಭಾರತದ ಮೊಟ್ಟಮೊದಲ ಡೈನೋಸಾರ್‌ ವಸ್ತು ಸಂಗ್ರಹಾಲಯ ಮತ್ತು ಉದ್ಯಾನವನ್ನು ಗುಜರಾತ್‌ನ ಮಹಾಸಾಗರ್‌ ಜಿಲ್ಲೆಯಲ್ಲಿ ನಿರ್ಮಿಸಲಾಗಿದೆ. ಅದು ಶನಿವಾರವಷ್ಟೇ ಲೋಕಾರ್ಪಣೆಯಾಗಿದೆ. ಗುಜರಾತ್‌ ಮುಖ್ಯಮಂತ್ರಿ ವಿಜಯ್‌ ರೂಪಾನಿ ಅವರು ಉದ್ಘಾಟಿಸಿದ್ದಾರೆ.

ಬೃಹತ್‌ ಡೈನೋಸಾರ್‌ ಪ್ರತಿಕೃತಿ ವೀಕ್ಷಿಸುತ್ತಿರುವ ಜನ.

‌ಬಾಲಸೈನೋರ್‌ ಬಳಿಯ ರೈಲಿ ಗ್ರಾಮದಲ್ಲಿ ಈ ಸಂಗ್ರಹಾಲಯ ಮತ್ತು ಉದ್ಯಾನವನ್ನು ನಿರ್ಮಿಸಲಾಗಿದೆ. ಇಲ್ಲಿ ವಿವಿಧ ಬಗೆಯ ಡೈನೋಸಾರ್‌ಗಳು ಮತ್ತು ಅವುಗಳ ಸಂತತಿಯ ಪಳೆಯುಳಿಕೆಗಳನ್ನೂ ಇರಿಸಲಾಗಿದೆ.

ADVERTISEMENT

ಇದು ದೇಶದ ಮೊದಲ ಡೈನೋಸಾರ್‌ ವಸ್ತು ಸಂಗ್ರಹಾಲಯ ಹಾಗೂ ವಿಶ್ವದ ಮೂರನೇ ಉದ್ಯಾನ ಎಂದು ಹೇಳಲಾಗಿದೆ.

ರೈಲಿ ಗ್ರಾಮದ ಪ್ರದೇಶ ವಿಶ್ವದಲ್ಲೇ ಮೂರನೇ ಅತಿದೊಡ್ಡ ಡೈನೋಸಾರ್‌ ಪಳೆಯುಳಿಕೆ ತಾಣವಾಗಿದೆ ಮತ್ತು ಪ್ರಪಂಚದಲ್ಲೇ ಎರಡನೇ ಅತಿದೊಟ್ಟ ಡೈನೋಸಾರ್‌ ಮೊಟ್ಟೆ ಕೇಂದ್ರವೆಂದು ತಿಳಿದುಬಂದಿದೆ. ಇಲ್ಲಿ ಸರಿ ಸುಮಾರು 10 ಸಾವಿರ ಮೊಟ್ಟೆಗಳನ್ನು ಪತ್ತೆ ಮಾಡಲಾಗಿದೆ.

ಈ ಡೈನೋಸಾರ್‌ ಉದ್ಯಾನವನ್ನು ‘3ಡಿ’ ತಂತ್ರಜ್ಞಾನ ಮತ್ತು ಜೀವಂತ ಚಲನೆಯುಳ್ಳ ಪ್ರಾಣಿಗಳಂತೆ, ಸಂವಾದ ನಡೆಸುವ ಕಿಯೋಸ್ಕ್‌ಗಳನ್ನು ಅಳವಡಿಸಿ ಅತ್ಯಾಧುನಿಕ ತಂತ್ರಜ್ಞಾನ ಬಳಸಿ ಜೀವಿತಾವಧಿಯಲ್ಲಿ ಇದ್ದಿರಬಹುದಾದ ಬೃಹತ್‌ ಗಾತ್ರದಲ್ಲಿ ಪ್ರತಿಕೃತಿಗಳನನ್ನು ನಿರ್ಮಿಸಲಾಗಿದೆ.

ಪ್ರವಾಸೋದ್ಯಮ ಉತ್ತೇಜನಕ್ಕಾಗಿ ಅಂತರರಾಷ್ಟ್ರೀಯಮಟ್ಟದಲ್ಲಿ ಈ ತಾಣವನ್ನು ಪ್ರಚಾರ ಮಾಡಲು ಎಲ್ಲಾ ಪ್ರಯತ್ನ ಮಾಡಲಾಗುವುದು. ಇದಕ್ಕಾಗಿ ರಾಜ್ಯ ಸರ್ಕರ ₹ 10 ಕೋಟಿ ನಿಧಿಯನ್ನು ನೀಡಿದೆ. ವಿಶ್ವದ ಪ್ರವಾಸೋದ್ಯಮ ನಕ್ಷೆಯಲ್ಲಿ ಗುಜರಾತ್‌ ಬರಲಿದೆ. ಅದಕ್ಕೆ ಈ ಉದ್ಯಾನವೂ ಸೇರ್ಪಡೆಯಾಗಲಿದೆ ಎಂದು ಸಿಎಂ ರೂಪಾನಿ ಹೇಳಿದ್ದಾರೆ.

ವಸ್ತು ಸಂಗ್ರಹಾಲಯದಲ್ಲಿ ಅಳವಡಿಸಿರುವ ಆದಿ ಮಾನವನ ಚಿತ್ರಪಟ ವೀಕ್ಷಣೆಯಲ್ಲಿ ಬಾಲಕ
ಡೈನೋಸಾರ್‌ಗಳ ಪ್ರತಿರೂಪಗಳ ಮಾರಾಟದಲ್ಲಿ ತೊಡಗಿದ್ದ ವ್ಯಾಪಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.