ADVERTISEMENT

ಗುಜರಾತ್‌ ಕಾಂಗ್ರೆಸ್‌ ಸ್ಥಿತಿ ಶೋಚನೀಯ: ಕೈ ಮುಖಂಡರಲ್ಲಿ ಉತ್ಸಾಹ ಮೂಡಿಸಿದ ಹಿಮಾಚಲ

ಶೆಮಿಜ್‌ ಜಾಯ್‌
Published 8 ಡಿಸೆಂಬರ್ 2022, 19:12 IST
Last Updated 8 ಡಿಸೆಂಬರ್ 2022, 19:12 IST
ಗುಜರಾತ್‌ನಲ್ಲಿ ಕಾಂಗ್ರೆಸ್‌ ಸ್ಥಿತಿ ಶೋಚನೀಯ: ‘ಕೈ’ ಮುಖಂಡರಲ್ಲಿ ಉತ್ಸಾಹ ಮೂಡಿಸಿದ ಹಿಮಾಚಲ
ಗುಜರಾತ್‌ನಲ್ಲಿ ಕಾಂಗ್ರೆಸ್‌ ಸ್ಥಿತಿ ಶೋಚನೀಯ: ‘ಕೈ’ ಮುಖಂಡರಲ್ಲಿ ಉತ್ಸಾಹ ಮೂಡಿಸಿದ ಹಿಮಾಚಲ   

ನವದೆಹಲಿ: ಗುಜರಾತ್‌ ವಿಧಾನಸಭೆಯಲ್ಲಿ ವಿರೋಧ ಪಕ್ಷದ ಸ್ಥಾನವನ್ನೂ ಕಳೆದುಕೊಳ್ಳುವ ಸ್ಥಿತಿಗೆ ಕುಸಿದಿರುವ ಕಾಂಗ್ರೆಸ್‌ಗೆ, ಹಿಮಾಚಲ ಪ್ರದೇಶದಲ್ಲಿನ ಗೆಲುವು ಸಮಾಧಾನದ ಸಂಗತಿ
ಯಾಗಿದೆ. 2018ರ ಬಳಿಕ ನಡೆದ 18 ರಾಜ್ಯಗಳ ವಿಧಾನಸಭಾ ಚುನಾವಣೆ
ಗಳಲ್ಲಿ ಸೋತಿರುವ ಕಾಂಗ್ರೆಸ್‌ಗೆ ಈ ಅವಧಿಯಲ್ಲಿ ದೊರೆತ ಮೊದಲ ಗೆಲುವು ಇದು.

ಪಕ್ಷವು ಅಸ್ತಿತ್ವವನ್ನೇ ಕಳೆದುಕೊಳ್ಳುವಂತಹ ಸ್ಥಿತಿಯಲ್ಲಿರುವಾಗ ಈ ಗೆಲುವು ಕಾಂಗ್ರೆಸ್‌ ನಾಯಕರಿಗೆ ಹೊಸ ಉತ್ಸಾಹವನ್ನು ನೀಡಿದೆ. ‘ಕಾಂಗ್ರೆಸ್‌ಮುಕ್ತ ಭಾರತ’ ನಿರ್ಮಾಣ ಮಾಡಬೇಕು ಎಂಬ ಬಿಜೆಪಿ, ಅದರಲ್ಲೂ ಪ್ರಧಾನಿ ನರೇಂದ್ರ ಮೋದಿ ಆಕಾಂಕ್ಷೆಗೆ ಈ ಗೆಲುವು ತಕ್ಷಣಕ್ಕೆ ತಡೆ ನೀಡಿದೆ. ಆದರೆ, ಗುಜರಾತ್‌ನಲ್ಲಿನ ಹೀನಾಯ ಸೋಲು ಈ ಗೆಲುವಿನ ಮಹತ್ವವನ್ನು ಮರೆಮಾಚಿದೆ.

ಗುಜರಾತ್‌ನಲ್ಲಿನ ಸೋಲು ಕಾಂಗ್ರೆಸ್‌ಗೆ ಅತ್ಯಂತ ದೊಡ್ಡ ಪೆಟ್ಟು. ಬಿಜೆಪಿಯನ್ನು ಚುನಾವಣೆಯಲ್ಲಿ ಎದುರಿಸುವಲ್ಲಿ ಮತ್ತು ವಿರೋಧ ಪಕ್ಷಗಳ ಒಕ್ಕೂಟವನ್ನು ಮುನ್ನಡೆಸುವಲ್ಲಿ ಕಾಂಗ್ರೆಸ್‌ ಸಮರ್ಥವಲ್ಲ ಎಂಬ ಸಂಕಥನವನ್ನು ಈ ಸೋಲು ಮತ್ತಷ್ಟು ಗಟ್ಟಿಗೊಳಿಸಿದೆ.

ADVERTISEMENT

1990ರ ನಂತರ ಗುಜರಾತ್‌ನಲ್ಲಿ ನಡೆದ ಪ್ರತಿ ವಿಧಾನಸಭಾ ಚುನಾವಣೆಯಲ್ಲೂ ಕಾಂಗ್ರೆಸ್‌ ತನ್ನ ಸ್ಥಾನವನ್ನು ಉತ್ತಮಪಡಿಸಿಕೊಳ್ಳುತ್ತಲೇ ಬಂದಿತ್ತು. 1990ರಲ್ಲಿ 33 ಸ್ಥಾನ ಮತ್ತು ಶೇ 30.74
ರಷ್ಟು ಮತಗಳಿಂದ, ಅದರ ಬಲ 2017ರಲ್ಲಿ 77 ಸ್ಥಾನಗಳು ಮತ್ತು ಶೇ 41.44ರಷ್ಟು ಮತಗಳ ಮಟ್ಟದಷ್ಟು ಕಾಂಗ್ರೆಸ್‌ ಬಲಾಢ್ಯವಾಗಿತ್ತು. ಆದರೆ, 2022ರ ಈ ಚುನಾವಣೆ ಪಕ್ಷದ ಈವರೆಗಿನ ಎಲ್ಲಾ ಚುನಾವಣಾ ಸಾಧನೆಗಳನ್ನು ತಲೆಕೆಳಗು ಮಾಡಿದೆ. ಸದ್ದುಗದ್ದಲವಿಲ್ಲದ ಪ್ರಚಾರ, ದಿಕ್ಕೇ ಇಲ್ಲದಂತಹ ನಾಯಕತ್ವ ಮತ್ತು ಎಎಪಿಯ ಪ್ರವೇಶವು ಕಾಂಗ್ರೆಸ್‌ ಅನ್ನು 17 ಸ್ಥಾನಗಳಿಗೆ ಮತ್ತು ಅದರ ಮತ ಪ್ರಮಾಣವನ್ನು ಶೇ 27ರಷ್ಟಕ್ಕೆ ಕುಗ್ಗಿಸಿದೆ.

‘ಜನಾಭಿಪ್ರಾಯವನ್ನು ಸ್ವೀಕರಿಸುತ್ತೇವೆ ಮತ್ತು ಪಕ್ಷವು ವಿಫಲವಾದದ್ದು ಎಲ್ಲಿ ಎಂಬುದನ್ನು ಪರಾಮರ್ಶಿಸುತ್ತೇವೆ.ಪಕ್ಷವನ್ನು ಮತ್ತೆ ಸಂಘಟಿಸುತ್ತೇವೆ’ ಎಂದು ಕಾಂಗ್ರೆಸ್‌ನ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.

2014 ಮತ್ತು 2019ರ ಲೋಕಸಭಾ ಚುನಾವಣೆಗಳಲ್ಲಿ ಗುಜರಾತ್‌ ಜನರು ಕಾಂಗ್ರೆಸ್‌ ಅನ್ನು ಸಂಪೂರ್ಣವಾಗಿ ತಿರಸ್ಕರಿಸಿದ್ದರೂ, ಪಕ್ಷವು ರಾಜ್ಯ ರಾಜಕಾರಣದಲ್ಲಿ ಪ್ರಮುಖ ಪಾಲುದಾರನಾಗಿತ್ತು. ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಗೆ ಪ್ರಬಲ ಎದುರಾಳಿ ಆಗಿತ್ತು. 2002ರ ವಿಧಾನಸಭಾ ಚುನಾವಣೆಯ ನಂತರ ಪ್ರತಿ ಚುನಾವಣೆಯಲ್ಲೂ ಕಾಂಗ್ರೆಸ್‌ ಶೇ 40ಕ್ಕಿಂತಲೂ ಹೆಚ್ಚು ಮತಗಳನ್ನು ಪಡೆದಿದೆ. ಆದರೆ, ಈ ಬಾರಿ ಬಿಜೆಪಿಯೇತರ ಮತಗಳು ಕಾಂಗ್ರೆಸ್‌ನಿಂದ ದೂರ ಸರಿದಿವೆ.

ಈ ಬಾರಿ ಕಾಂಗ್ರೆಸ್‌ ಶೇ 27ರಷ್ಟು ಮತ ಪಡೆದಿದ್ದರೆ, ಎಎಪಿ ಶೇ 12.9 ರಷ್ಟು ಮತ ಪಡೆದಿದೆ. ಎರಡನ್ನೂ ಸೇರಿಸಿದರೆ ಶೇ 40ರಷ್ಟು ಮತಗಳಾಗುತ್ತವೆ. ಕಾಂಗ್ರೆಸ್‌ನ ಮತಗಳು ಎಎಪಿ
ಯತ್ತ ಸರಿದಿರುವುದನ್ನು ಇದು ತೋರಿಸುತ್ತದೆ. ಬಿಜೆಪಿಯೇ ಅಧಿಕಾರಕ್ಕೆ ಬರುತ್ತದೆ ಎಂದು ಗೊತ್ತಿದ್ದರೂ ಬಿಜೆಪಿಯೇತರ ಮತದಾರರು ಕಾಂಗ್ರೆಸ್‌ನ ಆಚೆಗೆ ಪರ್ಯಾಯವನ್ನು ಎದುರು ನೋಡುತ್ತಿರುವುದನ್ನು ಇದು ತೋರಿಸುತ್ತದೆ.

ಕ್ಷತ್ರಿಯ, ಹರಿಜನ, ಆದಿವಾಸಿ ಮತ್ತು ಮುಸ್ಲಿಂ (ಕೆಎಚ್‌ಎಎಂ) ಮತದಾರರ ಸಮೀಕರಣದಲ್ಲಿ ಕಾಂಗ್ರೆಸ್‌ 1985ರಲ್ಲಿ ಈವರೆಗಿನ ಅತ್ಯಂತ ದೊಡ್ಡ (149 ಸ್ಥಾನಗಳು) ಗೆಲುವನ್ನು ಸಾಧಿಸಿತ್ತು. ಆದರೆ, ಈ ಬಾರಿ ಈ ತಂತ್ರ ಕೈಕೊಟ್ಟಿದೆ. ಪಕ್ಷದ ನಾಯಕ ರಾಹುಲ್ ಗಾಂಧಿ ಭಾರತ್ ಜೋಡೊ ಯಾತ್ರೆಯಲ್ಲಿನಿರತರಾಗಿದ್ದರು ಮತ್ತು ರಾಜ್ಯದಲ್ಲಿ ಪ್ರಚಾರ ನಡೆಸಿದ್ದು ಒಂದು ದಿನ ಮಾತ್ರ. ಮನೆ–ಮನೆ ಭೇಟಿ ನೀಡುತ್ತಿದ್ದೇವೆ ಎಂದು ಕಾಂಗ್ರೆಸ್‌ ಹೇಳಿದ್ದರೂ, ಮತದಾರರು ಇದರಿಂದ ಪ್ರಭಾವಿತರಾದಂತೆಕಾಣುತ್ತಿಲ್ಲ. ಪಕ್ಷದ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಈ ವಾದವನ್ನು ತಳ್ಳಿಹಾಕುತ್ತಾರೆ.

ಈ ಫಲಿತಾಂಶ ನಿರಾಶಾದಾಯಕವಾಗಿರುವುದು ನಿಜ. ಆದರೆ ಬಿಜೆಪಿ, ಎಎಪಿ ಮತ್ತು ಎಐಎಂಐಎಂಗಳು ಒಟ್ಟಾಗಿ ಕಾಂಗ್ರೆಸ್‌ ಎದುರು ಕಣಕ್ಕೆ ಇಳಿದಿದ್ದವು. ರಾಜ್ಯ ಮತ್ತು ಕೇಂದ್ರದ ಎಲ್ಲಾ ಸಂಸ್ಥೆಗಳನ್ನು ಬಿಜೆಪಿ ಬಳಸಿಕೊಂಡಿತು. ನಮಗೆ ದೊರೆತಿರುವ ಮತಗಳ ಪ್ರಮಾಣವು, ನಾವು ಮತ್ತೆ ಪಕ್ಷವನ್ನು ಕಟ್ಟಬಹುದು ಎಂಬ ವಿಶ್ವಾಸ ಮೂಡಿಸುತ್ತದೆ. ಗುಜರಾತ್‌ನಲ್ಲಿ ನಾವು ಮಾತ್ರವೇ ಪರ್ಯಾಯ ಎಂದು ಜೈರಾಮ್‌ ರಮೇಶ್ ಹೇಳಿದ್ದಾರೆ.

----

lಗುಜರಾತ್ ಚುನಾವಣೆಗೆ ಒಂದು ತಿಂಗಳ ಹಿಂದೆ ಸೇತುವೆ ದುರಂತದಲ್ಲಿ 135 ಜನರು ಸಾವಿಗೀಡಾಗಿದ್ದ ಮೊರ್ಬಿಯಲ್ಲಿ ಬಿಜೆಪಿ ಗೆದ್ದಿದೆ. ಕಾಂತಿಲಾಲ್ ಅವರು 62,079 ಮತಗಳಿಂದ ಜಯ ಸಾಧಿಸಿದ್ದಾರೆ

lಹಿಮಾಚಲ ಪ್ರದೇಶದಲ್ಲಿ ಒಂದೂ ಕ್ಷೇತ್ರ ಗೆಲ್ಲುವಲ್ಲಿ ಎಎಪಿ ವಿಫಲವಾಗಿದ್ದು, ಡಾಲ್‌ಹೌಸಿ, ಚೋಪಲ್, ಅಕ್ರಿ, ಚಂಬಾ ಕಸುಮ್ಟಿ ಕ್ಷೇತ್ರಗಳಲ್ಲಿ ಪಕ್ಷದ ಅಭ್ಯರ್ಥಿಗಳಿಗೆ ‘ನೋಟಾ’ಗಿಂತಲೂ ಕಡಿಮೆ ಮತಗಳು ಸಿಕ್ಕಿವೆ

lಹಿಮಾಚಲ ಪ್ರದೇಶ ಮುಖ್ಯಮಂತ್ರಿ ಜೈರಾಮ್ ಠಾಕೂರ್ ಅವರ ಸಂಪುಟದ 8 ಸಚಿವರು ಸೋತಿದ್ದಾರೆ

lಹಿಮಾಚಲ ಪ್ರದೇಶದಲ್ಲಿ ಕಾಂಗ್ರೆಸ್‌ನಿಂದ ಗೆದ್ದಿರುವ ಅಭ್ಯರ್ಥಿಗಳ ಸಭೆಯನ್ನು ಶುಕ್ರವಾರ ಕರೆಯಲಾಗಿದೆ ಸಿಎಲ್‌ಪಿ ನಾಯಕನ ಆಯ್ಕೆ ನಡೆಯುವ ಸಾಧ್ಯತೆಯಿದೆ

lವಿಧಾನಸಭೆಯಲ್ಲಿ ಕನಿಷ್ಠ ಶೇ 10ರಷ್ಟು ಸ್ಥಾನಗಳನ್ನು ಹೊಂದಿರುವ ಪಕ್ಷಕ್ಕೆ ಅಧಿಕೃತ ಪ್ರತಿಪಕ್ಷದ ಮಾನ್ಯತೆ ಸಿಗುತ್ತದೆ. 182 ಸದಸ್ಯಬಲದ ಗುಜರಾತ್ ವಿಧಾನಸಭೆ
ಯಲ್ಲಿ ಪ್ರತಿಪಕ್ಷದ ಸ್ಥಾನಕ್ಕೆ 19 ಶಾಸಕರ ಅಗತ್ಯವಿದೆ. ಆದರೆ, ಕಾಂಗ್ರೆಸ್ ಗೆದ್ದಿರುವುದು 17 ಕಡೆ ಮಾತ್ರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.