
ಅಹಮದಾಬಾದ್: ದೇಶದ ವಿವಿಧೆಡೆ ವಿಧ್ವಂಸಕ ಕೃತ್ಯ ಎಸಗಲು ಸಂಚು ರೂಪಿಸಿದ ಆರೋಪದಲ್ಲಿ ಗುಜರಾತ್ ಭಯೋತ್ಪಾದನಾ ನಿಗ್ರಹ ದಳವು (ಎಟಿಎಸ್) ವೈದ್ಯ ಸೇರಿದಂತೆ ಮೂವರು ಶಂಕಿತ ಉಗ್ರರನ್ನು ಬಂಧಿಸಿದೆ.
ಬಂಧಿತರನ್ನು ಡಾ.ಅಹ್ಮದ್ ಮೊಹಿಯುದ್ದೀನ್ ಸೈಯದ್, ಆಜಾದ್ ಸುಲೆಮಾನ್ ಶೇಖ್ ಮತ್ತು ಮೊಹಮ್ಮದ್ ಸುಹೇಲ್ ಎಂದು ಗುರುತಿಸಲಾಗಿದೆ. ಇವರು ದಾಳಿಗೆ ಸಂಚು ರೂಪಿಸಲು ಲಖನೌ, ದೆಹಲಿ ಮತ್ತು ಅಹಮದಾಬಾದ್‌ನ ಹಲವು ಸ್ಥಳಗಳಿಗೆ ಭೇಟಿ ನೀಡಿದ್ದರು ಎಂದು ಎಟಿಎಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಡಾ.ಸೈಯದ್ ತನ್ನ ಸಹಚರರೊಂದಿಗೆ ಸೇರಿಕೊಂಡು ‘ರೈಸಿನ್’ ಎಂಬ ವಿಷಕಾರಿ ರಾಸಾಯನಿಕ ಬಳಸಿ ವಿಧ್ವಂಸಕ ಕೃತ್ಯ ನಡೆಸಲು ಸಂಚು ರೂಪಿಸಿದ್ದ ಎಂದು ಗುಜರಾತ್ ಎಟಿಎಸ್ ಡಿಐಜಿ ಸುನಿಲ್ ಜೋಶಿ ಸುದ್ದಿಗಾರರಿಗೆ ತಿಳಿಸಿದರು. ಇವರಿಗೆ ಸೂಚನೆಗಳನ್ನು ನೀಡುತ್ತಿದ್ದ ಹ್ಯಾಂಡ್ಲರ್, ‘ಇಸ್ಲಾಮಿಕ್ ಸ್ಟೇಟ್ ಖೊರಾಸಾನ್’ ಜತೆ ನಂಟು ಹೊಂದಿದ್ದಾನೆ ಎಂದು ಹೇಳಲಾಗಿದೆ.
‘ಎಟಿಎಸ್ ಅಧಿಕಾರಿಗಳು ಖಚಿತ ಮಾಹಿತಿ ಮೇರೆಗೆ ಹೈದರಾಬಾದ್‌ನ ಸೈಯದ್‌ನನ್ನು ನವೆಂಬರ್ 7ರಂದು ಗಾಂಧಿನಗರದಲ್ಲಿ ಬಂಧಿಸಿದ್ದಾರೆ. ಆತನಿಂದ ಪಿಸ್ತೂಲ್, ಸ್ಫೋಟಕಗಳು ಮತ್ತು ನಾಲ್ಕು ಲೀಟರ್ ಹರಳೆಣ್ಣೆ ವಶಪಡಿಸಿಕೊಳ್ಳಲಾಗಿದೆ’ ಎಂದು ಜೋಶಿ ತಿಳಿಸಿದರು.
‘ಚೀನಾದಲ್ಲಿ ಎಂಬಿಬಿಎಸ್ ಪದವಿ ಪಡೆದಿರುವ ಸೈಯದ್, ದೊಡ್ಡ ಭಯೋತ್ಪಾದಕ ದಾಳಿ ನಡೆಸಲು ‘ರೈಸಿನ್’ ಎಂಬ ಅತ್ಯಂತ ಮಾರಕ ವಿಷವನ್ನು ತಯಾರಿಸುತ್ತಿದ್ದಾನೆ. ಅದಕ್ಕಾಗಿ ಈಗಾಗಲೇ ಸಂಶೋಧನೆ ಪ್ರಾರಂಭಿಸಿದ್ದನಲ್ಲದೆ, ಅಗತ್ಯ ಕಚ್ಚಾ ವಸ್ತುಗಳನ್ನು ಸಂಗ್ರಹಿಸಿದ್ದನು’ ಎಂದು ಮಾಹಿತಿ ನೀಡಿದರು.
‘ರೈಸಿನ್’ ಎಂಬ ರಾಸಾಯನಿಕವು ವಿಷಕಾರಿ ಆಗಿದ್ದು, ಹರಳೆಣ್ಣೆ ಬೀಜವನ್ನು ಸಂಸ್ಕರಿಸಿದ ಬಳಿಕ ಉಳಿದ ತ್ಯಾಜ್ಯ ವಸ್ತುಗಳಿಂದ ಇದನ್ನು ತಯಾರಿಸಬಹುದು.
‘ಶಸ್ತ್ರಾಸ್ತ್ರಗಳನ್ನು ಪಡೆದು ಭಯೋತ್ಪಾದಕ ದಾಳಿಗೆ ಸಂಚು ರೂಪಿಸಲು ಈ ಮೂವರು ಗುಜರಾತ್‌ಗೆ ಬಂದಿದ್ದರು. ಪಿತೂರಿಯ ಭಾಗವಾಗಿ ಹಣ ಸಂಗ್ರಹಿಸಲು ಮತ್ತು ವ್ಯಕ್ತಿಗಳನ್ನು ನೇಮಿಸಿಕೊಳ್ಳಲು ಸೈಯದ್ ಯೋಜಿಸಿದ್ದ’ ಎಂದರು.
ಪಾಕ್‌ನಿಂದ ಶಸ್ತ್ರಾಸ್ತ್ರ
‘ಇತರ ಇಬ್ಬರು ಆರೋಪಿಗಳಾದ ಶೇಖ್ ಮತ್ತು ಸುಹೇಲ್ ಉತ್ತರ ಪ್ರದೇಶದವರಾಗಿದ್ದು ಗುಜರಾತ್‌ನ ಬನಾಸ್‌ಕಾಂಠಾ ಜಿಲ್ಲೆಯಲ್ಲಿ ಬಂಧಿಸಲಾಯಿತು. ಸೈಯದ್‌ಗೆ ಶಸ್ತ್ರಾಸ್ತ್ರ ಪೂರೈಸಿದ ಆರೋಪದ ಮೇಲೆ ಇವರನ್ನು ಬಂಧಿಸಲಾಗಿದೆ. ತಮ್ಮ ಹ್ಯಾಂಡ್ಲರ್ ಕಳುಹಿಸಿದ ಶಸ್ತ್ರಾಸ್ತ್ರವನ್ನು ಇವರು ರಾಜಸ್ತಾನದ ಹನುಮಗಢದಲ್ಲಿ ಪಡೆದುಕೊಂಡಿದ್ದರು’ ಎಂದು ಡಿಐಜಿ ವಿವರಿಸಿದರು. ತಮ್ಮ ಹ್ಯಾಂಡ್ಲರ್ ಪಾಕಿಸ್ತಾನದಿಂದ ಡ್ರೋನ್ ಮೂಲಕ ಶಸ್ತ್ರಾಸ್ತ್ರಗಳನ್ನು ಕಳುಹಿಸಿದ್ದಾನೆ ಎಂಬುದನ್ನು ಅರೋಪಿಗಳು ವಿಚಾರಣೆ ವೇಳೆ ಬಹಿರಂಗಪಡಿಸಿದ್ದಾರೆ ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.