ADVERTISEMENT

ಗುಜರಾತ್‌: ಕಾಂಗ್ರೆಸ್ ಶಾಸಕ ಅರ್ಜುನ್‌ ಮೊದ್ವಾಡಿಯಾ ರಾಜೀನಾಮೆ, BJP ಸೇರ್ಪಡೆ?

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 4 ಮಾರ್ಚ್ 2024, 13:06 IST
Last Updated 4 ಮಾರ್ಚ್ 2024, 13:06 IST
<div class="paragraphs"><p>ಅರ್ಜುನ್‌ ಮೊದ್ವಾಡಿಯಾ</p></div>

ಅರ್ಜುನ್‌ ಮೊದ್ವಾಡಿಯಾ

   

ಅಹಮದಾಬಾದ್: ಗುಜರಾತ್‌ನ ಹಿರಿಯ ಕಾಂಗ್ರೆಸ್ ನಾಯಕ ಮತ್ತು ಪೋರಬಂದರ್ ಶಾಸಕ ಅರ್ಜುನ್ ಮೊದ್ವಾಡಿಯಾ ಅವರು ಇಂದು (ಸೋಮವಾರ) ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ. ಜತೆಗೆ ವಿಧಾನಸಭೆ ಸದಸ್ಯತ್ವವನ್ನೂ ತೊರೆದಿದ್ದಾರೆ.

ಗುಜರಾತ್ ಕಾಂಗ್ರೆಸ್‌ನ ಮಾಜಿ ಅಧ್ಯಕ್ಷ ಮತ್ತು ಮಾಜಿ ವಿರೋಧ ಪಕ್ಷದ ನಾಯಕರಾಗಿದ್ದ ಮೊದ್ವಾಡಿಯಾ ಅವರು ಕೆಲವೇ ದಿನಗಳಲ್ಲಿ ಬಿಜೆಪಿ ಸೇರುವ ಸಾಧ್ಯತೆ ಇದೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ADVERTISEMENT

ಮೊದ್ವಾಡಿಯಾ ಅವರು ರಾಜೀನಾಮೆ ಪತ್ರವನ್ನು ಗುಜರಾತ್ ವಿಧಾನಸಭೆ ಸ್ಪೀಕರ್ ಶಂಕರ್ ಚೌಧರಿ ಅವರಿಗೆ ಸಲ್ಲಿಸಿದ್ದಾರೆ. ಇದರ ಬೆನ್ನಲ್ಲೇ ಚೌಧರಿ ಅವರು ಮೊದ್ವಾಡಿಯಾ ಅವರ ರಾಜೀನಾಮೆಯನ್ನು ಅಂಗೀಕರಿಸಿದ್ದಾರೆ ಎಂದು ಸ್ಪೀಕರ್ ಕಚೇರಿ ಖಚಿತಪಡಿಸಿದೆ.

ರಾಜೀನಾಮೆ ಬಳಿಕ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಪತ್ರ ಬರೆದಿರುವ ಮೊದ್ವಾಡಿಯಾ, ‘ಅಯೋಧ್ಯೆಯ ರಾಮ ಮಂದಿರದ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಳ್ಳುವ ಆಹ್ವಾನವನ್ನು ಪಕ್ಷದ ಮುಖಂಡರು ನಿರಾಕರಿಸಿದ್ದರು. ಪಕ್ಷದ ನಾಯಕತ್ವದ ನಿರ್ಧಾರವೇ ತಮ್ಮ ರಾಜೀನಾಮೆಗೆ ಕಾರಣ ಎಂದು ಉಲ್ಲೇಖಿಸಿದ್ದಾರೆ. ಪಕ್ಷದ ನಿರ್ಧಾರವು ದೇಶದ ಜನರ ಭಾವನೆಗಳಿಗೆ ನೋವುಂಟು ಮಾಡಿದೆ’ ಎಂದೂ ಹೇಳಿದ್ದಾರೆ.

‘ಕಾಂಗ್ರೆಸ್ ಒಂದು ಪಕ್ಷವಾಗಿ ಜನರ ಭಾವನೆಗಳನ್ನು ನಿರ್ಣಯಿಸಲು ಸಂಪೂರ್ಣವಾಗಿ ವಿಫಲವಾಗಿದೆ. ಜತೆಗೆ ದೇಶದಲ್ಲೇ ಪ್ರಮುಖ ಧಾರ್ಮಿಕ ಸಮಾರಂಭ ನಡೆಯುತ್ತಿರುವ ಸಂದರ್ಭದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು ಅಸ್ಸಾಂನಲ್ಲಿ ಗಲಭೆ ಸೃಷ್ಟಿಸುವ ಪ್ರಯತ್ನ ಮಾಡಿದ್ದರು. ಇದು ಪಕ್ಷದ ಕಾರ್ಯಕರ್ತರು ಮತ್ತು ದೇಶದ ನಾಗರಿಕರನ್ನು ಮತ್ತಷ್ಟು ಕೆರಳಿಸಿತು’ ಎಂದು ಅರ್ಜುನ್ ಹೇಳಿದ್ದಾರೆ.

ರಾಜ್ಯ ಘಟಕದ ಕಾರ್ಯಾಧ್ಯಕ್ಷ ಅಂಬರೀಶ್‌ ದೇರ್‌ ಅವರು ಕೂಡ ಇಂದು ಬೆಳಿಗ್ಗೆ ರಾಜೀನಾಮೆ ನೀಡಿದ್ದರಿಂದ ಲೋಕಸಭೆ ಚುನಾವಣೆ ಹೊಸ್ತಿಲಲ್ಲಿ ಗುಜರಾತ್‌ನಲ್ಲಿ ಕಾಂಗ್ರೆಸ್‌ಗೆ ತೀವ್ರ ಹಿನ್ನಡೆಯಾಗಿದೆ ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.