ADVERTISEMENT

ಮಾನಹಾನಿ ಪ್ರಕರಣ: ತೇಜಸ್ವಿ ಯಾದವ್‌ಗೆ 2ನೇ ಬಾರಿ ಸಮನ್ಸ್‌ ಜಾರಿ

​ಪ್ರಜಾವಾಣಿ ವಾರ್ತೆ
Published 22 ಸೆಪ್ಟೆಂಬರ್ 2023, 11:33 IST
Last Updated 22 ಸೆಪ್ಟೆಂಬರ್ 2023, 11:33 IST
ತೇಜಸ್ವಿ ಯಾದವ್‌
ತೇಜಸ್ವಿ ಯಾದವ್‌   

ಅಹಮದಾಬಾದ್‌: ಇಲ್ಲಿನ ಮೆಟ್ರೊಪಾಲಿಟನ್‌ ನ್ಯಾಯಾಲಯವು ಕ್ರಿಮಿನಲ್‌ ಮಾನಹಾನಿ ಪ್ರಕರಣದಲ್ಲಿ ವಿಚಾರಣೆಗೆ ಹಾಜರಾಗುವಂತೆ ಬಿಹಾರದ ಉಪ ಮುಖ್ಯಮಂತ್ರಿ ತೇಜಸ್ವಿ ಯಾದವ್‌ ಅವರಿಗೆ ಶುಕ್ರವಾರ ಎರಡನೇ ಸಮನ್ಸ್‌ ಜಾರಿ ಮಾಡಿದೆ. 

ಕೆಲವು ಗೊಂದಲಗಳಿಂದಾಗಿ ಮೊದಲ ಸಮನ್ಸ್‌ ತೇಜಸ್ವಿ ಅವರಿಗೆ ತಲುಪಿಲ್ಲ. ಈ ಕಾರಣಕ್ಕೆ ಹೆಚ್ಚುವರಿ ಮೆಟ್ರೊಪಾಲಿಟನ್‌ ಮ್ಯಾಜಿಸ್ಟ್ರೇಟ್‌ ಡಿ.ಜೆ. ಪರ್ಮಾರ್‌ ಅವರು ಎರಡನೇ ಸಮನ್ಸ್‌ ಜಾರಿ ಮಾಡಿದರು. ಈ ಸಮನ್ಸ್ ಪ್ರಕಾರ, ಆರ್‌ಜೆಡಿ ನಾಯಕರೂ ಆದ ತೇಜಸ್ವಿ ಅವರು ಅಕ್ಟೋಬರ್‌ 13ರಂದು ನ್ಯಾಯಾಲಯಕ್ಕೆ ಹಾಜರಾಗಬೇಕಿದೆ.

ತೇಜಸ್ವಿ ಅವರು ಇದೇ ವರ್ಷದ ಮಾರ್ಚ್ 21ರಂದು ಪಟ್ನಾದಲ್ಲಿ ಮಾಧ್ಯಮಗಳ ಮುಂದೆ ‘ಗುಜರಾತಿಗಳು ಮಾತ್ರ ವಂಚಕರು’ ಎಂದು ಮಾನಹಾನಿಕರ ಹೇಳಿಕೆ ನೀಡಿದ್ದಾರೆ ಎಂದು ಅಹಮದಾಬಾದ್‌ನ ಸಾಮಾಜಿಕ ಕಾರ್ಯಕರ್ತ ಮತ್ತು ಉದ್ಯಮಿ ಹರೇಶ್‌ ಮೆಹ್ತಾ ಸಾಕ್ಷ್ಯಸಮೇತ ನ್ಯಾಯಾಲಯದಲ್ಲಿ ದೂರು ದಾಖಲಿಸಿದ್ದರು.

ADVERTISEMENT

ಅರ್ಜಿ ವಿಚಾರಣೆ ನಡೆಸಿದ ಮ್ಯಾಜಿಸ್ಟ್ರೇಟ್‌ ಡಿ.ಜೆ. ಪರ್ಮಾರ್‌ ಅವರು ಸೆ. 22ರಂದು ವಿಚಾರಣೆಗೆ ಹಾಜರಾಗುವಂತೆ ಯಾದವ್‌ ಅವರಿಗೆ ಕಳೆದ ಆಗಸ್ಟ್‌ 28ರಂದು ಸಮನ್ಸ್‌ ಜಾರಿ ಮಾಡಿದ್ದರು. ಶುಕ್ರವಾರ ಪ್ರಕರಣ ವಿಚಾರಣೆಗೆ ಬಂದಾಗ, ಸಮನ್ಸ್ ಇನ್ನೂ ನ್ಯಾಯಾಲಯದಲ್ಲೇ ಇದ್ದು, ಅದು ತೇಜಸ್ವಿ ಅವರಿಗೆ ತಲುಪಿಲ್ಲ ಎಂಬುದನ್ನು ಅರ್ಜಿದಾರರು ನ್ಯಾಯಾಧೀಶರ ಗಮನಕ್ಕೆ ತಂದರು. 

ಅರ್ಜಿದಾರರು ಪೊಲೀಸ್ ಅಥವಾ ತನ್ನದೇ ವ್ಯವಸ್ಥೆಯ ಮೂಲಕ ನ್ಯಾಯಾಲಯವೇ ಯಾದವ್‌ಗೆ ಸಮನ್ಸ್ ತಲುಪಿಸಲಿ ಎನ್ನುವ ನಿರೀಕ್ಷೆಯಲ್ಲಿದ್ದಂತಿದೆ. ಮೆಹ್ತಾ ಅವರ ವಕೀಲರು ಸಮನ್ಸ್‌ ಅನ್ನು ಕೋರ್ಟ್‌ ಗುಮಾಸ್ತರಿಂದ ಸಂಗ್ರಹಿಸಲಿ. ದೂರುದಾರರಾಗಿರುವ ಕಾರಣ ಸಮನ್ಸ್ ಅನ್ನು ಯಾದವ್‌ಗೆ ತಲುಪಿಸುವುದು ಮೆಹ್ತಾ ಅವರ ಕೆಲಸ. ಇದಕ್ಕೆ ಅವರೇ ವ್ಯವಸ್ಥೆ ಮಾಡಿಕೊಳ್ಳಬೇಕೆಂದು ಸೂಚಿಸಿದ ನ್ಯಾಯಾಧೀಶರು, ಎರಡನೇ ಬಾರಿ ಸಮನ್ಸ್ ಜಾರಿಗೊಳಿಸಿ, ಗೊಂದಲಗಳಿಗೆ ತೆರೆ ಎಳೆದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.