ಅಹಮದಾಬಾದ್: ಆಧ್ಯಾತ್ಮಿಕ ಸಂಸ್ಥೆಯೊಂದಕ್ಕೆ ದೊರೆತಿದ್ದ ವಿದೇಶಿ ದೇಣಿಗೆಯಲ್ಲಿನ ಅವ್ಯವಹಾರದ ಬಗ್ಗೆ ಪ್ರಶ್ನಿಸಿದ್ದ ಅನಿವಾಸಿ ಭಾರತೀಯನ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ 10 ಮಂದಿಗೆ ಇಲ್ಲಿನ ಸೆಷನ್ಸ್ ಕೋರ್ಟ್ ಕಠಿಣ ಜೀವಾವಧಿ ಶಿಕ್ಷೆ ವಿಧಿಸಿದೆ.
84 ಸಾಕ್ಷಿದಾರರ ಹೇಳಿಕೆಗಳು ಮತ್ತು ದಾಖಲೆಗಳನ್ನು ಪರಿಗಣಿಸಿದ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಭರತ್ ಯಾದವ್ ಅವರು, 'ಸ್ವಾಧ್ಯಾಯ ಪರಿವಾರ'ದ 10 ಸದಸ್ಯರು ಹತ್ಯೆ ಮತ್ತು ಇತರ ಪ್ರಕರಣದಲ್ಲಿ ತಪ್ಪಿತಸ್ಥರು ಎಂದು ತೀರ್ಪು ನೀಡಿದ್ದಾರೆ.
'ಸ್ವಾಧ್ಯಾಯ ಪರಿವಾರ'ದೊಂದಿಗೆ ಸಂಪರ್ಕದಲ್ಲಿದ್ದ ಅನಿವಾಸಿ ಭಾರತೀಯ ಪಂಕಜ್ ತ್ರಿವೇದಿ ಅವರ ಮೇಲೆ 2006ರ ಜೂನ್ 15ರಂದು ಹಲ್ಲೆ ನಡೆಸಿ ಹತ್ಯೆ ಮಾಡಲಾಗಿತ್ತು.
2001ರ ಭುಜ್ ಭೂಕಂಪ ಪರಿಹಾರಕ್ಕಾಗಿ ವಿದೇಶಿ ದೇಣಿಗೆಯನ್ನು ಸಂಗ್ರಹಿಸಲು ತ್ರಿವೇದಿ ಅವರು ಸ್ವಾಧ್ಯಾಯ ಪರಿವಾರಕ್ಕೆ ಸಹಾಯ ಮಾಡಿದ್ದರು. ಬಳಿಕ ಆ ಹಣದ ವಿನಿಯೋಗದ ಬಗ್ಗೆ ತ್ರಿವೇದಿ ಪ್ರಶ್ನಿಸಿದಾಗ ಸಂಸ್ಥೆಯ ಸದಸ್ಯರು ಅವರಿಗೆ ಕಪಾಳಮೋಕ್ಷ ಮಾಡಿದ್ದರು. ಈ ವಿಚಾರಕ್ಕೆ ಸಂಬಂಧಿಸಿ ನ್ಯಾಯಾಲಯದಲ್ಲೂ ಸಂಸ್ಥೆಯ ಸದಸ್ಯರಿಗೆ ಹಿನ್ನಡೆಯಾದ ಕಾರಣ ಅವರು ದ್ವೇಷದಿಂದ ತ್ರಿವೇದಿ ಅವರನ್ನು ಹತ್ಯೆಗೈದಿದ್ದಾರೆ ಎಂದು ಪ್ಯಾಸಿಕ್ಯೂಷನ್ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.