ADVERTISEMENT

ಗುಜರಾತ್: ಆಫ್ರಿಕಾದಿಂದ ಹಿಂದಿರುಗಿದ ದಂಪತಿಗೆ ಓಮೈಕ್ರಾನ್; ಸೋಂಕಿತರ ಸಂಖ್ಯೆ 7

​ಪ್ರಜಾವಾಣಿ ವಾರ್ತೆ
Published 18 ಡಿಸೆಂಬರ್ 2021, 5:43 IST
Last Updated 18 ಡಿಸೆಂಬರ್ 2021, 5:43 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಅಹಮದಾಬಾದ್: ದಕ್ಷಿಣ ಆಫ್ರಿಕಾದ ಜಾಂಬಿಯಾದಿಂದ ಹಿಂದಿರುಗಿದ ಗುಜರಾತ್‌ನ ವಡೋದರಾ ನಗರದ ವೃದ್ಧ ದಂಪತಿಗಳಿಗೆ ಕೊರೊನಾ ವೈರಸ್‌ನ ರೂಪಾಂತರ ತಳಿ ಓಮೈಕ್ರಾನ್‌ ಸೋಂಕು ತಗುಲಿರುವುದು ದೃಢಪಟ್ಟಿದೆ ಎಂದು ಅಧಿಕಾರಿಗಳು ಶುಕ್ರವಾರ ತಿಳಿಸಿದ್ದಾರೆ.

ಈ ಮೂಲಕ ಗುಜರಾತ್‌ನಲ್ಲಿ ಸೋಂಕಿತರ ಸಂಖ್ಯೆ 7ಕ್ಕೆ ಏರಿಕೆಯಾಗಿದೆ. ಈ ಪೈಕಿ ಮೂವರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ವೃದ್ಧ ದಂಪತಿ ಜಾಂಬಿಯಾದಿಂದ ಹಿಂದಿರುಗಿದ್ದರು ಎಂದು ವಡೋದರ ಮುನ್ಸಿಪಲ್ ಕಾರ್ಪೊರೇಷನ್‌ ವೈದ್ಯಕೀಯ ಅಧಿಕಾರಿ ಡಾ ದೇವೇಶ್ ಪಟೇಲ್ ತಿಳಿಸಿದ್ದಾರೆ.

ಫತೇಪುರ ಪ್ರದೇಶದ ನಿವಾಸಿಗಳಾದ 75 ವರ್ಷದ ವ್ಯಕ್ತಿ ಮತ್ತು 67 ವರ್ಷದ ಆತನ ಪತ್ನಿ ಡಿಸೆಂಬರ್ 7ರಂದು ಆಫ್ರಿಕಾದಿಂದ ವಡೋದರಕ್ಕೆ ಹಿಂತಿರುಗಿದ್ದರು. ಅವರಿಗೆ ಯಾವುದೇ ರೋಗ ಲಕ್ಷಣಗಳು ಇರಲಿಲ್ಲ. ಸಂಬಂಧಿಕರ ಒತ್ತಾಯದಿಂದಾಗಿ ಇಬ್ಬರೂ ಆರ್‌ಟಿ-ಪಿಸಿಆರ್ ಪರೀಕ್ಷೆಗೆ ಒಳಪಟ್ಟಿದ್ದರು. ಬಳಿಕ ಡಿಸೆಂಬರ್ 12ರಂದು ಅವರಿಗೆ ಕೊರೊನಾ ವೈರಸ್ ಸೋಂಕು ತಗುಲಿರುವುದು ಪತ್ತೆಯಾಗಿತ್ತು.

ADVERTISEMENT

ದಂಪತಿಯನ್ನು ಅವರ ಮನೆಯಲ್ಲೇ ಐಸೋಲೇಟ್ ಮಾಡಲಾಗಿತ್ತು. ಮುಂಜಾಗ್ರತಾ ಕ್ರಮವಾಗಿ ಅವರ ಮಾದರಿಗಳನ್ನು ವೈರಾಣು ವಂಶವಾಹಿ ಸಂರಚನೆ ವಿಶ್ಲೇಷಣೆಗೆ (ಜೀನೋಮ್ ಸೀಕ್ವೆನ್ಸಿಂಗ್) ಗಾಂಧಿನಗರದ ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು. ಶುಕ್ರವಾರ ರಾತ್ರಿ ಗುಜರಾತ್ ಬಯೋಟೆಕ್ನಾಲಜಿ ರಿಸರ್ಚ್ ಸೆಂಟರ್ ಇಬ್ಬರೂ ಓಮೈಕ್ರಾನ್ ಸೋಂಕಿಗೆ ಒಳಗಾಗಿದ್ದಾರೆ ಎಂದು ವಿಎಂಸಿಗೆ ಮಾಹಿತಿ ನೀಡಿದೆ ಎಂದು ವೈದ್ಯಕೀಯ ಅಧಿಕಾರಿ ತಿಳಿಸಿದ್ದಾರೆ.

ಕೂಡಲೇ ಅವರ ಪ್ರಾಥಮಿಕ ಸಂಪರ್ಕಿತರನ್ನು ಪತ್ತೆ ಮಾಡಿ ಪರೀಕ್ಷೆಗೆ ಒಳಪಡಿಸಲಾಗಿದೆ. ಸೂರತ್‌ನ ಉದ್ಯಮಿ ಮತ್ತು ಮೆಹ್ಸಾನಾದ ಆರೋಗ್ಯ ಕಾರ್ಯಕರ್ತೆಗೆ ಓಮೈಕ್ರಾನ್ ಸೋಂಕು ತಗುಲಿರುವುದು ಪತ್ತೆಯಾಗಿದ್ದು, ಇಬ್ಬರನ್ನು ಕ್ವಾರಂಟೈನ್ ಮಾಡಲಾಗಿದೆ ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.