ADVERTISEMENT

ಗುಜರಾತ್: ಜೂ.15ರಿಂದ ಧಾರ್ಮಿಕ ಮತಾಂತರದ ವಿರುದ್ಧ ಮಸೂದೆ ಜಾರಿಗೆ

ಪಿಟಿಐ
Published 4 ಜೂನ್ 2021, 16:44 IST
Last Updated 4 ಜೂನ್ 2021, 16:44 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಅಹಮದಾಬಾದ್: ಗುಜರಾತ್ ಧಾರ್ಮಿಕ ಸ್ವಾತಂತ್ರ್ಯ (ತಿದ್ದುಪಡಿ) ಮಸೂದೆ 2021 ಅನ್ನು ಜೂನ್ 15ರಿಂದ ಜಾರಿಗೆ ತರಲು ಗುಜರಾತ್ ಸರ್ಕಾರ ನಿರ್ಧರಿಸಿದೆ ಎಂದು ಅಧಿಕಾರಿಯೊಬ್ಬರು ಶುಕ್ರವಾರ ತಿಳಿಸಿದ್ದಾರೆ.

ಈ ಮಸೂದೆಯಂತೆ ಮತಾಂತರ ಉದ್ದೇಶದಿಂದ ಬಲವಂತವಾಗಿ ಮದುವೆಯಾದ ಪ್ರಕರಣಗಳಲ್ಲಿ ಆರೋಪ ಸಾಬೀತಾದರೆ ಗರಿಷ್ಠ 10 ವರ್ಷ ಸಜೆ ವಿಧಿಸಲು ಅವಕಾಶವಿರುತ್ತದೆ.

ಗುಜರಾತ್ ಮುಖ್ಯಮಂತ್ರಿ ವಿಜಯ್ ರೂಪಾನಿ ಅವರು ಮಸೂದೆಯನ್ನು ಜಾರಿಗೆ ತರಲು ನಿರ್ಧಾರ ಕೈಗೊಂಡಿದ್ದು, ಜೂನ್ 15ರಿಂದ ಮಸೂದೆಯಾಗಿ ಜಾರಿಯಾಗಲಿದೆ ಎಂದು ಸಿಎಂ ಕಚೇರಿಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ADVERTISEMENT

ಏಪ್ರಿಲ್ 1ರಂದು ಲವ್ ಜಿಹಾದ್ ಅಥವಾ ವಿವಾಹದ ಮೂಲಕ ಮೋಸದ ಮತಾಂತರ ವಿರುದ್ಧ ಮಸೂದೆಯನ್ನು ಗುಜರಾತ್ ವಿಧಾನಸಭೆಯು ಬಹುಮತದೊಂದಿಗೆ ಅಂಗೀಕರಿಸಿತ್ತು. ಬಳಿಕ ಮೇ ತಿಂಗಳಲ್ಲಿ ರಾಜ್ಯಪಾಲ ಆಚಾರ್ಯ ದೇವವ್ರತ್ ಅನುಮೋದನೆ ನೀಡಿದ್ದರು.

ಗುಜರಾತ್ ಸರ್ಕಾರದ ಪ್ರಕಾರ, ಈ ಮಸೂದೆಯು ಧಾರ್ಮಿಕ ಮತಾಂತರದ ಉದ್ದೇಶಕ್ಕಾಗಿ ಮಹಿಳೆಯರನ್ನು ಮದುವೆಯ ಆಮಿಷಕ್ಕೆ ಒಳಪಡಿಸುವ ಪ್ರವೃತ್ತಿಯನ್ನು ತಡೆಗಟ್ಟುತ್ತದೆ. 2003ನೇ ಇಸವಿಯ ಕಾನೂನಿಗೆ ತಿದ್ದುಪಡಿ ತರಲಾಗಿತ್ತು.

ಉದ್ದೇಶಿತ ಮಸೂದೆಯ ಪ್ರಕಾರ, ಮತಾಂತರ ಉದ್ದೇಶದಿಂದ ಮದುವೆ ಪ್ರಕರಣಗಳಲ್ಲಿ ಕನಿಷ್ಠ 3ರಿಂದ ಐದು ವರ್ಷ ಸಜೆ ಹಾಗೂ ₹2 ಲಕ್ಷ ದಂಡ ವಿಧಿಸಲು ಅವಕಾಶವಿದೆ. ಸಂತ್ರಸ್ತೆ ಬಾಲಕಿ, ದಲಿತ ಮಹಿಳೆಯಾಗಿದ್ದಲ್ಲಿ ತಪ್ಪಿತ್ತಸ್ಥರಿಗೆ ನಾಲ್ಕರಿಂದ ಏಳು ವರ್ಷ ಸಜೆ ಹಾಗೂ ₹3 ಲಕ್ಷದ ವರೆಗೂ ದಂಡ ವಿಧಿಸಲು ಅವಕಾಶವಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.