ADVERTISEMENT

ಗುಜರಾತ್‌: ಬೆಟ್ಟಿಂಗ್‌ಗೆ ಟಿ20 ನಕಲಿ ಲೀಗ್– ನಾಲ್ವರ ಬಂಧನ

ಪಿಟಿಐ
Published 13 ಜುಲೈ 2022, 14:27 IST
Last Updated 13 ಜುಲೈ 2022, 14:27 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಮೆಹ್ಸಾನಾ, ಗುಜರಾತ್: ರಷ್ಯಾದ ಬುಕ್ಕಿಗಳಿಂದ ಬೆಟ್ಟಿಂಗ್‌ ಮಾಡಿಸಿ ಹಣ ಗಳಿಸುವ ಉದ್ದೇಶದಿಂದ ಟಿ20 ಕ್ರಿಕೆಟ್‌ ನಕಲಿ ಲೀಗ್‌ ಆಯೋಜಿಸಿದ ಆರೋಪದಲ್ಲಿ ಗುಜರಾತ್‌ ಪೊಲೀಸರು ನಾಲ್ವರನ್ನು ಬಂಧಿಸಿದ್ದಾರೆ.

ಐಪಿಎಲ್‌ ಮಾದರಿಯಲ್ಲೇ ಟೂರ್ನಿ ನಡೆಯುತ್ತಿದೆ ಎಂದು ರಷ್ಯಾದ ಬುಕ್ಕಿಗಳನ್ನು ನಂಬಿಸಲು ಪ್ರಮುಖ ಆರೋಪಿ ಶೋಯೆಬ್‌ ದಾವ್ಡ ಎಂಬಾತ ಮೆಹ್ಸಾನದ ಹೊರವಲಯದಲ್ಲಿ ಕೃಷಿ ಭೂಮಿ ಭೋಗ್ಯಕ್ಕೆ ಪಡೆದು ಕ್ರಿಕೆಟ್‌ ಮೈದಾನ ಸಜ್ಜುಗೊಳಿಸಿದ್ದ. ಕೃಷಿ ಕಾರ್ಮಿಕರು, 20 ಯುವಕರನ್ನು ಸೇರಿಸಿ ತಂಡ ಕಟ್ಟಿದ್ದ. ಯೂಟ್ಯೂಬ್‌ ಚಾನೆಲ್‌ನಲ್ಲಿ ಪಂದ್ಯಗಳ ನೇರ ಪ್ರಸಾರಕ್ಕೆ ವ್ಯವಸ್ಥೆ ಮಾಡಿದ್ದ ಎಂದು ಪೊಲೀಸರು ಹೇಳಿದ್ದಾರೆ.

‘ರಷ್ಯಾದಲ್ಲಿ ಉದ್ಯೋಗದಲ್ಲಿದ್ದ ಶೋಯೆಬ್‌ ಊರಿಗೆ ವಾಪಸಾಗಿದ್ದ. ರಷ್ಯಾದಲ್ಲಿ ಬುಕ್ಕಿಗಳು ಕ್ರಿಕೆಟ್‌ ಪಂದ್ಯಕ್ಕೂ ಬೆಟ್ಟಿಂಗ್‌ ನಡೆಸುವುದು ತಿಳಿದಿದ್ದ ಆತ ಈ ಕೆಲಸಕ್ಕೆ ಇಳಿದಿದ್ದಾನೆ. ಶೋಯೆಬ್ ಜತೆ ಕೊಲಿ ಮಹಮ್ಮದ್, ಸಾದಿಕ್‌ ದಾವ್ಡ ಮತ್ತು ಮೊಹಮ್ಮದ್‌ ಸಾಕಿಬ್‌ ಅವರನ್ನು ಬಂಧಿಸಲಾಗಿದೆ. ಇವರಿಗೆ ರಷ್ಯಾದಲ್ಲಿರುವ ಆಸಿಫ್‌ ಮೊಹಮ್ಮದ್‌ ನೆರವು ನೀಡುತ್ತಿದ್ದ’ ಎಂದು ಮಾಹಿತಿ ನೀಡಿದ್ದಾರೆ.

ADVERTISEMENT

ಆರೋಪಿಗಳು ಮೈದಾನಕ್ಕೆ ಹೊನಲು ಬೆಳಕಿನ ವ್ಯವಸ್ಥೆಯನ್ನೂ ಮಾಡಿದ್ದಾರೆ. ಕ್ರಿಕೆಟ್‌ ಕಿಟ್‌, ವಿಡಿಯೊ ಕ್ಯಾಮೆರಾ, ಎಲ್‌ಇಡಿ ಟಿ.ವಿ, ಲ್ಯಾಪ್‌ಟಾಪ್‌, ವಾಕಿಟಾಕಿಯನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.