ADVERTISEMENT

ಸನ್ಯಾಸತ್ವ ಸ್ವೀಕರಿಸಲು ₹200 ಕೋಟಿ ಆಸ್ತಿ ದಾನ ಮಾಡಿದ ದಂಪತಿ!

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 16 ಏಪ್ರಿಲ್ 2024, 6:21 IST
Last Updated 16 ಏಪ್ರಿಲ್ 2024, 6:21 IST
   

ಗುಜರಾತ್‌: ಸನ್ಯಾಸತ್ವ ಸ್ವೀಕಾರ ಮಾಡಬೇಕೆಂದು ಗುಜರಾತ್‌ ಮೂಲದ ಉದ್ಯಮಿ ಭವೇಶ್‌ ಬಂಡಾರಿ ಮತ್ತು ಅವರ ಪತ್ನಿ ಸುಮಾರು ₹200 ಕೋಟಿ ಮೌಲ್ಯದ ಆಸ್ತಿ ದಾನ ಮಾಡಿದ್ದಾರೆ.

ಗುಜರಾತ್‌ನ ಸಬರಕಾಂತದಲ್ಲಿ ಮೆರವಣಿಗೆ ನಡೆಸಿ ತಮ್ಮ ಎಲ್ಲಾ ವಸ್ತುಗಳನ್ನು ದಾನ ಮಾಡಿದ್ದಾರೆ. ಇದರ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಫೆಬ್ರುವರಿಯಲ್ಲಿ ನಡೆದ ಸಮಾರಂಭದಲ್ಲಿ ದಂಪತಿ ತಮ್ಮ ಸಂಪೂರ್ಣ ಸಂಪತ್ತನ್ನು ದಾನ ಮಾಡಿ, ಏಪ್ರಿಲ್‌ ಕೊನೆಯಲ್ಲಿ ಸನ್ಯಾಸತ್ವ ಸ್ವೀಕಾರ ಮಾಡುವುದಾಗಿ ನಿರ್ಧರಿಸಿದ್ದರು. ದಂಪತಿಯ ‌9 ವರ್ಷದ ಮಗಳು ಮತ್ತು 16 ವರ್ಷದ ಮಗ 2022 ರಲ್ಲಿ ಸನ್ಯಾಸತ್ವ ಸ್ವೀಕರಿಸಿದ್ದಾರೆ ಎಂದು ವರದಿಯಾಗಿದೆ.

ADVERTISEMENT

ಜೈನ ಸಂಪ್ರದಾಯದಂತೆ ದೀಕ್ಷೆ ತೆಗೆದುಕೊಳ್ಳಲಿರುವ ದಂಪತಿ ಎರಡು ಬಿಳಿ ವಸ್ತ್ರ ಮತ್ತು ಭಿಕ್ಷೆಗಾಗಿ ಒಂದು ಬಟ್ಟಲನ್ನು ಮಾತ್ರ ಬಳಸಬಹುದಾಗಿದೆ.

ಕೋಟ್ಯಧೀಶರು ಸಂಪತ್ತು ಬಿಟ್ಟು ಸನ್ಯಾಸತ್ವ ಸ್ವೀಕರಿಸುತ್ತಿರುವುದು ಇದು ಮೊದಲಲ್ಲ, ಈ ಹಿಂದೆ 2017ರಲ್ಲಿ ಮಧ್ಯಪ್ರದೇಶದ ದಂಪತಿ ₹100 ಕೋಟಿ ಆಸ್ತಿಯನ್ನು ದಾನ ಮಾಡಿ, ಅವರ ಮೂರು ವರ್ಷದ ಮಗಳನ್ನು ಅಜ್ಜಿಯ ಬಳಿ ಇರಿಸಿ ದೀಕ್ಷೆ ತೆಗೆದುಕೊಂಡಿದ್ದರು. 

12 ವರ್ಷದ ಮಗ ಸನ್ಯಾಸಿಯಾಗಿದ್ದರಿಂದ ಪ್ರೇರಣೆಗೊಂಡು 2015ರಲ್ಲಿ ವಜ್ರ ವ್ಯಾಪಾರ ಮಾಡುತ್ತಿದ್ದ ಗುಜರಾತ್‌ ಮೂಲದ ದಂಪತಿ ಸಂಪತ್ತನ್ನು ದಾನ ಮಾಡಿ ದೀಕ್ಷೆ ಪಡೆದಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.