ADVERTISEMENT

ಗುಟ್ಕಾ ಜಾಹೀರಾತು: ಅಕ್ಷಯ್‌ ಕುಮಾರ್‌, ಶಾರುಖ್‌, ಅಜಯ್‌ ದೇವಗನ್‌ಗೆ ನೋಟಿಸ್‌ 

ಪಿಟಿಐ
Published 10 ಡಿಸೆಂಬರ್ 2023, 5:55 IST
Last Updated 10 ಡಿಸೆಂಬರ್ 2023, 5:55 IST
   

ಲಖನೌ: ಗುಟ್ಕಾ ಕಂಪನಿಗಳಿಗೆ ಜಾಹೀರಾತು ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಿವುಡ್‌ ನಟರಾದ ಅಕ್ಷಯ್ ಕುಮಾರ್, ಶಾರುಖ್ ಖಾನ್ ಮತ್ತು ಅಜಯ್ ದೇವಗನ್ ಅವರಿಗೆ ನೋಟಿಸ್ ಜಾರಿ ಮಾಡಲಾಗಿದೆ. ಈ ಕುರಿತು ನ್ಯಾಯಾಂಗ ನಿಂದನೆ ಅರ್ಜಿಗೆ ಪ್ರತಿಕ್ರಿಯಿಸಿದ ಕೇಂದ್ರ ಸರ್ಕಾರವು ಅಲಹಾಬಾದ್ ನ್ಯಾಯಾಲಯದ ಲಖನೌ ಪೀಠಕ್ಕೆ ತಿಳಿಸಿದೆ.

ಇದೇ ವಿಷಯವನ್ನು ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆ ನಡೆಸುತ್ತಿದ್ದು, ತ್ವರಿತ ಅರ್ಜಿಯನ್ನು ವಜಾಗೊಳಿಸಬೇಕು ಎಂದು ಕೇಂದ್ರದ ವಕೀಲರು ಶುಕ್ರವಾರ ಹೈಕೋರ್ಟ್‌ಗೆ ತಿಳಿಸಿದ್ದು, ಪೀಠವು ವಿಚಾರಣೆಯನ್ನು 2024ತ ಮೇ 9 ಕ್ಕೆ ಮುಂದೂಡಿದೆ.

ನ್ಯಾಯಮೂರ್ತಿ ರಾಜೇಶ್ ಸಿಂಗ್ ಚೌಹಾಣ್ ಅವರ ಪೀಠವು, ಈ ನಟರು ಉನ್ನತ ಮಟ್ಟದ ಪ್ರಶಸ್ತಿಗಳನ್ನು ಪಡೆದಿದ್ದಾರೆ. ಆದರೆ, ಗುಟ್ಕಾ ಕಂಪನಿಗಳಿಗೆ ಜಾಹೀರಾತುಗಳನ್ನು ಮಾಡುತ್ತಿದ್ದಾರೆ . ಹೀಗಾಗಿ, ನಟರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದ ಅರ್ಜಿದಾರರ ಪ್ರಾತಿನಿಧ್ಯವನ್ನು ನಿರ್ಧರಿಸಲು ಸೆಪ್ಟೆಂಬರ್ 2022ರಲ್ಲಿ ಕೇಂದ್ರ ಸರ್ಕಾರಕ್ಕೆ ನಿರ್ದೇಶಿಸಿತ್ತು.

ADVERTISEMENT

ಅಕ್ಟೋಬರ್ 22 ರಂದು ಸರ್ಕಾರಕ್ಕೆ ಪ್ರಾತಿನಿಧ್ಯವನ್ನು ನೀಡಲಾಯಿತು. ಆದರೆ ಈ ವಿಷಯದಲ್ಲಿ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಅರ್ಜಿದಾರರು ವಾದಿಸಿದರು. ನಂತರ, ನ್ಯಾಯಾಂಗ ನಿಂದನೆ ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್, ಕೇಂದ್ರ ಸರ್ಕಾರದ ಕ್ಯಾಬಿನೆಟ್ ಕಾರ್ಯದರ್ಶಿಗೆ ನೋಟಿಸ್ ಜಾರಿ ಮಾಡಿತ್ತು.

ಬಳಿಕ, ಡೆಪ್ಯುಟಿ ಸಾಲಿಸಿಟರ್ ಜನರಲ್ ಎಸ್‌.ಬಿ ಪಾಂಡೆ ಅವರು ಅಕ್ಷಯ್ ಕುಮಾರ್, ಶಾರುಖ್ ಖಾನ್ ಮತ್ತು ಅಜಯ್ ದೇವಗನ್ ಅವರಿಗೆ ಕೇಂದ್ರವು ಶೋಕಾಸ್ ನೋಟಿಸ್ ಜಾರಿ ಮಾಡಿದೆ ಎಂದು ಹೈಕೋರ್ಟ್‌ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.