ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ
ಕೃಪೆ: ಪಿಟಿಐ
ಗುವಾಹಟಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ವಿರುದ್ಧ 9 ವರ್ಷಗಳ ಹಿಂದೆ ಆರ್‌ಎಸ್‌ಎಸ್ ಕಾರ್ಯಕರ್ತ ಹೂಡಿದ್ದ ಕ್ರಿಮಿನಲ್ ಮಾನಹಾನಿ ಪ್ರಕರಣದಲ್ಲಿ ಹೊಸ ಸಾಕ್ಷಿಗಳ ವಿಚಾರಣೆಗೆ ಅವಕಾಶ ಕಲ್ಪಿಸಿದ್ದ ಕೆಳ ಹಂತದ ನ್ಯಾಯಾಲಯದ ಆದೇಶವನ್ನು ಗುವಾಹಟಿ ಹೈಕೋರ್ಟ್ ಗುರುವಾರ ರದ್ದು ಮಾಡಿದೆ.
ಮಾನಹಾನಿ ಪ್ರಕರಣ ಸಂಬಂಧ ವಿಚಾರಣಾ ನ್ಯಾಯಾಲಯದ ಎದುರು ಹೆಚ್ಚುವರಿ ಸಾಕ್ಷಿಗಳು ವಿಚಾರಣೆಗೆ ಹಾಜರಾಗಲು ಅವಕಾಶ ಕಲ್ಪಿಸಿ ಕಾಮರೂಪ್ ಮೆಟ್ರೊಪಾಲಿಟನ್ ನ್ಯಾಯಾಲಯದ ಹೆಚ್ಚುವರಿ ವಿಶೇಷ ನ್ಯಾಯಾಧೀಶ ನೀಡಿದ್ದ ಆದೇಶವನ್ನು ನ್ಯಾಯಮೂರ್ತಿ ಅರುಣ್ ದೇವ್ ಚೌಧರಿ ಅವರಿದ್ದ ಏಕಸದಸ್ಯ ಪೀಠ ರದ್ದು ಮಾಡಿದೆ.
ಆರ್‌ಎಸ್‌ಎಸ್ ಕಾರ್ಯಕರ್ತ ಅಂಜನ್ ಕುಮಾರ್ ಬೋರಾ ದಾಖಲಿಸಿದ್ದ ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ಸಂಬಂಧ, ಆರು ಸಾಕ್ಷಿಗಳ ಹೇಳಿಕೆಗಳ ದಾಖಲು ಪ್ರಕ್ರಿಯೆ ಪೂರ್ಣಗೊಂಡಿದ್ದರಿಂದ, ಹೊಸದಾಗಿ ಮೂವರು ಸಾಕ್ಷಿಗಳನ್ನು ಸೇರಿಸಲು ವಿಚಾರಣಾ ನ್ಯಾಯಾಲಯದ ಮ್ಯಾಜಿಸ್ಟ್ರೇಟ್ ಅವರು 2023ರ ಮಾರ್ಚ್‌ನಲ್ಲಿ ನಿರಾಕರಿಸಿದ್ದರು.
ಇದನ್ನು ಪ್ರಶ್ನಿಸಿ ಅಂಜನ್ ಅವರು ಕಾಮರೂಪ್ ಮೆಟ್ರೊಪಾಲಿಟನ್ ನ್ಯಾಯಾಲಯದ ಮೆಟ್ಟಿಲೇರಿದ್ದರು. ಮೇಲ್ಮನವಿಯ ವಿಚಾರಣೆ ನಡೆಸಿದ ಹೆಚ್ಚುವರಿ ವಿಶೇಷ ನ್ಯಾಯಾಧೀಶ, ರಾಹುಲ್ ಗಾಂಧಿ ವಿರುದ್ಧ ಹೊಸ ಸಾಕ್ಷಿಗಳ ವಿಚಾರಣೆಗೆ ಅವಕಾಶ ಕಲ್ಪಿಸಿ ಸೆಪ್ಟಂಬರ್‌ನಲ್ಲಿ ಆದೇಶಿಸಿದ್ದರು.
ಈ ಆದೇಶವನ್ನು ರಾಹುಲ್ ಪರ ವಕೀಲ ಅನ್ಶುಮಾನ್ ಬೋರಾ ಅವರು 2024ರ ಜುಲೈನಲ್ಲಿ ಗುವಾಹಟಿ ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ ಹೈಕೋರ್ಟ್, ಹೆಚ್ಚುವರಿ ವಿಶೇಷ ನ್ಯಾಯಾಧೀಶರ ಆದೇಶವನ್ನು ವಜಾಗೊಳಿಸಿದೆ. ಹಾಗೆಯೇ, ಪ್ರಕರಣವನ್ನು ತ್ವರಿತವಾಗಿ ವಿಲೇವಾರಿ ಮಾಡುವಂತೆ ವಿಚಾರಣಾ ನ್ಯಾಯಾಲಯಕ್ಕೆ ಸೂಚಿಸಿದೆ.
ರಾಹುಲ್ ಗಾಂಧಿ ಅವರು ಪ್ರಮುಖ ವೈಷ್ಣವ ಮಠ 'ಬರ್ಪೆಟಾ ಸತ್ರಾ'ಗೆ 2015ರ ಡಿಸೆಂಬರ್ 12ರಂದು ಭೇಟಿ ನೀಡಲು ಉದ್ದೇಶಿಸಿದ್ದರು. ಆದರೆ, ಆರ್‌ಎಸ್‌ಎಸ್ ಕಾರ್ಯಕರ್ತರು ತಮ್ಮನ್ನು ಮಠ ಭೇಟಿ ನೀಡದಂತೆ ತಡೆದಿದ್ದಾರೆ ಎಂದು ನಂತರ ಆರೋಪಿಸಿದ್ದರು.
ಇದರಿಂದ ಕೆರಳಿದ ಅಂಜನ್ ಕುಮಾರ್, ಕಾಂಗ್ರೆಸ್ ನಾಯಕ ಆರ್‌ಎಸ್‌ಎಸ್ ವಿರುದ್ಧ ಸುಳ್ಳು ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿ ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ಹೂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.