ADVERTISEMENT

ಎಚ್‌1–ವಿ ವೀಸಾಗೆ ಶುಲ್ಕ: ಹೈದರಾಬಾದ್‌ನ ‘ವೀಸಾ ಬಾಲಾಜಿ’ ದೇಗುಲಕ್ಕೆ ಭಕ್ತರ ದೌಡು

ಪಿಟಿಐ
Published 25 ಸೆಪ್ಟೆಂಬರ್ 2025, 12:28 IST
Last Updated 25 ಸೆಪ್ಟೆಂಬರ್ 2025, 12:28 IST
<div class="paragraphs"><p>ವೀಸಾ ಬಾಲಾಜಿ</p></div>

ವೀಸಾ ಬಾಲಾಜಿ

   

– ಫೇಸ್‌ಬುಕ್ ಚಿತ್ರ (Temple Connect)

ಹೈದರಾಬಾದ್: ಎಚ್‌1–ಬಿ ವೀಸಾಗೆ ಒಂದು ಲಕ್ಷ ಡಾಲರ್ ಶುಲ್ಕ ವಿಧಿಸುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಘೋಷಣೆ ಬೆನ್ನಲ್ಲೇ, ಹೈದರಾಬಾದ್‌ನ ಹೊರವಲಯದಲ್ಲಿರುವ ಬಾಲಾಜಿ ದೇಗುಲಕ್ಕೆ ಬರುತ್ತಿರುವ ಸಂಖ್ಯೆ ಹೆಚ್ಚಳವಾಗಿದೆ.

ADVERTISEMENT

ಚಿಲ್ಕೂರು ಎಂಬಲ್ಲಿರುವ ‘ವೀಸಾ ಬಾಲಾಜಿ ದೇಗುಲ’ ಎಂದೇ ಖ್ಯಾತಿಯಾಗಿರು ಈ ದೇಗುಲದಲ್ಲಿ ಪ್ರಾರ್ಥನೆ ಸಲ್ಲಿಸಿದರೆ ವೀಸಾ ಸಿಗುತ್ತದೆ ಎನ್ನುವ ನಂಬಿಕೆ ಭಕ್ತರಲ್ಲಿದೆ.

‘ಯಾರಿಗೆ 1 ಲಕ್ಷ ಡಾಲರ್ ಶುಲ್ಕ ವಿಧಿಸಲಾಗುತ್ತದೆ ಎನ್ನುವುದರ ಬಗ್ಗೆ ಸ್ಪಷ್ಟತೆ ಇಲ್ಲ. ಮುಂದಿನ ಲಾಟರಿಯಲ್ಲಿ ಅದು ತಿಳಿಯುತ್ತದೆ. ಲಾಟರಿ ಸಂಪೂರ್ಣವಾಗಿ ಅದೃಷ್ಟ ವಿಚಾರ. ಏನಾದರೂ ಸರಿ, ನಾನು ಬಾಲಾಜಿಯನ್ನು ನಂಬುತ್ತೇನೆ. ಆವನು ಮಾರ್ಗದರ್ಶನ ಮಾಡುತ್ತಾನೆ ಎನ್ನುವುದು ನನ್ನ ನಂಬಿಕೆ’ ಎಂದು ಖಾಸಗಿ ಕಂಪನಿಯಲ್ಲಿ ತಂತ್ರಜ್ಞಾನ ವಿಶ್ಲೇಷಕನಾಗಿ ಕೆಲಸ ಮಾಡುತ್ತಿರುವ, ಎಚ್‌1–ಬಿ ವೀಸಾದ ನಿರೀಕ್ಷೆಯಲ್ಲಿರುವ ವಿನಯ್ ಹೇಳಿದ್ದಾರೆ.

ಈ ದೇಗುಲದಲ್ಲಿ 11 ಅಥವಾ 108 ಪ್ರದಕ್ಷಿಣೆ ಹಾಕಿದರೆ ಇಷ್ಟಾರ್ಥ ಸಿದ್ಧಿಸುವುದು ಎನ್ನುವುದ ಭಕ್ತರ ನಂಬಿಕೆ.

‘1990ರಲ್ಲಿ ವಿದೇಶ ಪ್ರವಾಸ ಮಾಡುವವರ ಸಂಖ್ಯೆ ಹೆಚ್ಚಳವಾಯಿತು. ಇಲ್ಲಿ ಸುತ್ತಮುತ್ತ ಹಲವು ಎಂಜಿನಿಯರಿಂಗ್ ಕಾಲೇಜುಗಳಿವೆ. ವಿದ್ಯಾರ್ಥಿಗಳು ಇಲ್ಲಿಗೆ ಬಂದು 11 ಬಾರಿ ಪ್ರದಕ್ಷಿಣೆ ಹಾಕುತ್ತಿದ್ದರು. ಅವರಿಗೆ ವೀಸಾ ಸಿಗುತ್ತಿತ್ತು. ಅವರೇ ಈ ದೇಗುಲಕ್ಕೆ ವೀಸಾ ಬಾಲಾಜಿ ಎಂದು ಹೆಸರಿಟ್ಟಿದ್ದಾರೆ’ ಎಂದು ದೇಗುಲದ ಪ್ರಧಾನ ಅರ್ಚಕ ಸಿ.ಎಸ್ ರಂಗರಾಜನ್ ಹೇಳಿದ್ದಾರೆ.

‘ಸೆಪ್ಟೆಂಬರ್ 18ರಂದು ಸಂದರ್ಶನಕ್ಕೆ ಹಾಜರಾಗಿದ್ದ ನನಗೆ ಮರುದಿನವೇ ಎಚ್‌1–ಬಿ ವೀಸಾ ಸಿಕ್ಕಿತು. ಅದು ಸಾಧಾರಣ ಸಂದರ್ಶನವಾಗಿತ್ತು. ಒಂದೇ ಪ್ರಶ್ನೆಯನ್ನು ಕೇಳಿ ವೀಸಾಗೆ ಅನುಮೋದನೆ ನೀಡಿದರು. ನಾನು ಚಿಲ್ಕೂರು ಬಾಲಾಜಿ ದೇಗುಲಕ್ಕೆ ಸೆ. 10ರಂದು ಭೇಟಿ ನೀಡಿದ್ದೆ. ಇಲ್ಲಿಗೆ ಬರುವುದು ನನಗೆ ಎಂದಿಗೂ ಅದೃಷ್ಠವೇ’ ಎಂದು ವೃತ್ತಿಯಲ್ಲಿ ಗೇಮ್ ಡೆವಲಪರ್ ಆಗಿರುವ ಸಾಯಿ ರೌತಿಕ್ ಹೇಳಿದ್ದಾರೆ.

ವೀಸಾ ಸಿಗಬೇಕು ಎಂದು ಬಯಸುವವರು ಮಾತ್ರವಲ್ಲ, ಈಗಾಗಲೇ ಅಮೆರಿಕದಲ್ಲಿ ಇರುವವರ ಪೋಷಕರು ಇಲ್ಲಿಗೆ ಬಂದು ಮಕ್ಕಳ ಮೇಲೆ ಬಾಲಾಜಿಯ ಆಶೀರ್ವಾದ ಸದಾ ಇರಲಿ ಎಂದು ಬೇಡಿಕೊಳ್ಳುತ್ತಾರೆ.

‘ನಾವು ಈ ಹಿಂದೆಯೂ ಈ ದೇಗುಲಕ್ಕೆ ಭೇಟಿ ನೀಡಿದ್ದೆವು. ನಮ್ಮ ಮಗಳು ಭಾರತದಿಂದ ಅಮೆರಿಕ, ಅಲ್ಲಿಂದ ಕೆನಡಾ ಈಗ ಮತ್ತೆ ಅಮೆರಿಕ್ಕೆ ತೆರಳಿದ್ದಾಳೆ. ನಾವು ಇಲ್ಲಿಗೆ ಆರು ಬಾರಿ ಭೇಟಿ ನೀಡಿದ್ದೇವೆ’ ಎಂದು ಸುಗುಣ ಎನ್ನುವವರು ಹೇಳಿದ್ದಾರೆ.

ಈ ದೇಗುಲ ಆಂಧ್ರ ಹಾಗೂ ತೆಲಂಗಾಣದ ಜನರಲ್ಲಿ ವೀಸಾ ಬಾಲಾಜಿ ದೇವಸ್ಥಾನ ಎಂದು ಖ್ಯಾತಿ ಪಡೆದರೂ, ಇಲ್ಲಿ ಹುಂಡಿ ಇಲ್ಲ. ಭಕ್ತರಿಂದ ಯಾವುದೇ ಹಣವನ್ನೂ ಸ್ವೀಕರಿಸುವುದಿಲ್ಲ. ವಿಐಪಿಗಳಿಗೆ ವಿಶೇಷ ಸವಲತ್ತುಗಳೂ ಇಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.