Gemini AI ಚಿತ್ರ
ಅಮರಾವತಿ: ಮಹಾರಾಷ್ಟ್ರದ ಅಮರಾವತಿ ನಗರದ ಹತ್ತು ವರ್ಷದ ಬಾಲಕಿಯ ವಿಚಿತ್ರ ಅಭ್ಯಾಸವು ಆಕೆಯನ್ನು ಗಂಭೀರ ಆರೋಗ್ಯ ಸಮಸ್ಯೆಗೆ ನೂಕಿದೆ.
ತನ್ನ ಈ ಅಭ್ಯಾಸದಿಂದಲೇ ತೀವ್ರ ಅನಾರೋಗ್ಯಕ್ಕೆ ತುತ್ತಾದ ಬಾಲಕಿಯ ಶಸ್ತ್ರಚಿಕಿತ್ಸೆ ನಡೆಸಿದ ವೈದ್ಯರಿಗೆ ಅಚ್ಚರಿಯ ಜತೆಗೆ, ಆಘಾತವೂ ಆಗಿದೆ.
ಅಮರಾವತಿಯ ಈ ಹತ್ತು ವರ್ಷದ ಬಾಲಕಿ, ಅಜೀರ್ಣ ಸಮಸ್ಯೆಯಿಂದ ಬಳಲುತ್ತಿದ್ದಳು. ಈಕೆಯ ಆರೋಗ್ಯ ಪರೀಕ್ಷೆ ಮಾಡಿದ ವೈದ್ಯರು ಶಸ್ತ್ರಚಿಕಿತ್ಸೆ ನಡೆಸುವುದು ಅನಿವಾರ್ಯ ಎಂದಾಗಿ ಪೋಷಕರೂ ದಂಗಾದರು. ಶಸ್ತ್ರಚಿಕಿತ್ಸೆ ನಡೆಸಿದಾಗ ವೈದ್ಯರಿಗೆ ಸಿಕ್ಕಿದ್ದು ಅರ್ಧ ಕೆ.ಜಿ. ತೂಕದ ಕೂದಲಿನ ಉಂಡೆ!
ಈ ಕುರಿತು ವೈದ್ಯರು ಬಾಲಕಿಯಿಂದ ಮಾಹಿತಿ ಕಲೆ ಹಾಕಿದ್ದಾರೆ.
‘ತನಗೆ ಕೆಲ ವರ್ಷಗಳಿಂದ ಕೂದಲು ತಿನ್ನುವ ಹವ್ಯಾಸವಿದೆ ಎಂದು ಆಕೆ ತಿಳಿಸಿದ್ದಾಳೆ. ಕಳೆದ ಆರು ತಿಂಗಳುಗಳಿಂದ ವಾಂತಿ ಹಾಗೂ ಹಸಿವಾಗದಿರುವುದು ಮತ್ತು ತೂಕ ಗಣನೀಯವಾಗಿ ಕುಸಿಯುತ್ತಿರುವ ಸಮಸ್ಯೆಯಿಂದ ಬಾಲಕಿ ಬಳಲುತ್ತಿದ್ದಳು. 20 ದಿನಗಳ ಹಿಂದೆ ಆಸ್ಪತ್ರೆಗೆ ಬಂದಿದ್ದರು. ಈಗ ಶಸ್ತ್ರಚಿಕಿತ್ಸೆ ನಡೆಸಿ ಕೂದಲಿನ ಉಂಡೆಯನ್ನು ಹೊರತೆಗೆಯಲಾಗಿದೆ’ ಎಂದು ಶಸ್ತ್ರಚಿಕಿತ್ಸಕಿ ಡಾ. ಉಷಾ ಗಜಭಿಯೆ ತಿಳಿಸಿದ್ದಾರೆ.
‘ಶಸ್ತ್ರಚಿಕಿತ್ಸೆ ನಂತರ ಬಾಲಕಿಯ ಆರೋಗ್ಯ ಉತ್ತಮವಾಗಿದೆ. ಆಕೆ ಸರಿಯಾಗಿ ಆಹಾರ ಸೇವಿಸುತ್ತಿದ್ದಾಳೆ. ಶೀಘ್ರದಲ್ಲಿ ಆಕೆಯನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗುವುದು’ ಎಂದು ವೈದ್ಯರು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.