ADVERTISEMENT

ಕಾಂಗ್ರೆಸ್ ಮಾಜಿ ನಾಯಕ ಹಾರ್ದಿಕ್‌ ಪಟೇಲ್‌ ‘ಕಮಲ‘ ಸೇರುವ ಸಾಧ್ಯತೆ –ಬಿಜೆಪಿ

​ಪ್ರಜಾವಾಣಿ ವಾರ್ತೆ
Published 31 ಮೇ 2022, 7:34 IST
Last Updated 31 ಮೇ 2022, 7:34 IST
 ಹಾರ್ದಿಕ್ ಪಟೇಲ್
 ಹಾರ್ದಿಕ್ ಪಟೇಲ್   

ಅಹಮದಾಬಾದ್‌: ಕಾಂಗ್ರೆಸ್‌ ಪಕ್ಷದ ಗುಜರಾತ್ ರಾಜ್ಯ ಘಟಕದ ಮಾಜಿ ಕಾರ್ಯಾಧ್ಯಕ್ಷ ಹಾಗೂ ಪಾಟೀದಾರ್ ಮೀಸಲಾತಿ ಆಂದೋಲನದ ನಾಯಕಹಾರ್ದಿಕ್ ಪಟೇಲ್ ಅವರು ಬಿಜೆಪಿ ಸೇರುವ ಸಾಧ್ಯತೆಗಳು ದಟ್ಟವಾಗಿವೆ ಎಂದು ಗುಜರಾತ್‌ ಮಾಧ್ಯಮಗಳು ವರದಿ ಮಾಡಿವೆ.

ಈಗಾಗಲೇ ಅವರು ಕಾಂಗ್ರೆಸ್‌ ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ. ಅವರು ಯಾವುದೇ ಕ್ಷಣದಲ್ಲೂ ಬಿಜೆಪಿ ಸೇರಬಹುದು ಎಂದು ಬಿಜೆಪಿಯ ವಕ್ತಾರರೊಬ್ಬರು ಹೇಳಿದ್ದಾರೆ. ಮುಂಬರುವ ವಿಧಾನಸಭಾ ಚುನಾವಣೆಗೂ ಮುನ್ನವೇ ಅವರು ಬಿಜೆಪಿ ಸೇರಿ ಪಕ್ಷವನ್ನು ಮತ್ತಷ್ಟು ಬಲಪಡಿಸಲಿದ್ದಾರೆ ಎಂದು ಅವರು ಹೇಳಿದ್ದಾರೆ. ಆದರೆ ಈ ಹೇಳಿಕೆ ನೀಡಿರುವ ವಕ್ತಾರನ ಹೆಸರು ಬಹಿರಂಗಗೊಂಡಿಲ್ಲ.

ಕಾಂಗ್ರೆಸ್‌ ‘ಪಕ್ಷದವರೇ ನನ್ನನ್ನು ನಿರ್ಲಕ್ಷಿಸಿ, ಮೂಲೆಗುಂಪು ಮಾಡುತ್ತಿದ್ದಾರೆ’ ಎಂದು ಹಾರ್ದಿಕ್‌ ಬಹಿರಂಗವಾಗಿ ಟೀಕಿಸಿದ್ದರು. ರಾಹುಲ್‌ ಗಾಂಧಿ ಅವರಿಂದ ‘ತೇಜೋವಧೆ’ಗೆ ಒಳಗಾಗಿದ್ದೇನೆ ಎಂದು ಹೇಳಿಕೆ ನೀಡಿದ್ದರು. ಈ ಘಟನೆಗಳ ನಂತರ ಅವರು ಮೇ 19ರಂದು ಪಕ್ಷಕ್ಕೆ ರಾಜೀನಾಮೆ ನೀಡಿದ್ದರು.

ADVERTISEMENT

ಕಾಂಗ್ರೆಸ್‌ ಪಕ್ಷದಿಂದ ಹೊರಬಂದ ಬಳಿಕ ಬಿಜೆಪಿಯ ಹಿರಿಯ ನಾಯಕರ ಜೊತೆ ಗುರುತಿಸಿಕೊಂಡಿದ್ದು ಪಕ್ಷದಲ್ಲಿನ ಸ್ಥಾನ ಮಾನಕ್ಕಾಗಿ ಹಾರ್ದಿಕ್‌ ಮಾತುಕತೆ ನಡೆಸುತ್ತಿದ್ದಾರೆ. ಅವರು ಜೂನ್‌ ಮೊದಲ ವಾರದಲ್ಲಿ ಬಿಜೆಪಿ ಸೇರುವುದು ಖಚಿತ ಎಂದು ಹಾರ್ದಿಕ್‌ ಆಪ್ತರು ಹೇಳಿದ್ದಾರೆ ಎಂದು ಮಾಧ್ಯಮಗಳು ತಿಳಿಸಿವೆ.

ಮೋದಿ ಹೊಗಳಿದ್ದ ಹಾರ್ದಿಕ್: ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸರ್ಕಾರವು ದೇಶ, ಗುಜರಾತ್‌ ಮತ್ತು ಪಾಟೀದಾರ್‌ ಸಮುದಾಯಕ್ಕಾಗಿ ಯಾವ ಉತ್ತಮ ಕ್ರಮಗಳನ್ನು ಕೈಗೊಂಡರೂ ಕಾಂಗ್ರೆಸ್‌ ಮಾಡುವ ಏಕೈಕ ಕೆಲಸವೆಂದರೆ ಅದನ್ನು ವಿರೋಧಿಸುವುದು. ಕೇಂದ್ರ ಮತ್ತು ರಾಜ್ಯಮಟ್ಟದ ಕಾಂಗ್ರೆಸ್‌ ನಾಯಕತ್ವವು ಕೇಂದ್ರ ಸರ್ಕಾರ ಜಾರಿ ಮಾಡುವ ಕಾರ್ಯಕ್ರಮಗಳನ್ನು ವಿರೋಧಿಸುವುದಕ್ಕೆ ಮಾತ್ರ ಸೀಮಿತವಾಗಿವೆ ಎಂದು ಕಾಂಗ್ರೆಸ್‌ ಪಕ್ಷವನ್ನು ಟೀಕಿಸಿ, ಮೋದಿ ಅವರನ್ನು ಹಾರ್ದಿಕ್‌ ಈ ಹಿಂದೆ ಹೊಗಳಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.