ಹರ್ಷ ರಿಚಾರಿಯಾ
ಪ್ರಯಾಗ್‌ರಾಜ್: ಕಳೆದ ವರ್ಷ ಪ್ರಯಾಗರಾಜ್‌ನಲ್ಲಿ ನಡೆದ ಮಹಾಕುಂಭಮೇಳದ ವೇಳೆ ಕಾಣಿಸಿಕೊಂಡು ತಮ್ಮ ಸೌಂದರ್ಯದಿಂದಲೇ ಸೆಳೆದು ಸನಾತನ ಧರ್ಮದ ಪ್ರಚಾರಕಿ ಎಂದು ಗುರುತಿಸಿಕೊಂಡಿದ್ದ ಹರ್ಷ ರಿಚಾರಿಯಾ ಈಗ ಸನಾತನ ಧರ್ಮದ ಪ್ರಚಾರವನ್ನು ನಿಲ್ಲಿಸುವುದಾಗಿ ಹೇಳಿದ್ದಾರೆ.
ವೃತ್ತಿಪರ ನಿರೂಪಕಿಯಾಗಿದ್ದ ಹರ್ಷ, ಮಾಡೆಲ್ ಕೂಡ ಆಗಿದ್ದರು. ಸಾಮಾಜಿಕ ಮಾಧ್ಯಮದಲ್ಲಿಯೂ ಭಾರಿ ಸಂಚಲನ ಮೂಡಿಸಿದ್ದರು. ಈಗ ವಿಡಿಯೊ ಹಂಚಿಕೊಂಡಿರುವ ಅವರು, ‘ಎಲ್ಲರೂ ಹಿಂದೂ ರಾಷ್ಟ್ರದ ಬಗ್ಗೆ ಮಾತನಾಡುತ್ತಾರೆ. ಆದರೆ ಅದನ್ನು ಪ್ರಚಾರ ಮಾಡಲು ಮುಂದೆ ಬರುವ ಯಾವುದೇ ವ್ಯಕ್ತಿಗೆ ವಿರೋಧ ವ್ಯಕ್ತವಾಗುತ್ತದೆ. ಸರಿಯಾದ ಮಾರ್ಗದಲ್ಲಿ ನಡೆದರೂ ಕೆಲವು ಧರ್ಮ ಗುರುಗಳು ನಿಮ್ಮನ್ನು ವಿರೋಧಿಸಿದಾಗ, ನಿರಾಸೆಯಾಗುತ್ತದೆ’ ಎಂದು ಬೇಸರ ಹೊರಹಾಕಿದ್ದಾರೆ.
ನಿರಂತರ ಟೀಕೆ, ಮಾನಸಿಕ ಒತ್ತಡದಿಂದಾಗಿ ಧಾರ್ಮಿಕ ಮಾರ್ಗದಿಂದ ದೂರ ಸರಿದು ತಮ್ಮ ಹಿಂದಿನ ಜೀವನಕ್ಕೆ ಮರಳುವುದಾಗಿ ಹರ್ಷ ಅವರು ಹೇಳಿಕೊಂಡಿದ್ದಾರೆ.
‘ಕಳೆದ ಒಂದು ವರ್ಷದಿಂದ ತಾನು ನಿರಂತರ ವಿರೋಧವನ್ನು ಎದುರಿಸುತ್ತಿದ್ದೇನೆ. ನನ್ನ ವ್ಯಕ್ತಿತ್ವವನ್ನು ಪ್ರಶ್ನಿಸಿದ್ದಾರೆ. ಧರ್ಮದ ಮಾರ್ಗವನ್ನು ಅನುಸರಿಸಿ ನಾನು ಏನೇ ಮಾಡಲು ಪ್ರಯತ್ನಿಸಿದರೂ ಅದನ್ನು ವಿರೋಧಿಸಿದ್ದಾರೆ. ಸಾಕಷ್ಟು ಪರೀಕ್ಷೆಗಳನ್ನು ಎದುರಿಸಿದ್ದೇನೆ, ನಾನು ಮಾಡಬೇಕಾದ್ದನ್ನು ಮಾಡಿದ್ದೇನೆ. ಆದ್ದರಿಂದ, ನೀವು ನಿಮ್ಮ ಧರ್ಮವನ್ನು ನಿಮ್ಮಲ್ಲಿಯೇ ಇಟ್ಟುಕೊಳ್ಳಿ. ಅಗ್ನಿ ಪರೀಕ್ಷೆಗೆ ಒಳಗಾಗಲು ನಾನು ತಾಯಿ ಸೀತಾ ಅಲ್ಲ’ ಎಂದು ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.
‘ವೃತ್ತಿ ಜೀವನಕ್ಕೆ ಮರಳುವ ಮೊದಲು ಜನವರಿ 18 ರಂದು ಕೊನೆಯ ಬಾರಿ ಪ್ರಯಾಗ್‌ರಾಜ್‌ನ ಸಂಗಮದಲ್ಲಿ ಸ್ನಾನ ಮಾಡುತ್ತೇನೆ. ಹರ್ ಹರ್ ಮಹಾದೇವ್ ಜಪಿಸುತ್ತೇನೆ’ ಎಂದಿದ್ದಾರೆ.