ADVERTISEMENT

ಮದುವೆಯಾಗಲು ಕಾಶ್ಮೀರದಿಂದ ಯುವತಿಯರನ್ನು ಕರೆತರಬಹುದು: ಮನೋಹರ್ ಲಾಲ್ ಖಟ್ಟರ್

ಬಿಜೆಪಿ ಶಾಸಕ ವಿಕ್ರಂ ಸೈನಿ ಆಯ್ತು ಈಗ ಹರಿಯಾಣ ಸಿಎಂ ಸರದಿ

ಏಜೆನ್ಸೀಸ್
Published 17 ಅಕ್ಟೋಬರ್ 2019, 9:52 IST
Last Updated 17 ಅಕ್ಟೋಬರ್ 2019, 9:52 IST
ಮನೋಹರ್ ಲಾಲ್ ಖಟ್ಟರ್
ಮನೋಹರ್ ಲಾಲ್ ಖಟ್ಟರ್   

ಚಂಡೀಗಡ:ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಿದ್ದ ವಿಶೇಷಾಧಿಕಾರ ರದ್ದಾಗಿರುವುದರಿಂದ ಇನ್ನು ಮುಂದೆ ಕಾಶ್ಮೀರಿ ಯುವತಿಯರನ್ನು ಕರೆತಂದು ವಿವಾಹವಾಗಬಹುದು ಎಂಬುದಾಗಿ ರಾಜ್ಯದ ಜನರು ಆಡಿಕೊಳ್ಳುತ್ತಿದ್ದಾರೆ ಎಂದು ಹರಿಯಾಣದ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಹೇಳಿದ್ದಾರೆ. ಈ ಹೇಳಿಕೆ ಈಗ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಗ್ರಾಸವಾಗಿದೆ.

370ನೇ ವಿಧಿ ರದ್ದು ಮಾಡಿದ್ದರಿಂದ ಈಗ ನೀವು ಕಾಶ್ಮೀರದ ಬೆಳ್ಳಗಿನ ಯುವತಿಯರನ್ನು ಮದುವೆಯಾಗಬಹುದು ಎಂದು ಉತ್ತರ ಪ್ರದೇಶದ ಬಿಜೆಪಿ ಶಾಸಕ ವಿಕ್ರಂ ಸೈನಿ ಈಚೆಗೆ ಹೇಳಿದ್ದು ವಿವಾದಕ್ಕೀಡಾಗಿತ್ತು. ಇದರ ಬೆನ್ನಲ್ಲೇ ಈಗ ಹರಿಯಾಣ ಮುಖ್ಯಮಂತ್ರಿ ಅಂತಹದ್ದೇ ಹೇಳಿಕೆ ನೀಡಿದ್ದಾರೆ.

’ಬೇಟಿ ಬಚಾವೊ, ಬೇಟಿ ಪಢಾವೊ‘ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಖಟ್ಟರ್, ‘ರಾಜ್ಯದಲ್ಲಿ ಹೆಣ್ಣುಮಕ್ಕಳ ಸಂಖ್ಯೆ ಕಡಿಮೆಯಾಗಿ ಗಂಡುಮಕ್ಕಳ ಸಂಖ್ಯೆ ಹೆಚ್ಚಿರುವುದರಿಂದ ಬಿಹಾರದ ಯುವತಿಯರನ್ನು ವಿವಾಹವಾಗಬಹುದು ಎಂದು ನಮ್ಮ ಸಚಿವ ಧನಕರ್ ಅವರು ಹೇಳುತ್ತಿದ್ದರು. ಆದರೆ ಈಗ ಕಾಶ್ಮೀರವೂ ಮುಕ್ತವಾಗಿದೆ, ಅಲ್ಲಿಂದಲೂ ಯುವತಿಯರನ್ನು ಕರೆತಂದು ವಿವಾಹವಾಗಬಹುದು ಎಂಬುದಾಗಿ ಜನರು ಮಾತನಾಡಿಕೊಳ್ಳುತ್ತಿದ್ದಾರೆ. ತಮಾಷೆ ಏನೇ ಇರಲಿ; ಲಿಂಗಾನುಪಾತ ಸಮತೋಲನದಲ್ಲಿದ್ದರೆ ಸಮಾಜಕ್ಕೆ ಒಳ್ಳೆಯದು’ ಎಂದು ಹೇಳಿದ್ದಾರೆ. ಹರಿಯಾಣದ ಫತೇಹಾಬಾದ್‌ನಲ್ಲಿ ಶುಕ್ರವಾರ ನಡೆದ ರ್‍ಯಾಲಿಯಲ್ಲಿ ಖಟ್ಟರ್ ಈ ಹೇಳಿಕೆ ನೀಡಿದ್ದಾರೆ ಎಂದುಎಎನ್ಐಸುದ್ದಿಸಂಸ್ಥೆ ವರದಿ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.