ADVERTISEMENT

ಹಾಥರಸ್ ಜಿಲ್ಲಾಧಿಕಾರಿ ಅಮಾನತಿಗೆ ಪ್ರಿಯಾಂಕಾ ವಾದ್ರಾ ಒತ್ತಾಯ

ಪಿಟಿಐ
Published 4 ಅಕ್ಟೋಬರ್ 2020, 10:09 IST
Last Updated 4 ಅಕ್ಟೋಬರ್ 2020, 10:09 IST
ಪ್ರಿಯಾಂಕಾ ವಾದ್ರಾ
ಪ್ರಿಯಾಂಕಾ ವಾದ್ರಾ   

ಲಖನೌ: ಹಾಥರಸ್‌ನ ಅತ್ಯಾಚಾರಕ್ಕೊಳಗಾದ ದಲಿತ ಮಹಿಳೆಯ ಕುಟುಂಬದವರೊಂದಿಗೆ ಕೆಟ್ಟದಾಗಿ ನಡೆದುಕೊಂಡಿರುವ ಅಲ್ಲಿನ ಜಿಲ್ಲಾಧಿಕಾರಿಯನ್ನು ಕೂಡಲೇ ಅಮಾನತುಗೊಳಿಸಿ, ಇಡೀ ಪ್ರಕರಣದಲ್ಲಿ ಅವರ ಪಾತ್ರವಿರುವ ಕುರಿತು ತನಿಖೆ ನಡೆಸಬೇಕು ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ವಾದ್ರಾ ಒತ್ತಾಯಿಸಿದ್ದಾರೆ.

‘ಹಾಥರಸ್‌ ಜಿಲ್ಲಾಧಿಕಾರಿ ಸಂತ್ರಸ್ಥೆಯ ಕುಟುಂಬದವರೊಂದಿಗೆ ಬಹಳ ಕೆಟ್ಟದಾಗಿ ನಡೆದುಕೊಂಡಿರುವುದಾಗಿ ಸಂತ್ರಸ್ಥೆಯ ಕುಟುಂಬದವರು ಹೇಳಿದ್ದಾರೆ. ಇಂಥ ಅಧಿಕಾರಿಯನ್ನು ಯಾರು ರಕ್ಷಿಸುತ್ತಿದ್ದಾರೆ‘ ಎಂದು ಪ್ರಿಯಾಂಕಾ ಪ್ರಶ್ನಿಸಿದ್ದಾರೆ.

ಹಿಂದಿಯಲ್ಲಿ ಟ್ವೀಟ್‌ ಮಾಡಿರುವ ಅವರು, ‘ಅನ್ಯಾಯಕ್ಕೊಳಗಾದ ಕುಟುಂಬದವರು ಪ್ರಕರಣವನ್ನು ನ್ಯಾಯಾಂಗ ತನಿಖೆ ಒಪ್ಪಿಸಿ ಎಂದು ಒತ್ತಾಯಿಸುತ್ತಿರುವಾಗ, ಸರ್ಕಾರ ಈ ಪ್ರಕರಣವನ್ನು ಸಿಬಿಐ ಮತ್ತು ಎಸ್‌ಐಟಿ ತನಿಖೆಗೆ ವಹಿಸಿರುವ ಹಿಂದಿನ ಕಾರಣ ಏನು?‘ ಎಂದು ಅವರು ಪ್ರಶ್ನಿಸಿದ್ದಾರೆ.

ADVERTISEMENT

‘ಉತ್ತರ ಪ್ರದೇಶ ಸರ್ಕಾರ ಸ್ವಲ್ಪ ನಿದ್ದೆಯಿಂದ ಎಚ್ಚರಗೊಂಡು, ಸಂತ್ರಸ್ತೆಯ ಕುಟುಂಬದವರ ಸ್ಥಾನದಲ್ಲಿ ನಿಂತು ಯೋಚಿಸಬೇಕು‘ ಎಂದು ಒತ್ತಾಯಿಸಿದ್ದಾರೆ.‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.