ADVERTISEMENT

ರಾಜ್ಯದವರಿಗೆ ಉಚಿತ ಲಸಿಕೆ ಕೊಡಿಸುವ 'ಧಮ್‌’ ಇದೆಯೇ: ಸಿದ್ದರಾಮಯ್ಯ ಸವಾಲು

ಬಿಜೆಪಿ ಅಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ಗೆ ಪ್ರಶ್ನೆ ಮಾಡಿದ ಮಾಜಿ ಸಿಎಂ ಸಿದ್ದರಾಮಯ್ಯ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 23 ಅಕ್ಟೋಬರ್ 2020, 8:34 IST
Last Updated 23 ಅಕ್ಟೋಬರ್ 2020, 8:34 IST
ಸಿದ್ದರಾಮಯ್ಯ
ಸಿದ್ದರಾಮಯ್ಯ    

ಬೆಂಗಳೂರು: ಕರ್ನಾಟಕದಲ್ಲಿ ಕೊರೊನಾ ವೈರಸ್‌ ಭೀತಿಗೊಳಗಾಗಿರುವ ಜನರಿಗೆ ಲಸಿಕೆಯನ್ನು ಉಚಿತವಾಗಿ ಕೊಡಿಸುವ 'ಧಮ್' ಇದೆಯೇ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳೀನ್‌ ಕುಮಾರ್‌ ಕಟೀಲ್‌ ಅವರಿಗೆ ಪ್ರಶ್ನೆ ಮಾಡಿದ್ದಾರೆ.

ಬಿಹಾರ ವಿಧಾನಸಭೆ ಚುನಾವಣೆಗೆ ಗುರುವಾರ ಪ್ರಣಾಳಿಕೆ ಘೋಷಣೆ ಮಾಡಿರುವ ಬಿಜೆಪಿಯು, ಬಿಹಾರದ ಜನರಿಗೆ ಕೋವಿಡ್‌ ಲಸಿಕೆಯನ್ನು ಉಚಿತವಾಗಿ ನೀಡುವ ಭರವಸೆ ನೀಡಿದೆ.

ಈ ಹಿನ್ನೆಲೆಯಲ್ಲಿ ಶುಕ್ರವಾರ ಟ್ವೀಟ್‌ ಮಾಡಿರುವ ಮಾಜಿ ಸಿಎಂ ಸಿದ್ದರಾಮಯ್ಯ, ‘ಪ್ರಾಣ ರಕ್ಷಕ ಕೊರೊನಾ ಲಸಿಕೆಯನ್ನು ಬಿಹಾರ ರಾಜ್ಯಕ್ಕೆ ಉಚಿತವಾಗಿ ನೀಡುವ ಭರವಸೆ ನೀಡಿರುವ ನಮ್ಮ ರಾಜ್ಯದ ರಾಜ್ಯಸಭಾ ಸದಸ್ಯೆ ಮತ್ತು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರ ಔದಾರ್ಯದ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸುವಿರಾ ನಳೀನ್‌ ಕುಮಾರ್‌ ಕಟೀಲ್‌ ಅವರೇ,’ ಎಂದು ಅವರು ಮೊದಲಿಗೆ ಪ್ರಶ್ನೆ ಮಾಡಿದ್ದಾರೆ.

ADVERTISEMENT

‘ನಿರ್ಮಲಾ ಸೀತಾರಾಮನ್‌ ಅವರ ಮನವೊಲಿಸಿ, ನಿಮ್ಮದೇ ಪಕ್ಷ ಅಧಿಕಾರದಲ್ಲಿರುವ ಕರ್ನಾಟಕದದಲ್ಲಿ ಕೊರೊನಾದಿಂದ ಭೀತಿಗೊಳಗಾಗಿರುವ ಜನರಿಗೆ ಕೊರೊನಾ ಲಸಿಕೆಯನ್ನು ಉಚಿತವಾಗಿ ಕೊಡಿಸುವ 'ಧಮ್' (ಇದು ನಿಮ್ಮದೇ ಭಾಷೆ) ನಿಮಗಿದೆಯೇ ಕಟೀಲ್‌ ಅವರೇ?’ ಎಂದು ಅವರು ಸವಾಲು ಹಾಕಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.