ADVERTISEMENT

ನನ್ನ ಮೇಲೆ ಹಲ್ಲೆ ನಡೆದಿದೆ ಎಂಬುದಕ್ಕೆ ಸಾಕ್ಷ್ಯವಿದೆ: ಆಯಿಷಿ ಘೋಷ್‌ 

​ಪ್ರಜಾವಾಣಿ ವಾರ್ತೆ
Published 10 ಜನವರಿ 2020, 13:46 IST
Last Updated 10 ಜನವರಿ 2020, 13:46 IST
   

ನವದೆಹಲಿ: ದೆಹಲಿಯ ಜವಾಹರ್‌ಲಾಲ್ ನೆಹರು ವಿಶ್ವವಿದ್ಯಾಲಯದೊಳಗೆ ನುಗ್ಗಿ ಮುಸುಕುಧಾರಿಗಳು ದಾಂದಲೆ ನಡೆಸಿದ ಪ್ರಕರಣದಲ್ಲಿ ಜೆಎನ್‌ಯು ವಿದ್ಯಾರ್ಥಿ ಸಂಘದ ಅಧ್ಯಕ್ಷೆ ಆಯಿಷಿ ಘೋಷ್‌ ಶಂಕಿತ ಆರೋಪಿ ಎಂದು ದೆಹಲಿ ಪೊಲೀಸರು ಹೇಳಿದ್ದಾರೆ.

ಈ ಬಗ್ಗೆ ಸುದ್ದಿಗೋಷ್ಠಿ ನಡೆಸಿ ಪ್ರತಿಕ್ರಿಯಿಸಿದ ಆಯಿಷಿ, ದೆಹಲಿ ಪೊಲೀಸರು ತನಿಖೆ ನಡೆಸಲಿ. ನನ್ನ ಮೇಲೆ ಯಾವ ರೀತಿ ಹಲ್ಲೆ ನಡೆಯಿತು ಎಂಬುದಕ್ಕೆ ನನ್ನಲ್ಲಿಯೂ ಸಾಕ್ಷ್ಯವಿದೆ ಎಂದಿದ್ದಾರೆ.

ದಾಂದಲೆಯಲ್ಲಿ ಭಾಗಿಯಾಗಿದ್ದಾರೆ ಎಂಬ ಆರೋಪನ್ನು ನಿರಾಕರಿಸಿದ ಆಯಿಷಿ, ಪೊಲೀಸರ ಕ್ರಮವನ್ನು ಪ್ರಶ್ನಿಸಿದ್ದಾರೆ. ನಾನು ಆ ದಾಳಿಯಲ್ಲಿ ಭಾಗಿಯಾಗಿರಲಿಲ್ಲ. ಹಾಗಿದ್ದರೆ ಪೊಲೀಸರು ಸಾಕ್ಷ್ಯ ತೋರಿಸಲಿ. ನಾನು ಭಾಗಿಯಾಗಿದ್ದೇನೆ ಎಂದು ಸಾಬೀತು ಪಡಿಸಲು ಯಾವುದೇ ವಿಡಿಯೊಗಳು ಇಲ್ಲಎಂದಿದ್ದಾರೆ.
ಜನವರಿ 5ರಂದು ಮುಸುಕುಧಾರಿಗಳಾದ ದುಷ್ಕರ್ಮಿಗಳ ಗುಂಪೊಂದು ಜೆಎನ್‌ಯು ಕ್ಯಾಂಪಸ್‍‌ ಒಳಗಡೆ ನುಗ್ಗಿ ವಿದ್ಯಾರ್ಥಿ ಮತ್ತು ಶಿಕ್ಷಕರ ಮೇಲೆ ಹಲ್ಲೆ ನಡೆಸಿತ್ತು. ಈ ವೇಳೆ ಆಯಿಷಿ ಘೋಷ್ ಸೇರಿದಂತೆ ಹಲವರ ಮೇಲೆ ಗಂಭೀರ ಹಲ್ಲೆ ನಡೆದಿತ್ತು.

ದೇಶದ ಕಾನೂನು ವ್ಯವಸ್ಥೆ ಮೇಲೆ ನನಗೆ ಸಂಪೂರ್ಣ ನಂಬಿಕೆ ಇದೆ ಮತ್ತು ತನಿಖೆ ನಿಷ್ಪಕ್ಷವಾಗಿರುತ್ತದೆ. ನನಗೆ ನ್ಯಾಯ ಸಿಗಲಿದೆ. ಆದರೆ ದೆಹಲಿ ಪೊಲೀಸರು ಯಾಕೆ ಪಕ್ಷಪಾತ ತೋರಿಸುತ್ತಿದ್ದಾರೆ? ನಾನು ನೀಡಿದ ದೂರಿಗೆ ಎಫ್‌ಐಆರ್ ದಾಖಲಿಸಿಲ್ಲ. ನಾನು ಯಾವುದೇ ರೀತಿಯ ದಾಂದಲೆ ನಡೆಸಿಲ್ಲ ಎಂದಿದ್ದಾರೆ ಆಯಿಷಿ.
ಶುಕ್ರವಾರ ಸುದ್ದಿಗೋಷ್ಠಿ ನಡೆಸಿದ ದೆಹಲಿ ಪೊಲೀಸರು ಜೆಎನ್‌ಯುನಲ್ಲಿ ದಾಂದಲೆ ನಡೆಸಿದ 9 ಮಂದಿ ಆರೋಪಿಗಳ ಫೋಟೊ ಪ್ರಕಟಿಸಿದ್ದರು. ಇದರಲ್ಲಿ ಎಡಪಕ್ಷ ವಿದ್ಯಾರ್ಥಿ ಸಂಘಟನೆಯಾದ ಎಐಎಸ್‌ಎಯ ಏಳು ಮಂದಿ ಮತ್ತು ಎಬಿವಿಪಿ ಸಂಘಟನೆಯ ಇಬ್ಬರನ್ನು ಶಂಕಿತ ಆರೋಪಿಗಳು ಎಂದು ಗುರುತಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.