ADVERTISEMENT

ನಮಗೆ ಬಹುಮತ ಇದೆ: ರಾಜಸ್ಥಾನ ಮುಖ್ಯಮಂತ್ರಿ ಅಶೋಕ್‌ ಗೆಹ್ಲೋಟ್‌

ಪಿಟಿಐ
Published 24 ಜುಲೈ 2020, 12:13 IST
Last Updated 24 ಜುಲೈ 2020, 12:13 IST
ಅಶೋಕ್‌ ಗೆಹ್ಲೊಟ್‌
ಅಶೋಕ್‌ ಗೆಹ್ಲೊಟ್‌   

ನವದೆಹಲಿ: ‘ವಿಧಾನಸಭೆಯಲ್ಲಿ ಕಾಂಗ್ರೆಸ್‌ ಹಾಗೂ ಮಿತ್ರಪಕ್ಷಗಳಿಗೆ ಬಹುಮತ ಇದೆ. ಅಷ್ಟೇ ಅಲ್ಲ, ಪಕ್ಷದ ವಿರುದ್ಧ ಬಂಡಾಯವೆದ್ದು ಹೋಗಿರುವ ಶಾಸಕರಲ್ಲಿ ಕೆಲವರು ಪುನಃ ಪಕ್ಷಕ್ಕೆ ಮರಳಲು ಉತ್ಸುಕರಾಗಿದ್ದಾರೆ. ಆದರೆ ಅವರನ್ನು ಹರಿಯಾಣದಲ್ಲಿ ಬಂದಿಯಾಗಿಡಲಾಗಿದೆ’ ಎಂದು ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್‌ ಗೆಹ್ಲೋಟ್‌ ಹೇಳಿದ್ದಾರೆ.

‘ಕಾನೂನು ಹಾಗೂ ಸಂವಿಧಾನಬದ್ಧ ಎಲ್ಲಾ ಆಯ್ಕೆಗಳೂ ರಾಜ್ಯ ಸರ್ಕಾರದ ಮುಂದಿವೆ. ಅವುಗಳನ್ನು ಸಂದರ್ಭಕ್ಕೆ ತಕ್ಕಂತೆ ಬಳಸಿಕೊಳ್ಳಲಾಗುವುದು’ ಎಂದು ಅವರು ಸುದ್ದಿ ಸಂಸ್ಥೆಯ ಜತೆ ಮಾತನಾಡುತ್ತಾ ಶುಕ್ರವಾರ ಹೇಳಿದ್ದಾರೆ.

ವಿಧಾನಸಭೆಯ ಅಧಿವೇಶನವನ್ನು ಯಾವಾಗ ಏರ್ಪಡಿಸುತ್ತೀರಿ ಎಂಬ ಪ್ರಶ್ನೆಗೆ ಪ್ರತಿಕ್ರಿಯೆ ನೀಡುತ್ತಾ, ‘ನಮಗೆ ಬಹುಮತ ಇದೆ. ನಮ್ಮ ವಿರೋಧಿಗಳಿಗೂ ಇದು ಗೊತ್ತಿದೆ. ಈ ವಿಚಾರದಲ್ಲಿ ಕಾನೂನು ಮತ್ತು ಸಂವಿಧಾನದ ಮಾರ್ಗದಿಂದ ಹಿಂದೆ ಸರಿಯುವುದಿಲ್ಲ ಎಂದರು.

ADVERTISEMENT

ಶಾಸಕರ ಸಣ್ಣ ಗುಂಪೊಂದನ್ನು ಹೊರರಾಜ್ಯದ ಹೋಟೆಲ್‌ ಒಂದರಲ್ಲಿ ಬಂದಿಯಾಗಿಡಲಾಗಿದೆ ಎಂಬುದು ಎಲ್ಲರಿಗೂ ತಿಳಿದಿದೆ. ಆ ರಾಜ್ಯದ ಪೊಲೀಸರು ಹಾಗೂ ಬೌನ್ಸರ್‌ಗಳು ಅವರನ್ನು ಕಾಯುತ್ತಿದ್ದಾರೆ. ಈ ಶಾಸಕರು ಬಂಧನದಿಂದ ಹೊರಬಂದು ಮತ್ತೆ ಪಕ್ಷವನ್ನು ಸೇರಲು ಇಚ್ಛಿಸುತ್ತಿದ್ದಾರೆ ಎಂದು ತಿಳಿದುಬಂದಿದೆ. ಸ್ವಲ್ಪ ಸಮಯದಲ್ಲೇ ಇದೆಲ್ಲ ಸ್ಪಷ್ಟವಾಗಲಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಾ ತಿಳಿಸಿದರು.

ಸಚಿನ್‌ ಪೈಲಟ್‌ ಪಕ್ಷಕ್ಕೆ ಮರಳಿದರೆ ಅವರ ಸ್ಥಾನಮಾನ ಏನಾಗಿರುತ್ತದೆ ಎಂಬ ಪ್ರಶ್ನೆಗೆ ‘ಈ ಬಗ್ಗೆ ಪಕ್ಷದ ಹೈಕಮಾಂಡ್‌ ಮಾತ್ರ ಉತ್ತರ ನೀಡಬಲ್ಲದು. ಸಚಿನ್‌ ಕುರಿತಾಗಿ ಯಾವುದೇ ನಿರ್ಧಾರ ಕೈಗೊಳ್ಳುವುದು ಹೈಕಮಾಂಡ್‌ಗೆ ಬಿಟ್ಟ ವಿಚಾರ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.