ADVERTISEMENT

ನಾಯಿ ತಳಿಗೆ ನಿಷೇಧ: ಆಕ್ಷೇಪ ಆಲಿಸಲು ಕೇಂದ್ರಕ್ಕೆ ದೆಹಲಿ ಹೈಕೋರ್ಟ್ ಸೂಚನೆ

ಪಿಟಿಐ
Published 16 ಏಪ್ರಿಲ್ 2024, 14:05 IST
Last Updated 16 ಏಪ್ರಿಲ್ 2024, 14:05 IST
<div class="paragraphs"><p>ಸಾಂದರ್ಭಿಕ ಚಿತ್ರ&nbsp;</p></div>

ಸಾಂದರ್ಭಿಕ ಚಿತ್ರ 

   

ನವದೆಹಲಿ: ಮನುಷ್ಯನ ಜೀವಕ್ಕೆ ಎರವಾಗುವ ಮತ್ತು ಉಗ್ರ ಸ್ವರೂಪದ ನಾಯಿ ತಳಿ ಅಭಿವೃದ್ಧಿಪಡಿಸುವುದನ್ನು, ಸಾಕುವುದನ್ನು ನಿಷೇಧಿಸುವ ಮೊದಲು, ಕರಡು ಅಧಿಸೂಚನೆಗೆ ಭಾಗೀದಾರರ ಆಕ್ಷೇಪಗಳನ್ನು ಪರಿಗಣಿಸುವಂತೆ ದೆಹಲಿ ಹೈಕೋರ್ಟ್ ಕೇಂದ್ರ ಸರ್ಕಾರಕ್ಕೆ ಸೂಚಿಸಿದೆ.

ಈ ಮೊದಲು ಅಧಿಸೂಚನೆಯನ್ನು ಹೊರಡಿಸಿದ್ದಾಗ ಸರ್ಕಾರಿ ಸಂಸ್ಥೆಗಳನ್ನು ಹೊರತುಪಡಿಸಿ ಖಾಸಗಿ ಸಂಸ್ಥೆ ಅಥವಾ ಭಾಗೀದಾರರ ಅನಿಸಿಕೆ ಆಲಿಸಿರಲಿಲ್ಲ ಎಂದು ಕೇಂದ್ರವು ತಿಳಿಸಿದ ನಂತರ ಕೋರ್ಟ್ ಈ ಸೂಚನೆ ನೀಡಿದೆ.

ADVERTISEMENT

‘ನಾಯಿ ಮಾಲೀಕರೆಲ್ಲರ ಮೌಖಿಕ ಅಭಿಪ್ರಾಯಗಳನ್ನು ಆಲಿಸಲು ಸಾಧ್ಯವಿಲ್ಲದ ಕಾರಣ, ಕೇಂದ್ರ ಸರ್ಕಾರವು ತನ್ನ ವೆಬ್‌ಸೈಟ್‌ ಹಾಗೂ ಒಂದು ರಾಷ್ಟ್ರೀಯ ದಿನಪತ್ರಿಕೆಯ ಮೂಲಕ ಸಾರ್ವಜನಿಕ ನೋಟಿಸ್ ಹೊರಡಿಸಬೇಕು. ಪ್ರಸ್ತಾವಿತ ಅಧಿಸೂಚನೆಗೆ ಆಕ್ಷೇಪಗಳನ್ನು ಆಹ್ವಾನಿಸಬೇಕು’ ಎಂದು ಹಂಗಾಮಿ ಮುಖ್ಯ ನ್ಯಾಯಮೂರ್ತಿ ಮನಮೋಹನ್ ಮತ್ತು ನ್ಯಾಯಮೂರ್ತಿ ಮನಮೀತ್ ಪಿ.ಎಸ್. ಅರೋರ ಅವರು ಇದ್ದ ವಿಭಾಗೀಯ ಪೀಠವು ಹೇಳಿದೆ.

ಅಧಿಸೂಚನೆಯನ್ನು ಅಂತಿಮಗೊಳಿಸುವ ಮೊದಲು ಈ ಆಕ್ಷೇಪಣೆಗಳನ್ನು ಪರಿಗಣಿಸಬೇಕು ಎಂದು ಸೂಚಿಸಿದೆ.

ಉಗ್ರ ಸ್ವರೂಪದ 23 ಬಗೆಯ ನಾಯಿ ತಳಿಗಳಿಗೆ ನಿಷೇಧ ಹೇರಿ ಮಾರ್ಚ್ 12ರಂದು ಹೊರಡಿಸಿದ್ದ ಅಧಿಸೂಚನೆಯನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಗಳನ್ನು ಇತ್ಯರ್ಥಪಡಿಸುವ ಸಂದರ್ಭದಲ್ಲಿ ಪೀಠ ಈ ಸೂಚನೆ ನೀಡಿದೆ. ಮಾರ್ಚ್‌ 12ರ ಅಧಿಸೂಚನೆಯನ್ನು ಕರ್ನಾಟಕ ಹೈಕೋರ್ಟ್ ಏಪ್ರಿಲ್‌ 10ರಂದು ರದ್ದುಪಡಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.