ADVERTISEMENT

ಆಡಳಿತದಲ್ಲಿ ಹಸ್ತಕ್ಷೇಪ ಬೇಡ: ಹೈಕೋರ್ಟ್‌

ಪ್ರಜಾಪ್ರಭುತ್ವ ಸಿದ್ಧಾಂತ ಕಾಪಾಡಿ: ಕಿರಣ್‌ ಬೇಡಿಗೆ ಹೈಕೋರ್ಟ್‌ ಸಲಹೆ

​ಪ್ರಜಾವಾಣಿ ವಾರ್ತೆ
Published 30 ಏಪ್ರಿಲ್ 2019, 20:10 IST
Last Updated 30 ಏಪ್ರಿಲ್ 2019, 20:10 IST
ವಿ. ನಾರಾಯಣಸ್ವಾಮಿ, ಕಿರಣ್‌ ಬೇಡಿ
ವಿ. ನಾರಾಯಣಸ್ವಾಮಿ, ಕಿರಣ್‌ ಬೇಡಿ   

ಚೆನ್ನೈ: ಪುದುಚೇರಿಯಲ್ಲಿನ ಚುನಾಯಿತ ಸರ್ಕಾರದ ಆಡಳಿತದಲ್ಲಿ ಲೆಫ್ಟಿನೆಂಟ್‌ ಗವರ್ನರ್‌ ಕಿರಣ್‌ ಬೇಡಿ ಹಸ್ತಕ್ಷೇಪ ಮಾಡಬಾರದು ಎಂದು ಮದ್ರಾಸ್‌ ಹೈಕೋರ್ಟ್‌ ತೀರ್ಪು ನೀಡಿದೆ.

‘ಕೇಂದ್ರಾಡಳಿತ ಪ್ರದೇಶ ಪುದುಚೇರಿಯ ಆಡಳಿತಗಾರರೂ ಆಗಿರುವ ಕಿರಣ್‌ ಬೇಡಿ ಪ್ರತಿನಿತ್ಯದ ಆಡಳಿತದಲ್ಲಿ ಹಸ್ತಕ್ಷೇಪ ಮಾಡಬಾರದು. ಸಚಿವ ಸಂಪುಟ ಮತ್ತು ಮುಖ್ಯಮಂತ್ರಿ ಕೈಗೊಳ್ಳುವ ನಿರ್ಧಾರಗಳನ್ನು ಜಾರಿಗೊಳಿಸುವುದು ಕಾರ್ಯದರ್ಶಿಗಳು ಮತ್ತು ಇತರ ಅಧಿಕಾರಿಗಳ ಕರ್ತವ್ಯವಾಗಿದೆ. ಕೇಂದ್ರ ಸರ್ಕಾರ ಮತ್ತು ಆಡಳಿತಗಾರರು ಪ್ರಜಾಪ್ರಭುತ್ವ ಸಿದ್ಧಾಂತಕ್ಕೆ ಬದ್ಧರಾಗಿರಬೇಕು’ ಎಂದು ಮದ್ರಾಸ್‌ ಹೈಕೋರ್ಟ್‌ನ ಮದುರೆ ಪೀಠದ ನ್ಯಾಯಮೂರ್ತಿ ಆರ್‌. ಮಹಾದೇವನ್‌ ತೀರ್ಪು ನೀಡಿದ್ದಾರೆ.

‘ರಾಜ್ಯವಲ್ಲದಿದ್ದರೂ ಪುದುಚೇರಿ ಕೇಂದ್ರಾಡಳಿತ ಪ್ರದೇಶದ ಶಾಸಕಾಂಗವು ಒಂದು ರಾಜ್ಯದ ರೀತಿಯಲ್ಲೇ ಎಲ್ಲ ಅಧಿಕಾರಗಳನ್ನು ಹೊಂದಿದೆ. ಆಡಳಿತಗಾರರಿಗೆ ವಿಶೇಷ ಅಧಿಕಾರ ಇಲ್ಲ’ ಎಂದು ಸ್ಪಷ್ಟಪಡಿಸಿತು.

ADVERTISEMENT

‘ರಾಷ್ಟ್ರ ರಾಜಧಾನಿ ದೆಹಲಿಗೂ, ಪುದುಚೇರಿಗೂ ವ್ಯತ್ಯಾಸವಿದೆ. ಸುಪ್ರೀಂ ಕೋರ್ಟ್‌ ಈ ಬಗ್ಗೆ ಸ್ಪಷ್ಟ ತೀರ್ಪು ನೀಡಿದೆ. ದೆಹಲಿಗೆ ವಿಧಿಸಿರುವ ನಿರ್ಬಂಧಗಳು ಪುದುಚೇರಿಗೆ ಅನ್ವಯವಾಗುವುದಿಲ್ಲ’ ಎಂದು ನ್ಯಾಯಾಲಯ ತಿಳಿಸಿತು.

ಪುದುಚೇರಿಯಲ್ಲಿನ ಲೆಫ್ಟಿನೆಂಟ್‌ ಗವರ್ನರ್‌ ಅವರ ಅಧಿಕಾರ ವ್ಯಾಪ್ತಿಯ ಬಗ್ಗೆ 2017ರಲ್ಲಿ ಕೇಂದ್ರ ಸರ್ಕಾರ ಹೊರಡಿಸಿದ್ದ ಆದೇಶವನ್ನು ನ್ಯಾಯಾಲಯವು ಇದೇ ಸಂದರ್ಭದಲ್ಲಿ ತಳ್ಳಿ ಹಾಕಿತು.

ಆಡಳಿತದಲ್ಲಿ ಹಸ್ತಕ್ಷೇಪ ಮಾಡುವ ಅಧಿಕಾರ ಲೆಫ್ಟಿನೆಂಟ್‌ ಗವರ್ನರ್‌ಗೆ ಇದೆ ಎಂದು 2017ರ ಜನವರಿ 27 ಮತ್ತು ಜೂನ್‌ 16ರಂದು ಕೇಂದ್ರ ಸರ್ಕಾರ ಆದೇಶ ಹೊರಡಿಸಿತ್ತು. ಇದನ್ನು ಪ್ರಶ್ನಿಸಿ ಕಾಂಗ್ರೆಸ್‌ ಶಾಸಕ ಕೆ. ಲಕ್ಷ್ಮೀನಾರಾಯಣನ್‌ ಅರ್ಜಿ ಸಲ್ಲಿಸಿದ್ದರು.

ಆಡಳಿತದಲ್ಲಿ ಬೇಡಿ ಹಸ್ತಕ್ಷೇಪ ಮಾಡುತ್ತಿದ್ದಾರೆ ಎಂದು ಆರೋಪಿಸಿ ಪುದುಚೇರಿ ಮುಖ್ಯಮಂತ್ರಿ ವಿ. ನಾರಾಯಣಸ್ವಾಮಿ ಅವರು ಮೂರು ತಿಂಗಳ ಹಿಂದೆ ರಾಜ್‌ ನಿವಾಸದ ಮುಂದೆ ಐದು ದಿನಗಳ ಕಾಲ ಧರಣಿ ನಡೆಸಿದ್ದರು.

ಅಧಿಕಾರ ವ್ಯಾಪ್ತಿಯ ಬಗ್ಗೆ ನಾರಾಯಣಸ್ವಾಮಿ ಮತ್ತು ಬೇಡಿ ನಡುವೆ ಹಲವು ಬಾರಿ ಜಟಾಪಟಿ ನಡೆದಿತ್ತು. ಕೇಂದ್ರ ಸರ್ಕಾರ ಬೇಡಿ ಅವರಿಗೆ ಬೆಂಬಲ ಸೂಚಿಸಿತ್ತು.

*
ಪ್ರಜಾಪ್ರಭುತ್ವಕ್ಕೆ ಜಯ ಸಂದಿದೆ. ಕಿರಣ್‌ ಬೇಡಿ ಅವರಿಗೆ ಸ್ವತಂತ್ರ ಅಧಿಕಾರ ಇಲ್ಲ. ಚುನಾಯಿತ ಸರ್ಕಾರದ ಜತೆಯೇ ಅವರು ಕಾರ್ಯನಿರ್ವಹಿಸಬೇಕು.
-ವಿ. ನಾರಾಯಣಸ್ವಾಮಿ, ಪುದುಚೇರಿ ಮುಖ್ಯಮಂತ್ರಿ

*
ನ್ಯಾಯಾಲಯದ ತೀರ್ಪು ಪರಿಶೀಲಿಸಿ, ಮುಂದಿನ ನಿರ್ಧಾರ ಕೈಗೊಳ್ಳುತ್ತೇನೆ. ಸದ್ಯ ಅಗತ್ಯ ಕಡತಗಳ ಪರಿಶೀಲಿಸುವ ಕಾರ್ಯದಲ್ಲಿ ತೊಡಗಿದ್ದೇನೆ.
-ಕಿರಣ್‌ ಬೇಡಿ, ಲೆಫ್ಟಿನೆಂಟ್‌ ಗವರ್ನರ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.