ADVERTISEMENT

ಮರೀನಾ ಬೀಚ್‌ನಲ್ಲೇ ಕರುಣಾನಿಧಿ ಅಂತ್ಯಕ್ರಿಯೆ: ಮದ್ರಾಸ್‌ ಹೈಕೋರ್ಟ್ ತೀರ್ಪು

ವಿವಾದಕ್ಕೆ ತೆರೆ

​ಪ್ರಜಾವಾಣಿ ವಾರ್ತೆ
Published 8 ಆಗಸ್ಟ್ 2018, 5:26 IST
Last Updated 8 ಆಗಸ್ಟ್ 2018, 5:26 IST
ನಟ ಕಮಲಹಾಸನ್ ಅವರು ಕರುಣಾನಿಧಿ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದರು (ಎಎನ್‌ಐ ಚಿತ್ರ)
ನಟ ಕಮಲಹಾಸನ್ ಅವರು ಕರುಣಾನಿಧಿ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದರು (ಎಎನ್‌ಐ ಚಿತ್ರ)   

ಚೆನ್ನೈ: ಮರೀನಾ ಬೀಚ್‌ನಲ್ಲೇ ಕರುಣಾನಿಧಿ ಅವರ ಅಂತ್ಯಕ್ರಿಯೆ ನಡೆಸಬಹುದು ಎಂದು ಮದ್ರಾಸ್ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. ಇದರೊಂದಿಗೆ, ಅಂತ್ಯಕ್ರಿಯೆ ನಡೆಸುವ ಜಾಗದ ವಿವಾದಕ್ಕೆ ತೆರೆ ಬಿದ್ದಿದೆ.

ಮರೀನಾ ಬೀಚ್‌ನಲ್ಲಿರುವ ಅಣ್ಣಾ ಸ್ಮಾರಕದ ಬಳಿ ಕರುಣಾನಿಧಿ ಅವರ ಅಂತ್ಯಸಂಸ್ಕಾರಕ್ಕೆ ಸ್ಥಳಾವಕಾಶ ನೀಡಲಾಗದು ಎಂದು ತಮಿಳುನಾಡು ಸರ್ಕಾರ ಮಂಗಳವಾರ ಹೇಳಿತ್ತು. ಇದಕ್ಕೆ ಕಾನೂನಿನ ತೊಡಕು ಕಾರಣ ಎಂದೂ ಹೇಳಿತ್ತು. ಹೀಗಾಗಿ ಡಿಎಂಕೆ ಕೋರ್ಟ್‌ ಮೆಟ್ಟಿಲೇರಿತ್ತು.

ನಾವು ಕೇವಲ ಅಂತ್ಯಸಂಸ್ಕಾರಕ್ಕಷ್ಟೇ ಅಲ್ಲಿ ಅವಕಾಶ ನೀಡುವಂತೆ ಕೇಳುತ್ತಿದ್ದೇವೆ ಎಂದು ಡಿಎಂಕೆ ವಕೀಲ ವಿಲ್ಸನ್ ವಾದ ಮಂಡಿಸಿದ್ದಾರೆ. ಆದರೆ, ಹಾಲಿ ಮುಖ್ಯಮಂತ್ರಿಗಳು ನಿಧನರಾದರಷ್ಟೇ ಮರೀನಾ ಬೀಚ್‌ ಬಳಿ ಅಂತ್ಯಸಂಸ್ಕಾರಕ್ಕೆ ಅನುಮತಿ ನೀಡಬಹುದು ಎಂದು ಸರ್ಕಾರದ ಪರ ವಕೀಲರು ವಾದಿಸಿದ್ದಾರೆ.

ರಾತ್ರಿಯೂ ನಡೆದಿತ್ತು ವಿಚಾರಣೆ: ಹಂಗಾಮಿ ಮುಖ್ಯ ನ್ಯಾಯಮೂರ್ತಿ ಹುಲುವಾಡಿ ಜಿ. ರಮೇಶ್‌ ನೇತೃತ್ವದ ನ್ಯಾಯಪೀಠ ತಡರಾತ್ರಿ 1 ಗಂಟೆಗೆ ವಿಚಾರಣೆ ನಡೆಸಿತ್ತು. ಈ ವೇಳೆ, ಮರೀನಾ ಬೀಚ್‌ನಲ್ಲಿ ಅಂತ್ಯಸಂಸ್ಕಾರ ನಡೆಸುವುದಕ್ಕೆ ಸಂಬಂಧಿಸಿ ಬಾಕಿ ಇರುವ ಎಲ್ಲ ಅರ್ಜಿಗಳನ್ನು ವಜಾಗೊಳಿಸಿತ್ತು. ನಂತರ ವಿಚಾರಣೆಯನ್ನು ಬೆಳಿಗ್ಗೆ 8 ಗಂಟೆಗೆ ಮುಂದೂಡಿತ್ತು.

ಭಾರತ ರತ್ನಕ್ಕೆ ಆಗ್ರಹ

ಕರುಣಾನಿಧಿಯವರಿಗೆ ಭಾರತ ರತ್ನ ಘೋಷಿಸಬೇಕು ಎಂದು ವಿದುತಲೈ ಚಿರುತೈಗಲ್ ಕಟ್ಚಿ ಪಕ್ಷದ ಮುಖ್ಯಸ್ಥ ತೊಲ್ ತಿರುಮವಲವನ್ ಆಗ್ರಹಿಸಿದ್ದಾರೆ. ಜತೆಗೆ, ’ಅಣ್ಣಾ ಸಮಾಧಿ’ ಬಳಿ ಕರುಣಾನಿಧಿ ಸ್ಮಾರಕ ನಿರ್ಮಿಸಬೇಕು ಎಂದೂ ಒತ್ತಾಯಿಸಿದ್ದಾರೆ.

ಇನ್ನಷ್ಟು...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.