ADVERTISEMENT

‘ಬ್ಲೂ ಟಿಕ್‌’ಗಾಗಿ ಕೋರ್ಟ್‌ ಮೊರೆ: ಸಿಬಿಐ ಮಾಜಿ ನಿರ್ದೇಶಕನಿಗೆ ದಂಡ, ಅರ್ಜಿ ವಜಾ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 17 ಮೇ 2022, 16:16 IST
Last Updated 17 ಮೇ 2022, 16:16 IST
ಎಂ. ನಾಗೇಶ್ವರ್‌ ರಾವ್
ಎಂ. ನಾಗೇಶ್ವರ್‌ ರಾವ್   

ನವದೆಹಲಿ: ತಮ್ಮ ಟ್ವಿಟರ್‌ ಖಾತೆಯ ‘ಬ್ಲೂ ಟಿಕ್‌’ (ಅಧಿಕೃತ ಮುದ್ರೆ) ಮರುಸ್ಥಾಪನೆ ಕೋರಿ ಸಿಬಿಐನ ಮಾಜಿ ನಿರ್ದೇಶಕ ಎಂ. ನಾಗೇಶ್ವರ್‌ ರಾವ್‌ ಅವರು ಸಲ್ಲಿಸಿದ್ದ ಅರ್ಜಿಯನ್ನು ತಿರಸ್ಕರಿಸಿರುವ ದೆಹಲಿ ಹೈಕೋರ್ಟ್‌, ₹10 ಸಾವಿರ ದಂಡ ವಿಧಿಸಿದೆ.

ನಾಗೇಶ್ವರ್‌ ರಾವ್‌ ಅವರು ಏಪ್ರಿಲ್‌ 7 ರಂದು ಇದೇ ರೀತಿಯ ಅರ್ಜಿ ಸಲ್ಲಿಸಿದ್ದರು. ಈ ವಿಚಾರದಲ್ಲಿ ಮಧ್ಯಪ್ರವೇಶಿಸಲು ನಿರಾಕರಿಸಿದ್ದ ಹೈಕೋರ್ಟ್‌ ಟ್ವಿಟರ್‌ ಸಂಸ್ಥೆಯನ್ನು ಸಂಪರ್ಕಿಸುವಂತೆ ಸೂಚಿಸಿತ್ತು.

ಆದರೆ, ಈ ವರೆಗೆ ಟ್ವಿಟರ್‌ ಬ್ಲೂ ಟಿಕ್‌ ಸಿಕ್ಕಿಲ್ಲ ಎಂದು ಅವರು ಮರು ಅರ್ಜಿ ಸಲ್ಲಿಸಿದ್ದರು.

ADVERTISEMENT

‘ನಾವು ಏಪ್ರಿಲ್ 7 ರಂದು ಆದೇಶವನ್ನು ನೀಡಿದ್ದೇವೆ. ತಕ್ಷಣವೇ ನ್ಯಾಯಾಲಯಕ್ಕೆ ಬರುವಂಥದ್ದು ಏನಿದೆ? ನಿಮ್ಮ ಕಕ್ಷಿದಾರರಿಗೆ ಸಾಕಷ್ಟು ಬಿಡುವಿರುವಂತಿದೆ. ನೀವು ನಮ್ಮಿಂದ ಉಡುಗೊರೆ ಬಯಸುವಿರಾ’ ಎಂದು ನ್ಯಾಯಾಲಯವು ಟೀಕಿಸಿತು.

ಅಂತಿಮವಾಗಿ ನಾಗೇಶ್ವರ್‌ ರಾವ್‌ ಅವರಿಗೆ ₹10 ಸಾವಿರ ದಂಡ ವಿಧಿಸಿ ಅರ್ಜಿಯನ್ನು ತಿರಸ್ಕರಿಸಿತು.

ಟ್ವಿಟರ್‌ನಲ್ಲಿನ ಅವರ ಖಾತೆಯು ಬ್ಲೂ ಟಿಕ್ ಅನ್ನು ಹೊಂದಿತ್ತು. ಆದರೆ, ಅದನ್ನು ಮಾರ್ಚ್ 2022 ರಲ್ಲಿ ತೆಗೆದುಹಾಕಲಾಗಿದೆ ಎಂದು ನಾಗೇಶ್ವರ್‌ ರಾವ್‌ ತಮ್ಮ ಅರ್ಜಿಯಲ್ಲಿ ಹೇಳಿದ್ದರು.

ಟ್ವಿಟರ್, ಫೇಸ್‌ಬುಕ್‌, ಇನ್‌ಸ್ಟಾಗ್ರಾಮ್ ಮುಂತಾದ ಸಾಮಾಜಿಕ ಮಾಧ್ಯಮಗಳ ಬಳಕೆದಾರರ ಕುಂದುಕೊರತೆಗಳು ಅಥವಾ ಬ್ಲೂಟಿಕ್‌ಗೆ ಸಂಬಂಧಿಸಿದ ದೂರುಗಳತ್ತ ಗಮನಹರಿಸಲು ಕೇಂದ್ರದ ಸಂಬಂಧಿತ ಸಚಿವಾಲಯದಲ್ಲಿ ಅಧಿಕಾರಿಗಳನ್ನು ನಿಯೋಜಿಸಲು ಕೇಂದ್ರಕ್ಕೆ ನಿರ್ದೇಶನ ನೀಡಬೇಕೆಂದು ನಾಗೇಶ್ವರ್‌ ರಾವ್ ತಮ್ಮ ಅರ್ಜಿಯಲ್ಲಿ ಕೋರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.