ADVERTISEMENT

ಗಂಭೀರ ಸ್ಥಿತಿಯಲ್ಲಿದ್ದರೂ ಸೇತುವೆ ಬಳಕೆಗೆ ಅನುಮತಿಸಿದ್ದು ಏಕೆ: ಹೈಕೋರ್ಟ್‌

ಮೊರ್ಬಿ ತೂಗುಸೇತುವೆ ದುರಂತ ಪ್ರಕರಣ

ಪಿಟಿಐ
Published 16 ನವೆಂಬರ್ 2022, 15:46 IST
Last Updated 16 ನವೆಂಬರ್ 2022, 15:46 IST
.ಸಾಂದರ್ಭಿಕ ಚಿತ್ರ
.ಸಾಂದರ್ಭಿಕ ಚಿತ್ರ   

ಅಹಮದಾಬಾದ್‌: ಮೊರ್ಬಿ ತೂಗುಸೇತುವೆ ಗಂಭೀರ ಸ್ಥಿತಿಯಲ್ಲಿದೆ ಎಂದು ತಿಳಿದಿದ್ದರೂ ಅದರ ದುರಸ್ತಿಗೂ ಮುನ್ನ, ಅಂದರೆ 2021ರ ಡಿಸೆಂಬರ್‌ 29ರಿಂದ 2022ರ ಮಾರ್ಚ್‌7ರವರೆಗೆ ಜನರ ಬಳಕೆಗೆ ಮುಕ್ತಗೊಳಿಸಿದ್ದು ಏಕೆ ಎಂದು ಗುಜರಾತ್‌ ಹೈಕೋರ್ಟ್‌ ಬುಧವಾರ ಮೊರ್ಬಿ ಪುರಸಭೆಯನ್ನು ಪ್ರಶ್ನಿಸಿದೆ.

ಬ್ರಿಟಿಷರ ಕಾಲದ ಈ ತೂಗುಸೇತುವೆ ನವೀಕರಣದ ನಂತರ ಬಳಕೆಗೆ ಮುಕ್ತವಾದ ಐದು ದಿನಗಳಲ್ಲಿಯೇ (ಅಕ್ಟೋಬರ್‌ 30) ಕುಸಿದಿತ್ತು. ಈ ದುರಂತದಲ್ಲಿ 135 ಜನರು ಮೃತಪಟ್ಟಿದ್ದರು.

ಈ ಕುರಿತು ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡು, ವಿಚಾರಣೆ ಆರಂಭಿಸಿರುವ ನ್ಯಾಯಮೂರ್ತಿಗಳಾದ ಅರವಿಂದ್‌ ಕುಮಾರ್‌ ಮತ್ತು ಅಶುತೋಷ್‌ ಶಾಸ್ತ್ರಿ ಅವರನ್ನು ಒಳಗೊಂಡ ವಿಭಾಗೀಯ ಪೀಠವು, ಯಾವುದೇ ಅನುಮೋದನೆ ಇಲ್ಲದಿದ್ದರೂ ಅಜಂತಾ ಕಂಪನಿಗೆ (ಒರೆವಾ ಗ್ರೂಪ್‌) ಸೇತುವೆ ಬಳಕೆ ಸಂಬಂಧ ಅನುಮತಿ ನೀಡಲು ಕಾರಣಗಳೇನು ಎಂದು ಕೇಳಿದೆ.

ADVERTISEMENT

‘ಸೇತುವೆಯ ಸ್ಥಿತಿ ಗಂಭೀರವಾಗಿದೆ ಎಂದು 2021ರ ಡಿಸಂಬರ್‌ 29ರಂದು ಮೊರ್ಬಿ ಪುರಸಭೆಯ ಮುಖ್ಯ ಅಧಿಕಾರಿಗೆ ಮಾಹಿತಿ ನೀಡಿದ್ದ ಅಜಂತಾ ಕಂಪನಿಯು, ಸೇತುವೆಯ ನಿರ್ವಹಣೆ ಕುರಿತು ಒಪ್ಪಂದದ ಪ್ರಕಾರ ಮುಂದಿನ ಕ್ರಮ ತೆಗೆದುಕೊಳ್ಳುವಂತೆ ತಿಳಿಸಿತ್ತು’ ಎಂದು ಪುರಸಭೆಯು ಬುಧವಾರ ಸಲ್ಲಿಸಿರುವ ಪ್ರಮಾಣಪತ್ರದಲ್ಲಿ ಉಲ್ಲೇಖಿಸಿದೆ.

‘ಇಷ್ಟೆಲ್ಲ ಮಾಹಿತಿ ಇದ್ದರೂ ಸೇತುವೆ ಬಳಕೆಗೆ ಅಜಂತಾ ಕಂಪನಿಗೆ ಅನುಮತಿ ನೀಡಿದ ಕುರಿತ ಪ್ರಮಾಣ ಪತ್ರ ಸಲ್ಲಿಸುವಂತೆ’ ಪೀಠವು ಮೊರ್ಬಿ ಪುರಸಭೆಗೆ ಸೂಚಿಸಿತು. ಅಲ್ಲದೆ ಮುಂದಿನ ವಿಚಾರಣೆ ವೇಳೆ ಪುರಸಭೆಯ ಮುಖ್ಯ ಅಧಿಕಾರಿ ನ್ಯಾಯಾಲಯದಲ್ಲಿ ಹಾಜರಿರಬೇಕು ಎಂದು ನಿರ್ದೇಶಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.