ADVERTISEMENT

ಪಿಎಂ ಭೇಟಿಯಾದ ಸಿಎಂ: ಮರು ಆಯ್ಕೆಗೆ ಅಭಿನಂದನೆ, ಬರ ಪರಿಹಾರಕ್ಕೆ ಮನವಿ

​ಪ್ರಜಾವಾಣಿ ವಾರ್ತೆ
Published 15 ಜೂನ್ 2019, 7:04 IST
Last Updated 15 ಜೂನ್ 2019, 7:04 IST
   

ನವದೆಹಲಿ: ಮುಖ್ಯಮಂತ್ರಿ ಎಚ್‌.ಡಿ ಕುಮಾರಸ್ವಾಮಿ ಅವರು ಶನಿವಾರ ನವದೆಹಲಿಯ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರನ್ನು ಭೇಟಿಯಾದರು. ಎರಡನೇ ಬಾರಿಗೆ ಪ್ರಧಾನಿಯಾಗಿ ನೇಮಕವಾಗಿದ್ದಕ್ಕೆ ಶುಭಾಶಯ ಕೋರಿದರು.

ನೀತಿ ಆಯೋಗದ ಸಭೆಯಲ್ಲಿ ಭಾಗವಹಿಸಲೆಂದು ಮುಖ್ಯಮಂತ್ರಿ ಎಚ್‌.ಡಿ ಕುಮಾರಸ್ವಾಮಿ ಅವರು ಶನಿವಾರ ದೆಹಲಿ ಪ್ರವಾಸ ಕೈಗೊಂಡಿದ್ದಾರೆ. ಈ ವೇಳೆ ಅವರು ಪ್ರಧಾನ ಮಂತ್ರಿಗಳನ್ನು ಭೇಟಿಯಾಗಿದ್ದಾರೆ.

ಈ ಸಂದರ್ಭದಲ್ಲಿ ಅವರು ರಾಜ್ಯದಲ್ಲಿ ತಲೆದೋರಿರುವ ಬರ ಪರಿಸ್ಥಿತಿ, ನರೇಗಾ ಬಾಕಿ ಅನುದಾನ ಬಿಡುಗಡೆ ಹಾಗೂ ಸಾಲ ಮನ್ನಾ ಯೋಜನೆಯ ಯಶಸ್ವಿ ಅನುಷ್ಠಾನದ ಕುರಿತು ಚರ್ಚಿಸಿದರು.

ADVERTISEMENT

ರಾಜ್ಯದಲ್ಲಿ ಈ ವರ್ಷವೂ ಬರದ ಛಾಯೆ ಇದ್ದು ಶೇ. 45 ರಷ್ಟು ಮಳೆ ಕೊರತೆ ಇದೆ. ಈ ಹಿನ್ನೆಲೆಯಲ್ಲಿ ಕೇಂಂದ್ರ ಸರ್ಕಾರ ರಾಜ್ಯದ ನೆರವಿಗೆ ಮುಂದಾಗಬೇಕು ಎಂದು ಮನವಿ ಮಾಡಿದರು.

ರಾಜ್ಯದಲ್ಲಿ ಮಹಾತ್ಮಾ ಗಾಂಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಲಾಗುತ್ತಿದ್ದು, ಈ ಯೋಜನೆಯಡಿ ರಾಜ್ಯ ಸರ್ಕಾರ ಕೂಲಿಯ ಬಾಬ್ತು ಪಾವತಿಸಿದ 1200 ಕೋಟಿ ರೂ. ಮುಂಗಡ ಹಣವೂ ಸೇರಿದಂತೆ ಸುಮಾರು 1500 ಕೋಟಿ ರೂ. ಅನುದಾನ ಬಾಕಿ ಇದೆ. ಇದನನ್ನು ಕೂಡಲೇ ಬಿಡುಗಡೆ ಮಾಡಲು ಕ್ರಮ ವಹಿಸುವಂತೆ ಕೋರಿದರು.

ಸಾಲ ಮನ್ನಾ ಯೋಜನೆಯನ್ನು ಅತ್ಯಂತ ಯಶಸ್ವಿಯಾಗಿ, ಪಾರದರ್ಶಕವಾಗಿ ಅನುಷ್ಠಾನಗೊಳಿಸಲಾಗಿದೆ. ರಾಜ್ಯದ ವಾಣಿಜ್ಯ ಬ್ಯಾಂಕುಗಳ 9 ಲಕ್ಷ ಹಾಗೂ ಸಹಕಾರಿ ಬ್ಯಾಂಕುಗಳ 14 ಲಕ್ಷ ಫಲಾನುಭವಿಗಳ ಒಟ್ಟು 12830 ಕೋಟಿ ರೂಪಾಯಿ ಬೆಳೆ ಸಾಲ ಮನ್ನಾ ಮಾಡಲು ಕ್ರಮ ವಹಿಸುವುದಾಗಿ ಮುಖ್ಯಮಂತ್ರಿಗಳು ವಿವರಿಸಿದರು.

ಇದಕ್ಕೂ ಮೊದಲು ಸಿಎಂ ಎಚ್‌ಡಿಕೆ ಅವರು, ನೀತಿ ಆಯೋಗದ ಸಭೆಗಾಗಿ ಮಾಜಿ ಪ್ರಧಾನಿ ಮನಮೋಹನ್‌ ಸಿಂಗ್‌ ಅವರೊಂದಿಗೆ ಪೂರ್ವಭಾವಿ ಸಭೆ ನಡೆಸಿದರು. ಎಐಸಿಸಿ ಪ್ರಧಾನ ಕಚೇರಿಯಲ್ಲಿ ಈ ಸಭೆ ನಡೆಯಿತು. ಸಭೆಯಲ್ಲಿ ಮನಮೋಹನ್‌ ಸಿಂಗ್‌ ಅವರಿಂದ ಹಲವು ಸಲಹೆಗಳನ್ನು ಅವರು ಪಡೆದರು. ಈ ಸಭೆಯಲ್ಲಿಮಧ್ಯಪ್ರದೇಶ ಮುಖ್ಯಮಂತ್ರಿ ಕಮಲ್‍ನಾಥ್, ಪುದುಚೇರಿ ಮುಖ್ಯಮಂತ್ರಿ ನಾರಾಯಣಸ್ವಾಮಿ, ರಾಜಸ್ಥಾನ್ ಅಶೋಕ್ ಗೆಹ್ಲೊಟ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.